ಬೆಂಗಳೂರು: ದಾವಣಗೆರೆಯ ಹೊರವಲಯದಲ್ಲಿರುವ ಹೆಬ್ಬಾಳು ಟೋಲ್ ಬಳಿ ಶುಕ್ರವಾರ ಮುಂಜಾನೆ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ, ಸುಮಾರು 39 ಲಕ್ಷ ರೂಪಾಯಿ ಮೌಲ್ಯದ 66 ಕೆಜಿ ಬೆಳ್ಳಿಯ ವಸ್ತುಗಳು ಬಾಲಿವುಡ್ ಚಿತ್ರನಿರ್ಮಾಪಕ, ಮೃತ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ (Boney Kapoor) ಅವರಿಗೆ ಸೇರಿದ್ದು ಎಂದು ಹೇಳಲಾಗಿದೆ. ಚೆನ್ನೈನಿಂದ ಮುಂಬಯಿಗೆ ಹೋಗುತ್ತಿದ್ದ ಬಿಎಂಡಬ್ಲ್ಯೂ ಕಾರಿನಲ್ಲಿ ಬೆಳ್ಳಿಯ ಚಮಚಗಳು, ಬೌಲ್ಗಳು, ಬಟ್ಟಲುಗಳು, ನೀರಿನ ಮಗ್ಗಳು ಸೇರಿ ಅಪಾರ ಪ್ರಮಾಣದ ವಸ್ತುಗಳು ಪತ್ತೆಯಾಗಿದ್ದವು. ಹೆಬ್ಬಾಳ ಟೋಲ್ ಬಳಿ ತಹಸೀಲ್ದಾರ/ಚುನಾವಣಾಧಿಕಾರಿ ಡಾ. ಅಶ್ವತ್ ಹಾಗೂ ತಂಡ ಕಾರು ಪರಿಶೀಲನೆ ಮಾಡಿದಾಗ ಇವು ಸಿಕ್ಕಿವೆ. ಸೂಕ್ತ ದಾಖಲೆಯನ್ನು ಕೇಳಿದಾಗ ಕಾರು ಚಾಲಕನಾಗಲೀ, ಜತೆಗಿದ್ದವನಾಗಲೀ ಅದನ್ನು ಒದಗಿಸಲಿಲ್ಲ. ಹೀಗಾಗಿ ಅಷ್ಟೂ ವಸ್ತುಗಳನ್ನೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಾರಿನಲ್ಲಿ ಹರಿ ಸಿಂಗ್ ಮತ್ತು ಡ್ರೈವರ್ ಸುಲ್ತಾನ್ಖಾನ್ ಇದ್ದರು. ಇವರಿಬ್ಬರ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೇ ಅವರನ್ನು ಅಲ್ಲಿಯೇ ಇಟ್ಟು ವಿಚಾರಣೆಗೆ ಒಳಪಡಿಸಲಾಗಿದೆ. ಇವಿಷ್ಟೂ ಬೆಳ್ಳಿ ವಸ್ತುಗಳು ಬೇವೀವ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ್ದು ಮತ್ತು ಈ ಕಂಪನಿಯ ಒಡೆತನ ಬೋನಿ ಕಪೂರ್ ಅವರದ್ದು ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ವಿಷಯವನ್ನು ಹರಿಸಿಂಗ್ ಎಂಬಾತನೇ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಇನ್ನು ಬಿಎಂಡಬ್ಲ್ಯೂ ಕಾರಿನಲ್ಲಿ ಒಟ್ಟು ಐದು ಬಾಕ್ಸ್ಗಳು ಇದ್ದವು. ಆ ಬಾಕ್ಸ್ಗಳಲ್ಲೆಲ್ಲ ಬೆಳ್ಳಿ ವಸ್ತುಗಳೇ ತುಂಬಿದ್ದವು ಎಂದೂ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಮಾ.29ರಂದು ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಅಂದಿನಿಂದಲೂ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಎಲ್ಲ ಕಡೆ ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ 3.7ಕೋಟಿ ರೂಪಾಯಿ ನಗದು ಮತ್ತು 1.47 ಕೋಟಿ ರೂ.ಮೌಲ್ಯದ, 8.6 ಕೆಜಿ ಚಿನ್ನವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದರು. ಮಾ.29ರಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಒಟ್ಟಾರೆ 70 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.