ಬೆಂಗಳೂರು : ನಮ್ಮ ಬೇಡಿಕೆಗಳನ್ನು (7th pay commission) ಈಡೇರಿಸುವ ಕುರಿತು ಸರ್ಕಾರದಿಂದ ಲಿಖಿತ ಆದೇಶ ಹೊರಬೀಳದೇ ಇರುವುದರಿಂದ ಬುಧವಾರದಿಂದ ನಡೆಸಲುದ್ದೇಶಿಸಿರುವ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಿಂದಕ್ಕೆ ಪಡೆಯುವ ಮಾತೇ ಇಲ್ಲ. ಎಲ್ಲ ನೌಕರರು ಒಗ್ಗಟ್ಟಾಗಿ ಈ ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿ ವರ್ಗದವರು, ಎಲ್ಲ ವೃಂದಗಳ ನೌಕರರು ಈ ಹೋರಾಟದಲ್ಲಿ ಭಾಗವಹಿಸಬೇಕು. ಆ ಮೂಲಕ ಈ ಮುಷ್ಕರವನ್ನು ಯಶಸ್ವಿಯಾಗಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸೋಣ ಎಂದು ಅವರ ಸರ್ಕಾರಿ ನೌಕರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ನಮ್ಮೊಂದಿಗೂ ಚರ್ಚೆ, ಮಾತುಕತೆಗಳನ್ನು ನಡೆಸಲಾಗುತ್ತಿದೆ. ಆದರೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈ ಬಗ್ಗೆ ಹರಡುವ ಯಾವುದೇ ವದಂತಿಗಳನ್ನು ಸರ್ಕಾರಿ ನೌಕರರು ನಂಬಬಾರದು ಎಂದು ಅವರು ಕೇಳಿಕೊಂಡಿದ್ದಾರೆ.
ಈ ಕುರಿತು “ವಿಸ್ತಾರ ನ್ಯೂಸ್ʼʼ ನೊಂದಿಗೆ ಮಾತನಾಡಿದ ಸಿ. ಎಸ್. ಷಡಾಕ್ಷರಿ ಮುಷ್ಕರವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾವು ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದ್ದು, ನಮ್ಮ ಪ್ರಮುಖ ಎರಡೂ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಬಿಬಿಎಂಪಿ ನೌಕರರ ಬೆಂಬಲ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮುಷ್ಕರವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದರೆ, ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದು ಅನಿವಾರ್ಯವಾಗಲಿದೆ ಎಂದು ವಿವರಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಸರ್ಕಾರಿ ನೌಕರರ ಹೋರಾಟಕ್ಕೆ ಎಲ್ಲಾ ಪೌರಕಾರ್ಮಿಕರು ಬೆಂಬಲ ನೀಡಲಿದ್ದಾರೆ. ಬಿಬಿಎಂಪಿ ಕಚೇರಿಗಳಲ್ಲಿ ಕೂಡ ಕೆಲಸ ಬಂದ್ ಮಾಡಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಬಿಬಿಎಂಪಿಯ ವಿವಿಧ ನೌಕರರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ಮುಷ್ಕರಕ್ಕೆ ಫಾರ್ಮಸಿ ಅಧಿಕಾರಿಗಳು, ವೈದ್ಯಾಧಿಕಾರಿಗಳ ಸಂಘ ಬೆಂಬಲ