Site icon Vistara News

7th Pay Commission | 7ನೇ ವೇತನ ಆಯೋಗ ರಚನೆಯ ಘೋಷಣೆ; ಅಧ್ಯಕ್ಷರಾಗಿ ಸುಧಾಕರ್‌ ರಾವ್‌ ನೇಮಕ

cm bommai

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ನೌಕರರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿ ಆದೇಶ ಹೊರಡಿಸಲಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ದಾವಣಗೆರೆಯಲ್ಲಿ ಫೋಷಿಸಿದ್ದಾರೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್‌ ಈ ವೇತನ ಆಯೋಗದ ಅಧ್ಯಕ್ಷರಾಗಲಿದ್ದಾರೆ. ಈ ಆಯೋಗ ರಚಿಸುವ ಕುರಿತು ಕಳೆದ ನಾಲ್ಕೈದು ದಿನಗಳಿಂದ ಅಧಿಕಾರಿಗಳ ಸರಣಿ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಘೋಷಣೆ ಮಾಡಿದ್ದಾರೆ.

ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಇದರ ಲಾಭ ಪಡೆಯಲಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಏಳನೇ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರ ಸಂಘ ಒತ್ತಾಯಿಸುತ್ತಲೇ ಬಂದಿತ್ತು. ಕಳೆದ ವಾರ ಕೂಡ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಸಂಬಂಧ ಒತ್ತಾಯಿಸಿತ್ತು.

ಹಾಲಿ ಪಡೆಯುತ್ತಿರುವ ಡಿಎಯನ್ನು ಮೂಲವೇತನದೊಂದಿಗೆ ಸೇರಿಸಿ ಅದರ ಆಧಾರದ್ಲಲಿ ವೇತನ ಪರಿಷ್ಕರಣೆ ಮಾಡಬೇಕು ಮತ್ತು ಮೂಲ ವೇತನದ ಮೇಲೆ ಶೇ.30ರಿಂದ 40 ರಷ್ಟು ವೇತನ ಹೆಚ್ಚಳವಾಗಬೇಕು. 2022ರ ಜುಲೈ1 ರಿಂದ ಅನ್ವಯವಾಗುವಂತೆ ಪರಿಷ್ಕರಣೆಯಾಗಬೇಕು. 2023ರ ಜನವರಿಯಿಂದ ಆರ್ಥಿಕ ಅನುಕೂಲವಾಬೇಕು ಎಂದು ಈ ಸಂದರ್ಭದಲ್ಲಿ ನೌಕರರ ಸಂಘದ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗ ರಚಿಸಲಾಗುವುದು ಎಂದು ಪ್ರಕಟಿಸಿದ್ದರು.

ವೇತನ ಆಯೋಗಕ್ಕೆ ವೇತನ ಪರಿಷ್ಕರಿಸಿ ಶಿಫಾರಸಲು ಮಾಡಲು ಸಾಮಾನ್ಯವಾಗಿ ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ನವೆಂಬರ್‌ನಲ್ಲಿ ಆಯೋಗ ರಚನೆಯಾದರೆ 2023ರ ಮಾರ್ಚ್‌ ಒಳಗೆ ಆಯೋಗ ವರದಿ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

6ನೇ ವೇತನ ಆಯೋಗವನ್ನು 2017ರ ಜೂನ್‌ನಲ್ಲಿ ರಚಿಸಲಾಗಿತ್ತು. ವರದಿ ನೀಡಲು ನಾಲ್ಕು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಆಯೋಗದ ಕೋರಿಕೆಯ ಮೇರೆಗೆ ಕೊನೆಗೆ ಇದಕ್ಕೆ ಒಟ್ಟು ಹನ್ನೊಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು. 2018ರ ಜನವರಿಯಲ್ಲಿ ಆಯೋಗ ಮೊದಲ ಸಂಪುಟದ ವರದಿ ನೀಡಿತ್ತು.

ಇದನ್ನೂ ಓದಿ | ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ

Exit mobile version