ನವದೆಹಲಿ: ದೆಹಲಿ ಕರ್ನಾಟಕ ಸಂಘ 75 ವರ್ಷಗಳನ್ನು (Delhi Karnataka Sangha) ಪೂರೈಸಿದ್ದು, ಫೆಬ್ರವರಿ 25 ಮತ್ತು 26ರಂದು ಅಮೃತ್ ಮಹೋತ್ಸವ ಕ್ರಾಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ ಎಂ ನಾಗರಾಜ್ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹಲವು ರಾಜಕೀಯ ಸಾಮಾಜಿಕ ಗಣ್ಯರು ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ದಿಲ್ಲಿಯಲ್ಲಿರುವ ಸುಮಾರು 10ರಿಂದ 12 ಸಾವಿರ ಕನ್ನಡಿಗರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಸಂಘದ ಅಭಿವೃದ್ಧಿಗೆ ದುಡಿದ ಕನ್ನಡಿಗರನ್ನು, ಮಹನೀಯರನ್ನು ಗೌರವಿಸುವ ಕೆಲಸವನ್ನು ಮಾಡಲಿದ್ದೇವೆ. ಒಟ್ಟಾರೆ 75 ಗಣ್ಯರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದು ನಾಗರಾಜ್ ಅವರು ತಿಳಿಸಿದ್ದಾರೆ.
ಮಾಜಿ ಅಧ್ಯಕ್ಷರಿಂದ ಸಮಾರಂಭಕ್ಕೆ ಬಾಯ್ಕಾಟ್
ಫೆಬ್ರವರಿ 25 ಮತ್ತು 26ರಂದು ನಡೆಯಲಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವಕ್ಕೆ ಅಪಸ್ವರ ಕೇಳಿ ಬಂದಿದೆ. ಸಂಘದ ಮಾಜಿ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ಡಾ. ವೆಂಕಟಾಚಲ ಹೆಗಡೆ ಹಾಗೂ ವಸಂತ ಶೆಟ್ಟಿ ಬೆಳ್ಳಾರೆ ಅವರು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಅವರು ನೀಡಿದ್ದಾರೆ.
75 ವರ್ಷಗಳಲ್ಲಿ ಕನ್ನಡದ ಹಲವು ಮೇರು ವ್ಯಕ್ತಿತ್ವಗಳು ಈ ಸಂಸ್ಥೆಗೆ ಮಾರ್ಗದರ್ಶನ ಮಾಡಿ ಕನ್ನಡದ ಅಸ್ಮಿತೆ ಉಳಿಸಿದ್ದಾರೆ. ಆದರೆ ಕರ್ನಾಟಕ ಸಂಘವು ಫೆಬ್ರವರಿ 25 ಮತ್ತು 26 ರಂದು ಆಚರಿಸುತ್ತಿರುವ ಕಾರ್ಯಕ್ರಮ ಸಂಘದ ಮೂಲ ಉದ್ದೇಶದಿಂದ ಬಹಳ ದೂರ ಸರಿದಿದೆ. ಕನ್ನಡ ಭಾಷೆ , ಸಾಹಿತ್ಯ ಮತ್ತು ಸಂಸ್ಕೃತಿಯ ಸಮಾವೇಶವಾಗಬೇಕಾಗಿದ್ದ ಸುವರ್ಣಸಂಭ್ರಮವು ದೆಹಲಿ ಕನ್ನಡಿಗರನ್ನು ಕೇಂದ್ರದಲ್ಲಿರಿಸಿಕೊಂಡು ನಡೆಯುತ್ತಿಲ್ಲ.
ಇದನ್ನೂ ಓದಿ: Karnataka Tableau | ಮೊದಲಿಗೆ ತಿರಸ್ಕರಿಸಿ, ಕೊನೆ ಗಳಿಗೆಯಲ್ಲಿ ಕರ್ನಾಟಕ ಟ್ಯಾಬ್ಲೋಗೆ ಓಕೆ ಎಂದಿದ್ದೇಕೆ?
ಕನ್ನಡ ನಾಡು ನುಡಿಗೆ ಸೇವೆಸಲ್ಲಿಸಿದ ಲೇಖಕ, ಕಲಾವಿದರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಕಾಣುತ್ತಿಲ್ಲ. ಕಾರ್ಯಕ್ರಮದ ಒಟ್ಟು ಆಯೋಜನೆಯಲ್ಲಿ ಸಂಘದ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುವ ವಿಚಾರವಾಗಿದೆ. ಕಾರ್ಯಕಾರಿ ಸಮಿತಿಯ ಸಮಿತಿಯ ಕೆಲವು ಸದಸ್ಯರಿಗೂ ವಿಷಯ ಸ್ಪಷ್ಟತೆಯಿಲ್ಲ. ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡಿಲ್ಲ. ಇಂಥ ಹಲವು ಕಾರಣಗಳಿಂದಾಗಿ ನಾವು ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದು ಅವರು ತಿಳಿಸಿದ್ದಾರೆ.