ಸಿದ್ದಾಪುರ (ಉತ್ತರ ಕನ್ನಡ): ಮಾರ್ಚ್ ೧ರಿಂದ (ಬುಧವಾರದಿಂದ) ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಮುಷ್ಕರದ (7th Pay Commission) ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಸಂಜೆಯೊಳಗೆ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರೆ, ನೌಕರರ ಸಂಘದ ಜತೆ ಮಾತುಕತೆ ನಡೆಸುವ ವಿಚಾರದಲ್ಲಿ ಯಾವುದೇ ಮಾತೂ ಆಡಿಲ್ಲ.
ಉತ್ತರ ಕನ್ನಡದ ಸಿದ್ಧಾಪುರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ʻʻ7ನೇ ಆಯೋಗ ರಚನೆ ಮಾಡಿದ್ದೇ ನಾವು. ನೌಕರರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಲೇ ಮಾಡಿದ್ದೇವೆ. ನಾನು ರಾಜ್ಯ ವಿಧಾನಸಭೆಯಲ್ಲೇ ಹೇಳಿಕೆ ನೀಡಿದ್ದೇನೆ. ಏಳನೇ ವೇತನ ಆಯೋಗದ ಮಧ್ಯಂತರ ವರದಿಯನ್ನು ಪಡೆದುಕೊಂಡು ತಕ್ಷಣ ಕ್ರಮ ಕೈಗೊಳ್ಳುತ್ತೇನೆʼʼ ಎಂದು ಹೇಳಿದರು.
ʻʻಕೂಡಲೇ ಮಧ್ಯಂತರ ವರದಿ ನೀಡಲು ಏಳನೇ ವೇತನ ಆಯೋಗಕ್ಕೆ ಸೂಚನೆ ನೀಡಿದ್ದೇವೆ. ಮಂಳವಾರ ಸಂಜೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಸಂಜೆಯೊಳಗೆ ನೌಕರರ ಸಮಸ್ಯೆಯನ್ನು ಇತ್ಯರ್ಥ ಮಾಡುತ್ತೇವೆʼʼ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಮಾತುಕತೆಯ ವಿಚಾರ ಎತ್ತದ ಬೊಮ್ಮಾಯಿ
ಬೊಮ್ಮಾಯಿ ಅವರು ತಾವು ಅಧಿಕಾರಿಗಳ ಜತೆ ಸಭೆ ನಡೆಸುವುದಾಗಿ ಹೇಳಿದ್ದಾರೆ, ಮಧ್ಯಂತರ ವರದಿಯನ್ನು ತ್ವರಿತವಾಗಿ ಕೊಡುವಂತೆ ಸೂಚಿಸುವುದಾಗಿ ಹೇಳಿದ್ದಾರೆ. ಅದರೆ, ಮುಷ್ಕರಕ್ಕೆ ಮುಂದಾಗಿರುವ ಸರ್ಕಾರಿ ನೌಕರರ ಸಂಘಟನೆಗಳ ಜತೆ ಮಾತುಕತೆ ನಡೆಸುವ ವಿಚಾರವನ್ನು ಎಲ್ಲೂ ಪ್ರಸ್ತಾಪಿಸಿಲ್ಲ.
ನೌಕರರ ಮನವೊಲಿಕೆಗೆ ಮುಂದಾಗದ ಬೊಮ್ಮಾಯಿ: ಕಾಂಗ್ರೆಸ್ ಪ್ರಶ್ನೆ
ಈ ನಡುವೆ, ಮುಷ್ಕರದಿಂದಾಗಿ ಪರಿಸ್ಥಿತಿ ಬಿಗಡಾಯಿಸುವ ಅಪಾಯ ಎದುರಾಗಿದ್ದರೂ ಮುಖ್ಯಮಂತ್ರಿ ಬೊಮ್ಮಾಯಿಯವರು ಅವರ ಮನವೊಲಿಕೆಗೆ ಪ್ರಯತ್ನಿಸುತ್ತಿಲ್ಲ ಯಾಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ʻʻಸರ್ಕಾರಿ ನೌಕರರು ಮುಷ್ಕರ ಹೂಡಲು ತಯಾರಾಗಿದ್ದಾರೆ. ಆಡಳಿತ ಯಂತ್ರ ಅಕ್ಷರಶಃ ಸ್ಥಗಿತಗೊಂಡು ಜನಸಾಮಾನ್ಯರು ಪರದಾಡುವಂತಾಗುತ್ತದೆ. ಈ ಮುಷ್ಕರ ನಿಭಾಯಿಸಲು ಬಸವರಾಜ ಬೊಮ್ಮಾಯಿ ಅವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ನೌಕರರ ಮನವೊಲಿಸಲು ಪ್ರಯತ್ನಿಸುತ್ತಿಲ್ಲ, ಕೈಲಾಗದ ಕೈಗೊಂಬೆ ಸಿಎಂ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯ ಅರಾಜಕತೆಗೆ ಸಾಗಿದೆʼʼ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ : 7th Pay commission : ಮಾರ್ಚ್ 1ರಿಂದ ಸರ್ಕಾರಿ ಸೇವೆ ಬಂದ್; ಯಾವ ಕಚೇರಿಗಳು ಇರಲ್ಲ, ಯಾವುದೆಲ್ಲ ಇರುತ್ತವೆ?