ಬೆಂಗಳೂರು: 14 ಐಎಎಸ್, 15 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ 75 ಕಿರಿಯ ಶ್ರೇಣಿ ಕೆಎಎಸ್ ಅಧಿಕಾರಿಗಳಿಗೆ (KAS Transfer) ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಿರಿಯ ಶ್ರೇಣಿಯಿಂದ ಹಿರಿಯ ಶ್ರೇಣಿಗೆ ಬಡ್ತಿ ನೀಡಿದ್ದು, ಜತೆಗೆ ಕೆಲವರಿಗೆ ವರ್ಗಾವಣೆ ಕೂಡ ಮಾಡಲಾಗಿದೆ. ಬಹುತೇಕ ಅಧಿಕಾರಿಗಳಿಗೆ ಈಗಿರುವ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಬಡ್ತಿ ನೀಡಿದ್ದರಿಂದ ವೇತನ ಕೂಡ ಹೆಚ್ಚಳವಾಗಿದ್ದು, ವೇತನ ಶ್ರೇಣಿ 74,400 ರೂ. ರಿಂದ 1,09,600 ರೂ. ಇದೆ.
ತುಮಕೂರಿನ ಎತ್ತಿನಹೊಳೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿಯಾದ ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿ ಎಂ.ಎನ್.ಮಂಜುನಾಥ್ ಅವರನ್ನು ಕೆಎಎಸ್ ಹಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಿಸಿ, ವಿಶೇಷ ಭೂ ಸ್ವಾಧೀನಾಧಿಕಾರಿ ಸ್ಥಾನದಲ್ಲೇ ಮುಂದುವರಿಯಲು ಸೂಚಿಸಲಾಗಿದೆ.
ಇನ್ನು ಶಿವಮೊಗ್ಗ ಉಪ ವಿಭಾಗಾಧಿಕಾರಿ ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿ ರವಿಚಂದ್ರ ನಾಯಕ್ ಅವರನ್ನು ಹಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಿಸಿ, ಉನ್ನತೀಕರಿಸಿದ ಹುದ್ದೆಯಲ್ಲೇ ಮುಂದುವರಿಸಲಾಗಿದೆ. ಇವರೂ ಸೇರಿ 75 ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, ಈ ಪೈಕಿ ಕೆಲವರಿಗೆ ವರ್ಗಾವಣೆ ಮಾಡಲಾಗಿದೆ.