Site icon Vistara News

Heart attack: ಕೇರಳದಿಂದ ಕೆಲಸ ಅರಸಿ ಬಂದಿದ್ದ 61 ವರ್ಷದ ವೃದ್ಧನಿಗೆ ಬಿಎಂಟಿಸಿ ಬಸ್‌ನಲ್ಲಿ ಹೃದಯಾಘಾತ; ಸಾವು

heart attack 61 year old man come from Kerala suffered heart attack in BMTC bus and death

ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಿಂದ ಬಿಎಂಟಿಸಿ ಬಸ್‌ ಹತ್ತಿದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತ (Heart attack) ಸಂಭವಿಸಿ ಬಸ್‌ನಲ್ಲೇ ಮೃತಪಟ್ಟಿದ್ದಾರೆ. ಬುಧವಾರ (ಮಾ. 8) ಈ ಪ್ರಕರಣ ನಡೆದಿದ್ದು, ಕೆ.ಪಿ. ಅಬ್ದುಲ್ ಖಾದಿರ್ (61) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕೇರಳದಿಂದ ಬುಧವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದ ಅಬ್ದುಲ್‌, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿಂದ ಮೆಜೆಸ್ಟಿಕ್‌ಗೆ ಬರಲು ಬಿಎಂಟಿಸಿ ಬಸ್‌ ಹತ್ತಿದ್ದಾರೆ. ಆದರೆ, ಬಸ್‌ ಮಂತ್ರಿ ಮಾಲ್‌ಗೆ ಬರುವಷ್ಟರಲ್ಲಿ ಹಠಾತ್ ಹೃದಯಾಘಾತ ಸಂಭವಿಸಿದೆ. ಅಲ್ಲೇ ಮೃತಪಟ್ಟಿದ್ದಾರೆ.

ಅವರು ಬೆಂಗಳೂರಿಗೆ ಕೆಲಸವನ್ನು ಅರಸಿ ಬಂದಿದ್ದರು ಎಂದು ಹೇಳಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಕೇರಳ ಅಸೋಸಿಯೇಷನ್‌ನವರು (KMCC) ಆಗಮಿಸಿದ್ದಾರೆ. ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ವ್ಯಕ್ತಿಯ ಕುಟುಂಬದವರಿಗೆ ವಿಷಯ ತಿಳಿಸಲಾಗಿದ್ದು, ಅವರು ಬಂದ ಕೂಡಲೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ನಂತರ ಕುಟುಂಬದವರಿಗೆ ಹಸ್ತಾಂತರ ಮಾಡಲಾಗುವುದು.

ಹುಣಸೂರು ಗ್ರಾಮೀಣ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಹೃದಯಾಘಾತದಿಂದ ಮೃತ್ಯು

ಮೈಸೂರು: ಹೃದಯಾಘಾತ ಈಗ ದಿನದಿಂದ ದಿನಕ್ಕೆ ತನ್ನ ಕರಾಳ ಬಾಹುಗಳನ್ನು ಚಾಚುತ್ತಿದ್ದು, ಹಲವರ ಪ್ರಾಣಗಳನ್ನು ಕಸಿಯುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರವಿಂದ್ ಎಂಬ ಹೆಡ್‌ ಕಾನ್‌ಸ್ಟೇಬಲ್‌ ಒಬ್ಬರು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

48 ವರ್ಷದ ಅರವಿಂದ್‌ ಅವರು ಹುಣಸೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಕೂಡಲೇ ಚಿಕಿತ್ಸೆಗಾಗಿ ಹುಣಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅರವಿಂದ್‌ ಅವರು ಕೆ.ಆರ್.ನಗರ, ಸಾಲಿಗ್ರಾಮ, ಹುಣಸೂರು ಪಟ್ಟಣ ಸೇರಿದಂತೆ ಇತರೆ ಕಡೆ ಸೇವೆ ಸಲ್ಲಿಸಿದ್ದರು. ಉತ್ತಮ ಜನಾನುರಾಗಿ ಪೊಲೀಸ್‌ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದರು.

ಇದನ್ನೂ ಓದಿ: Karnataka Election: ಸಚಿವ ನಾರಾಯಣಗೌಡರಿಂದ ಬಾಡೂಟ ಪಾಲಿಟಿಕ್ಸ್‌; ಕಾಂಗ್ರೆಸ್‌ ಸೇರ್ಪಡೆ ಇನ್ನೂ ಗೌಪ್ಯ

ಪೊಲೀಸರು ಸೇರಿದಂತೆ ಸಮಾಜದ ಹಲವು ವರ್ಗಗಳು ಕಾರ್ಯದ ಒತ್ತಡಕ್ಕೆ ಒಳಗಾಗುತ್ತಿದ್ದು, ಇದುವೇ ಸಾವಿಗೆ ಕಾರಣವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಎರಡು ದಿನಗಳಲ್ಲಿ ಇಬ್ಬರು ಪತ್ರಕರ್ತರು ಕೂಡಾ ಕೂಡಾ ಹೃದಯಾಘಾತದಿಂದ ಮೃತಪಟ್ಟಿದ್ದರು.

Exit mobile version