Site icon Vistara News

7th Pay commission : ಮಾ. 1ರಿಂದ ಸರ್ಕಾರಿ ನೌಕರರ ಪ್ರತಿಭಟನೆ, ಮಾತುಕತೆ ಸಂದೇಶ ರವಾನಿಸಿದ ಸಿಎಂ ಬೊಮ್ಮಾಯಿ

CS Shadakshari Bommai

#image_title

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿಗೆ ತರುವ ಕುರಿತು ಬದ್ಧತೆ ಪ್ರಕಟಿಸಬೇಕು ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮಾರ್ಚ್‌ 1 ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಹೋರಾಟ ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘವು ತೀರ್ಮಾನಿಸಿದ್ದನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೂಡಾ ಪ್ರತಿಭಟನೆಗೆ ಅವಕಾಶವಿಲ್ಲದಂತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ವಿಧಾನಸಭೆಯಲ್ಲೇ ಹೇಳಿದ್ದಾರೆ.

ಸರ್ಕಾರ ಮಾರ್ಚ್‌ 1 ರ ಒಳಗೆ ತೀರ್ಮಾನ ಪ್ರಕಟಿಸದೇ ಇದ್ದಲ್ಲಿ ಅನಿರ್ಧಿಷ್ಟಾವಧಿಯ ಈ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್‌ ಷಡಾಕ್ಷರಿ ಅವರು ಪ್ರಕಟಿಸಿದ್ದು, ಎಲ್ಲಾ ನೌಕರರು ಇದಕ್ಕೆ ಬೆಂಬಲ ನೀಡಿದ್ದಾರೆ.

ಮಾತುಕತೆಗೆ ಒಲವು ತೋರಿದ ಸಿಎಂ ಬೊಮ್ಮಾಯಿ

ಈ ನಡುವೆ, ಸರ್ಕಾರಿ ನೌಕರರ ಬೇಡಿಕೆಗಳ ವಿಚಾರದಲ್ಲಿ ಸರ್ಕಾರ ಬದ್ಧತೆಯನ್ನು ಹೊಂದಿದೆ. ಬಜೆಟ್‌ನಲ್ಲಿ ಕೂಡಾ ಹಣ ತೆಗೆದಿಡಲಾಗಿದೆ. ಏಳನೇ ವೇತನ ಆಯೋಗದ ವರದಿಯನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ಅವರು ಬಜೆಟ್‌ ದಿನವೂ ಹೇಳಿದ್ದರು. ಇದೀಗ ನೌಕರರ ಸಂಘದ ಪದಾಧಿಕಾರಿಗಳ ಜತೆ ಮಾತುಕತೆಗೂ ಅವರು ಮುಂದಾಗಿದ್ದಾರೆ ಎನ್ನಲಾಗಿದೆ.

ಯಾವುದೇ ಆತುರದ ನಿರ್ಧಾರ ಬೇಡ, ಮಾತುಕತೆ ನಡೆಸೋಣ ಎಂಬ ಸಂದೇಶವನ್ನು ಸರ್ಕಾರಿ ನೌಕರರ ಪದಾಧಿಕಾರಿಗಳಿಗೆ ಸಿಎಂ ರವಾನಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರು ಬುಧವಾರ ಬಳ್ಳಾರಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಗುರುವಾರ (ಫೆ. ೨೩) ಅಮಿತ್‌ ಶಾ ಭೇಟಿ ನೀಡಲಿದ್ದಾರೆ. ಅದಾದ ಬಳಿಕ ಶುಕ್ರವಾರ (ಫೆ. ೨೪)ದಂದು ಪದಾಧಿಕಾರಿಗಳ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಸರ್ಕಾರಿ ನೌಕರರು ಬೇರೆಯವರಲ್ಲ, ನಮ್ಮವರೆ. ಅವರ ಜತೆಗೆ ಸರ್ಕಾರ ಮಾತುಕತೆ ನಡೆಸಲಿದೆ. ಅವರನ್ನು ಸಮಾಧಾನ ಮಾಡಿಯೇ ಮಾಡುತ್ತೇನೆ ಎಂದೂ ಸಿಎಂ ಹೇಳಿದ್ದರು.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಸರ್ಕಾರಿ ನೌಕರರ ಸಂಘದ ತುರ್ತು ಕಾರ್ಯಕಾರಿಣಿಯ ನಿರ್ಧಾರಗಳು

1.ಏಳನೇ ಆಯೋಗದ ಮಧ್ಯಂತರ ವರದಿ ಪಡೆದು ಶೇ.40 ಫಿಟ್ಮೆಂಟ್ ಅನ್ನು ಜುಲೈ ೧ ರಿಂದ ಜಾರಿಗೆ ತರುವುದು.

2.ರಾಜಸ್ತಾನ, ಛತ್ತೀಸ್‌ಗಡ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್ ಪಿ ಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಎನ್ ಪಿ ಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು

3.ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಏಳು ದಿನಗಳ ನೋಟಿಸ್ ನೀಡಿ ಬೇಡಿಕೆ ಈಡೇರಿಸದಿದ್ದರೆ ಮಾರ್ಚ್‌ 1ರಿಂದ ರಾಜ್ಯದ ಸಮಸ್ತ ಸರ್ಕಾರಿ ನೌಕರರು, ನಿಗಮ ಮತ್ತು ಮಂಡಳಿಗಳು ಅನುದಾನಿತ ಸಂಸ್ಥೆಯ ಎಲ್ಲ ನೌಕರರು ಅನಿರ್ದಿಷ್ಟಾವಧಿಯವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವುದು.

Exit mobile version