Site icon Vistara News

Karnataka election 2023: ಬಳ್ಳಾರಿಯ 5 ಕ್ಷೇತ್ರದಲ್ಲಿ 7 ನಾಮಪತ್ರ ವಾಪ‌‌ಸ್;‌ ಕಣದಲ್ಲಿ 56 ಅಭ್ಯರ್ಥಿಗಳು

7 nomination papers withdrawn in Bellary district

ಬಳ್ಳಾರಿ: ವಿಧಾನಸಭಾ ಚುನಾವಣೆಗೆ (Karnataka election 2023) ಸಂಬಂಧಿಸಿದಂತೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯಲು (nomination withdrawal) ಕೊನೆಯ ದಿನವಾದ ಸೋಮವಾರ ಜಿಲ್ಲೆಯಲ್ಲಿ ಒಟ್ಟು 7 ನಾಮಪತ್ರಗಳನ್ನು ವಾಪಸ್‌ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ತಿಳಿಸಿದ್ದಾರೆ.

ಬಳ್ಳಾರಿ (Bellary) ನಗರ 4, ಸಿರುಗುಪ್ಪ 2, ಬಳ್ಳಾರಿ ಗ್ರಾಮೀಣ 1 ನಾಮಪತ್ರ ಹಿಂದಕ್ಕೆ ಪಡೆಯಲಾಗಿದೆ. ಕೆಆರ್‌ಪಿಪಿ ಪಕ್ಷದಿಂದ ಬಳ್ಳಾರಿ (Bellary) ನಗರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ರೆಡ್ಡಿ ನಾಮಪತ್ರವನ್ನು ಹಿಂಪಡೆದಿದ್ದಾರೆ. ಕೆಆರ್‌ಪಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಲಕ್ಷ್ಮಿ ಅರುಣ ಜತೆ ಬ್ರಹ್ಮಿಣಿ ರೆಡ್ಡಿ ಉಮೇದುವಾರಿಕೆಯನ್ನು ಸಲ್ಲಿಸಿದ್ದರು. ತಾಯಿಯ ನಾಮಪತ್ರ ಕ್ರಮಬದ್ಧವಾದ ಹಿನ್ನೆಲೆಯಲ್ಲಿ ಬ್ರಹ್ಮಿಣಿ ರೆಡ್ಡಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Karnataka Election: ಗೋಕಾಕ ಕಾಂಗ್ರೆಸ್‌ ಸಮಾವೇಶಕ್ಕೆ ಜನರೇ ಇಲ್ಲ; ಭಯಪಡಬೇಡಿ ಎಂದ ಸವದಿ, ಸಿದ್ದರಾಮಯ್ಯ

ಬಳ್ಳಾರಿ ನಗರ ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರ ರೆಡ್ಡಿ ಅವರ ನಾಮಪತ್ರ ಕ್ರಮಬದ್ಧವಾದ ಹಿನ್ನೆಲೆಯಲ್ಲಿ ಪತ್ನಿ ಜಿ.ವಿಜಯಮ್ಮ ಸಲ್ಲಿಸಿದ್ದ ನಾಮಪತ್ರ ಹಿಂದಕ್ಕೆ ಪಡೆಯಲಾಗಿದೆ. ಬಳ್ಳಾರಿ ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಗಂಗೀರೆಡ್ಡಿ ಹಾಗೂ ತೋರಣಗಲ್ ಗ್ರಾಮದ ನಾರಾಯಣಸ್ವಾಮಿ ನಾಮಪತ್ರವನ್ನು ಹಿಂಪಡೆದಿದ್ದಾರೆ.

ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಅವರ ನಾಮಪತ್ರ ಕ್ರಮಬದ್ಧವಾಗಿರುವುದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರ ಸಹೋದರ ಬಿ.ವೆಂಕಟೇಶ್ ಪ್ರಸಾದ್ ಅವರು ಸಲ್ಲಿಸಿದ್ದ ನಾಮಪತ್ರ ಹಿಂದಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Logistics index : ವಿಶ್ವಬ್ಯಾಂಕ್‌ನ ಲಾಜಿಸ್ಟಿಕ್ಸ್‌ ಇಂಡೆಕ್ಸ್‌ನಲ್ಲಿ 6 ಸ್ಥಾನ ಮೇಲಕ್ಕೇರಿದ ಭಾರತ, ಕಾರಣವೇನು?

ಸಿರುಗುಪ್ಪ ವಿಧಾನಸಭಾ ಕ್ಷೇತ್ರದಿಂದ ಕೆಆರ್‌ಪಿಪಿಯಿಂದ ಸ್ಪರ್ಧಿಸಿರುವ ದರಪ್ಪ ನಾಯಕ ಅವರ ನಾಮಪತ್ರ ಕ್ರಮಬದ್ಧವಾಗಿರುವುದರಿಂದ ಪತ್ನಿ ಎಸ್.ಸಿ. ರಾಧಾ ಸಲ್ಲಿಸಿದ್ದ ನಾಮಪತ್ರವನ್ನು ಹಿಂದಕ್ಕೆ ಪಡೆಯಲಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಸಮ್ಮ ಹುಣಸೇಮರದ ಅವರು ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳು ಸೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 63 ಜನ ನಾಮಪತ್ರ ಸಲ್ಲಿಸಿದ್ದರು. 7 ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದು ಇದೀಗ ಒಟ್ಟು 56 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಉಳಿದಂತಾಗಿದೆ.

Exit mobile version