ಬೆಂಗಳೂರು: ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಪದವಿ ವ್ಯಾಸಂಗ ಮಾಡಲು ಉದ್ದೇಶಿಸಿರುವವರಿಗೆ ಜೂನ್ 16-17-18ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ದಿನಾಂಕ ನಿಗದಿ ಕುರಿತು ಸರ್ಕಾರ ಹಾಗೂ ಇಲಾಖೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ಬರೆಯಲು ದೇಶದ ವಿವಿಧೆಡೆಯಿಂದಲೂ ಅಭ್ಯರ್ಥಿಗಳು ಆಗಮಿಸುತ್ತಾರೆ. ಬೇರೆ ರಾಜ್ಯಗಳಲ್ಲಿ ಶೈಕ್ಷಣಿಕ ವೇಳಾಪಟ್ಟಿ ಬದಲಿರುತ್ತದೆ ಹಾಗೂ ಅಲ್ಲಿಯೂ ಅನೇಕ ಸ್ಥಳೀಯ ಪ್ರವೇಶಾತಿ ಪರೀಕ್ಷೆಗಳು ಇರುತ್ತವೆ. ಇದೆಲ್ಲವನ್ನೂ ಅಧ್ಯಯನ ನಡೆಸಿದ ನಂತರ ಈ ಮೂರು ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಜೂನ್ 16ರಂದು ಬೆಳಿಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಹಾಗೂ 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಸಿಇಟಿ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 5ರಿಂದ ತಮ್ಮ ಹೆಸರು ನೋಂದಣಿ ಆರಂಭಿಸಬಹುದು. 20ರವರೆಗೆ ನೋಂದಾಯಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ಲೈನ್ ಮೂಲಕವೇ ಶುಲ್ಕ ಭರಿಸಲು ಏ.22ರವರೆಗೆ ಅವಕಾಶವಿದೆ.
ಶುಲ್ಕ ಪಾವತಿಸಿದ ನಂತರ, ತಮ್ಮ ಅರ್ಜಿಯಲ್ಲೇನಾದರೂ ಮಾಹಿತಿಯನ್ನು ಪರಿಷ್ಕರಿಸುವುದಿದ್ದರೆ ಅಂಥವರಿಗೆ ಮೇ 2ರಿಂದ 6ವರೆಗೆ ಕಾಲಾವಕಾಶ ಇರಲಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿಗಳು ಮೇ 30ರಿಂದ ಪ್ರವೇಶಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದಿದ್ದಾರೆ. ಸಿಇಟಿ ವೇಳಾಪಟ್ಟಿಯನ್ನು ಅಶ್ವತ್ಥನಾರಾಯಣ ಟ್ವೀಟ್ ಮಾಡಿದ್ದಾರೆ.