Site icon Vistara News

Soura Shakti Mela: ಮುಂದಿನ 7 ವರ್ಷದಲ್ಲಿ 60 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ: ಸಿಎಂ

60,000 MW power generation target in next 7 years says Siddaramaiah

ಬೆಂಗಳೂರು: ಮುಂದಿನ 7 ವರ್ಷಗಳಲ್ಲಿ ರಾಜ್ಯದಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ (Soura Shakti Mela) ಉತ್ಪಾದನೆಯ ಗುರಿ ಹೊಂದಿದ್ದೇವೆ. ಈ ದಿಕ್ಕಿನಲ್ಲಿ ನಮ್ಮ ಸಿದ್ಧತೆಗಳು ಆಗಲೇ ಆರಂಭಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿ ಆಯೋಜಿಸಿದ್ದ ರೈತ ಸೌರಶಕ್ತಿ ಮೇಳ (Soura Shakti Mela) ಉದ್ಘಾಟಿಸಿದ ಬಳಿಕ ಕುಸುಮ್ “ಬಿ” ಮತ್ತು “ಸಿ” ಯೋಜನೆಗಳ ಚಾಲನೆ ನೀಡಿ, ವಿದ್ಯುತ್ ಉಪಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿ ಸಿಎಂ ಮಾತನಾಡಿದರು.

ದೇಶದಲ್ಲೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ಎರಡನೇ ರಾಜ್ಯ ಕರ್ನಾಟಕ. ಹೀಗಾಗಿ ಒಣಭೂಮಿಯ ಕೃಷಿಗೆ ಆದ್ಯತೆ ನೀಡಿ ಸಂಶೋಧನೆಗಳು ನಡೆಯಬೇಕು. ಜನಸಂಖ್ಯೆ ಹೆಚ್ಚಾಗಿ ರೈತರ ಬೆಳೆಗಳ ಇಳುವರಿ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ಸಮಗ್ರ ಕೃಷಿಗೆ ಹೆಚ್ವಿನ ಬೆಂಬಲ ನೀಡುವ ಸಲುವಾಗಿ ಕೃಷಿಯ ಉಪಕಸುಬುಗಳ ಬೆಳವಣಿಗೆಗೆ ಸರ್ಕಾರ ಸಂಪೂರ್ಣ ಸಹಕಾರ, ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | Water Crisis : ಬೆಂಗಳೂರಿಗರೇ ಭಯ ಬೇಡ; ಕುಡಿಯುವ ನೀರಿನ ಕೊರತೆ ಇಲ್ಲ, ಆದರೆ ..

ಪ್ರಸ್ತುತ ರಾಜ್ಯದಲ್ಲಿ 32 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮುಂದಿನ 7 ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹಮ್ಮಿಕೊಂಡಿದ್ದೇವೆ. ಸೋಲಾರ್ ವಿದ್ಯುತ್ ಪಂಪ್ ಸೆಟ್ ಮತ್ತು ಪ್ಯಾನಲ್‌ಗಳಿಗೆ ರಾಜ್ಯ ಸರ್ಕಾರದ ಸಬ್ಸಿಡಿ ಮೊತ್ತವನ್ನು ಶೇ.30 ರಿಂದ ಶೇ.50 ಕ್ಕೆ ಹೆಚ್ಚಿಸಿದೆ. ನಮ್ಮ ಸರ್ಕಾರದ ಈ ಸೌಲಭ್ಯವನ್ನು ರೈತರು ಹೆಚ್ಚೆಚ್ಚು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸೌರವಿದ್ಯುತ್ ಬಳಕೆಯನ್ನು ಹೆಚ್ಚೆಚ್ಚು ಮಾಡುವ ಮೂಲಕ ವಿದ್ಯುತ್ ಕೊರತೆಯನ್ನು ನೀಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಬಗ್ಗೆ ರೈತರಿಗೆ ಹೆಚ್ಚೆಚ್ಚು ಮನವರಿಕೆ ಮಾಡಿಕೊಡಬೇಕು. ಇವತ್ತಿನವರೆಗೂ ನಾಡಿನ 1.20 ಕೋಟಿ ಕುಟುಂಬಗಳು ಬಳಸುತ್ತಿರುವ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್‌ಗಾಗಿ ರಾಜ್ಯ ಸರ್ಕಾರ ಉಚಿತ ವಿದ್ಯುತ್ತಿನ ಬಾಬ್ತು 5320 ಕೋಟಿ ರೂ.ಗಳನ್ನು ಇಂಧನ ಇಲಾಖೆಗೆ ನೀಡಿದೆ. ನಮ್ಮ ಜನರಿಗೆ ಜೀರೋ ಬಿಲ್ ಬರುತ್ತಿದೆ. ನಮ್ಮ ಸರ್ಕಾರ ಈ ಜನೋಪಯೋಗಿ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಮುಂದುವರಿಸಲಿದೆ ಎಂದು ಪುನರುಚ್ಚರಿಸಿದರು.

ಸೌರಶಕ್ತಿ ಕ್ಷೇತ್ರದ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ರೈತರ ಮನೆ ಬಾಗಿಲಿಗೆ ತಲುಪಿ, ಕೃಷಿಯಲ್ಲಿ ಬಳಕೆ ಆದರೆ ಮಾತ್ರ ಸಾರ್ಥಕತೆ ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ನಡೆದು ಅವು ರೈತರನ್ನು ಮುಟ್ಟಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರೈತರು ಹೆಚ್ಚೆಚ್ಚು ಆಹಾರ ಬೆಳೆದು ವಿದೇಶಕ್ಕೂ ರಫ್ತು ಮಾಡುವಂತಾಗಬೇಕು. ಇದಕ್ಕೆ ನಮ್ಮ ಸರ್ಕಾರ ಸಕಲ ನೆರವು ನೀಡುತ್ತದೆ ಎಂದರು.

ಸೋಲಾರ್ ವಿದ್ಯುತ್‌ಗೆ ಕೇಂದ್ರ ಸರ್ಕಾರ ಕೇವಲ ಶೇ.30 ರಷ್ಟು ಸಬ್ಸಿಡಿ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರ ಶೇ.50 ರಷ್ಟು ಸಬ್ಸಿಡಿ ನೀಡುತ್ತಿದೆ. ಆದರೂ ಹೆಸರು ಮಾತ್ರ ಮೋದಿಯವರ ಸಬ್ಸಿಡಿ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ | Water Scarcity : ನಮ್ಮ ಮನೆಯಲ್ಲೂ ನೀರಿಲ್ಲ; ಜಲಕ್ಷಾಮದ ಭೀಕರತೆ ಬಿಚ್ಚಿಟ್ಟ ಡಿ.ಕೆ ಶಿವಕುಮಾರ್‌

ಇಂಧನ ಸಚಿವ ಕೆ.ಜೆ.ಜಾರ್ಜ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಗೋವಿಂದರಾಜು, ನಸೀರ್ ಅಹಮದ್ , ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಕ್ರೆಡೆಲ್ ಅಧ್ಯಕ್ಷರಾದ ಶೃಂಗೇರಿ ಶಾಸಕರಾದ ರಾಜುಗೌಡ ಮತ್ತು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version