ಮೈಸೂರು: ಇಂದು ಕೃಷಿಯನ್ನೇ ಮಾಡದ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಹೊಲದಲ್ಲಿ ದುಡಿಯುವ ನಿಜವಾದ ರೈತರನ್ನು ಗುರುತಿಸುವ ಮತ್ತು ಅವರಿಗೆ ಎಲ್ಲ ಸ್ಥಾನಮಾನ ದೊರೆಯುವಂತೆ ನೋಡಿಕೊಳ್ಳುವ ವ್ಯವಸ್ಥೆ ರೂಪಿಸಬೇಕೆಂದು ಇಲ್ಲಿಯ ಕರಾಮುವಿವಿ ಆವರಣದಲ್ಲಿ ನಡೆದ 5ನೇ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ (kisan swaraj sammelan) ಒತ್ತಾಯಿಸಲಾಗಿದೆ.
ನವೆಂಬರ್ 11 ರಿಂದ 13ರವರೆಗೆ ನಡೆದ ಈ ಸಮ್ಮೇಳನದಲ್ಲಿ ಒಟ್ಟು ಏಳು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಕೃಷಿ ಭೂಮಿಯೇ ವಿರಳವಾಗುತ್ತಿರುವಾಗ ಭೂಮಿಯನ್ನು ಲಾಭಕ್ಕಾಗಿ ಬೆೇರೆ ಬೆೇರೆ ಉದ್ದೇಶಗಳಿಗೆ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.
ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ, ಬೆಳೆಹಾನಿಗೆ ಯೋಗ್ಯ ಪರಿಹಾರ, ಬೆಳೆಗಳಿಗೆ ವಿಮೆ, ರೈತರ ಗುಂಪುಗಳಲ್ಲಿ ಬಂಡವಾಳ ಹೂಡುವುದು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವುದರ ಮೂಲಕ ರೈತರಿಗೂ ಘನತೆಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ. ದೇಶದ ವಿವಿಧ ಭಾಗದಿಂದ ಆಗಮಿಸಿದ್ದ ಸುಮಾರು 2 ಸಾವಿರಕ್ಕೂ ಹೆಚ್ಚು ರೈತರು, ಆದಿವಾಸಿಗಳು, ಬೀಜ ಸಂರಕ್ಷಕರು, ಸಮುದಾಯ ಸಂಘಟಕರು, ಕೃಷಿ ವಿಜ್ಞಾನಿಗಳು, ನೀತಿ ನಿರೂಪಕರು, ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಗುತ್ತಿಗೆ ಕೃಷಿ ಹೆಚ್ಚುತ್ತಿರುವುದು ಮತ್ತು ಕಾರ್ಪೊರೇಟ್ ಕೃಷಿ ವಿಸ್ತಾರಗೊಳ್ಳುತ್ತಿರುವ ಕುರಿತು ಸಮ್ಮೇಳನದಲ್ಲಿ ಆತಂಕ ವ್ಯಕ್ತಪಡಿಸಲಾಯಿತು. ಸರ್ಕಾರಗಳು ರೈತರ ಒಪ್ಪಿಗೆಯನ್ನು ಪಡೆದೇ ರೈತರಿಗೆ ಸಂಬಂಧಿಸಿದ ವಿಷಯಗಳ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು. ಕೃಷಿ ವೈವಿಧ್ಯತೆಯನ್ನು ಮತ್ತು ಬೀಜ ಸ್ವಾವಲಂಬನೆಯನ್ನು ಪುನಶ್ಚೇತನಗೊ ಳಿಸಬೇಕು, ಎಲ್ಲರಿಗೂ ಸುರಕ್ಷಿತ, ವೈವಿಧ್ಯಮಯ, ಪರಿಪೂರ್ಣ ಆಹಾರ ದೊರೆಯುವಂತಾಗಬೇಕು ಎಂದು ಸಮ್ಮೇಳನವು ಆಗ್ರಹಿಸಿದೆ.
ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದನ್ನು ಸಮ್ಮೇಳನದಲ್ಲಿ ತೀವ್ರವಾಗಿ ಖಂಡಿಸಲಾಗಿದ್ದು, ಈ ಸರ್ಕಾರವು ಕೂಡಲೇ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಲಾಗಿದೆ.
ಗಮನ ಸೆಳೆದ ಮಳಿಗೆಗಳು
ಮೂರು ದಿನಗಳ ಕಾಲ ನಡೆದ ಈ ಸಮ್ಮೇಳನದ ಜಾಗದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು. ಇವು ರೈತರನ್ನು ಬಹಳವಾಗಿ ಆಕರ್ಷಿಸಿದವು. ಉತ್ತರಾಕಾಂಡ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಈಶಾನ್ಯ ರಾಜ್ಯಗಳಿಂದ ಆಗಮಿಸಿದ್ದ ರೈತರು ಬೀಜ ಮತ್ತು ತಾವು ಬೆಳೆದ ಉತ್ಪನ್ನಗಳನ್ನು ಈ ಮಳಿಗೆಗಳಲ್ಲಿ ಪ್ರದರ್ಶಿಸಿದರು. 75 ವಿವಿಧ ಜಾತಿಯ ಬಾಳೆಹಣ್ಣುಗಳು, ತಾಳೆ ಮರದಿಂದ ತಯಾರಿಸಿದ ಆಭರಣ, ಅರಿಶಿನ ಎಣ್ಣೆ ಸಾಬೂನು, ಬಿದಿರಿನಿಂದ ತಯಾರಿಸಿದ ಗಡಿಯಾರ ಮತ್ತಿತರ ವಸ್ತುಗಳು ಎಲ್ಲರ ಗಮನ ಸೆಳೆದವು.
ಇದನ್ನೂ ಓದಿ | GM Mustard | ಕೃಷಿ ಕ್ಷೇತ್ರದಲ್ಲಿ ಮತ್ತೆ ಕುಲಾಂತರಿ ಬಿರುಗಾಳಿ; ಬಿಟಿ ಸಾಸಿವೆಗೆ ಅನುಮತಿ