ದಾವಣಗೆರೆ, ಕರ್ನಾಟಕ: ಸಂಘರ್ಷಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರವು ಆಪರೇಷನ್ ಕಾವೇರಿ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ಈಗಾಗಲೇ ಮೂರು ಬ್ಯಾಚುಗಳಲ್ಲಿ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಆದರೆ, ಇನ್ನೂ 68 ಕನ್ನಡಿಗರು ಸುಡಾನ್‌ನಲ್ಲಿ ಸಿಲುಕಿದ್ದು, ಅವರ ನೆರವಿಗೆ ಭಾರತೀಯ ರಾಯಭಾರ ಕಚೇರಿ ಬಂದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಸುಡಾನ್‌ನಲ್ಲಿರುವ ಕನ್ನಡಿಗರೇ ವಿಡಿಯೋ ಮಾಡಿ ತಮ್ಮ ಗೋಳು ತೋಡಿಕೊಂಡಿದ್ದಾರೆ(Operation Kaveri).
ಸುಡಾನ್‌ನ ಅಲ್ಪಾಶೇರ್‌ನಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಭಾರತೀಯ ರಾಯಭಾರ ಕಚೇರಿಯೂ ಇನ್ನೂ ಈ ಕನ್ನಡಿಗರ ರಕ್ಷಣೆಗೆ ಮುಂದಾಗಿಲ್ಲ. ಈ ಕುರಿತು ಅಲ್ಫಾಶೇರ್‌ನಲ್ಲಿ ಸಿಲುಕಿರುವ ಕನ್ನಡಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು, ಬೆಂಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಸುಮಾರು 68 ಜನ ಅಲ್ಫಾಶೇರ್ ಸಿಟಿಯಲ್ಲಿ ಲಾಕ್ ಆಗಿದ್ದಾರೆ. 15 ದಿನಗಳಿಂದ ಸಂಕಷ್ಟದಲ್ಲಿದ್ರೂ ಇಂಡಿಯನ್ ಅಂಬೆಸಿ ಸ್ಪಂದಿಸುತ್ತಿಲ್ಲ ಅಂತ ಆರೋಪ ಮಾಡಲಾಗಿದೆ. ಆಪರೇಷನ್ ಕಾವೇರಿ ಟೀಂ ನಮಗೆ ಸ್ಪಂದಿಸುತ್ತಿಲ್ಲವೆಂದು ಸಂತ್ರಸ್ತರು ದೂರಿದ್ದಾರೆ.
ರಕ್ಷಣೆಗೆ ಮೊರೆ ಇಟ್ಟಿರುವ ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರು
ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಿ ಅಂತ ಕೇಳಿಕೊಂಡರೆ ಹಣ ಇಲ್ಲ ಅಂತಿದ್ದಾರೆ ಅಂಬೆಸಿ ಅಧಿಕಾರಿಗಳು. ಸುಡಾನ್ ನಿಂದ ಎಲ್ಲ ಕನ್ನಡಿಗರು ರಕ್ಷಣೆ ಆಗಿಲ್ಲ. ನಮ್ಮನ್ನು ಬೇಗ ವಾಪಸ್ ಕರೆದುಕೊಂಡು ಹೋಗಿ ಎಂದು ಕನ್ನಡಿಗರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಭಾರತೀಯ ರಾಯಭಾರ ಕಚೇರಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: Operation Kaveri: ಆಪರೇಷನ್ ಕಾವೇರಿ ಶುರು, ಸುಡಾನ್‌ನಿಂದ ಹೊರಟ 278 ಭಾರತೀಯರ ಮೊದಲ ಬ್ಯಾಚ್
ಭಾರತಕ್ಕೆ ಬಂದಿಳಿದ 360 ಭಾರತೀಯರು
ಸಮರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ಪ್ರಾರಂಭಿಸಿರುವ ‘ಆಪರೇಷನ್ ಕಾವೇರಿ (Operation Kaveri)’ ಯಶಸ್ಸು ಸಾಧಿಸುತ್ತಿದ್ದು, ಮೊದಲ ಹಂತದಲ್ಲಿ ಸುಡಾನ್‌ನಿಂದ 360 ಭಾರತೀಯರು ಬುಧವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ.
“ಭಾರತವು ತನ್ನ ನಾಡಿನ ನಾಗರಿಕರನ್ನು ಸ್ವಾಗತಿಸುತ್ತಿದೆ. ಆಪರೇಷನ್ ಕಾವೇರಿ ಮೂಲಕ ಸುಡಾನ್‌ನಿಂದ ಮೊದಲ ಹಂತದಲ್ಲಿ ವಿಮಾನದ ಮೂಲಕ 360 ಜನ ದೆಹಲಿಗೆ ಆಗಮಿಸಿದ್ದಾರೆ” ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಸುಡಾನ್‌ನಿಂದ ಭಾರತಕ್ಕೆ ಆಗಮಿಸಿದ ನಾಗರಿಕರ ಫೋಟೊಗಳನ್ನೂ ಅವರು ಶೇರ್ ಮಾಡಿದ್ದಾರೆ.
ಸಮರಪೀಡಿತ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿ, ಪ್ರಾಣಭೀತಿಯಲ್ಲಿದ್ದ ಭಾರತೀಯರನ್ನು ಕೇಂದ್ರ ಸರ್ಕಾರವು ರಕ್ಷಿಸುತ್ತಿದ್ದು, ಬುಧವಾರ ರಾತ್ರಿ ನವದೆಹಲಿಗೆ ಆಗಮಿಸುತ್ತಲೇ ಭಾರತೀಯರ ಸಂತಸ ಮುಗಿಲುಮುಟ್ಟಿತ್ತು. ಅಷ್ಟೇ ಏಕೆ, ಭಾರತ್ ಮಾತಾ ಕೀ ಜೈ, ಆರ್ಮಿ ಜಿಂದಾಬಾದ್, ನರೇಂದ್ರ ಮೋದಿ ಜಿಂದಾಬಾದ್ ಎಂಬ ಘೋಷಣೆಗಳನ್ನೂ ಕೂಗಿದರು. ಸುಡಾನ್‌ನಲ್ಲಿ ಕರ್ನಾಟಕದವರೂ ಸಿಲುಕಿದ್ದು, ಎಲ್ಲರನ್ನೂ ರಕ್ಷಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ತೊಡಗಿದೆ.