Site icon Vistara News

7th Pay Commission : ವೇತನ ಆಯೋಗದ ಶಿಫಾರಸು ಜಾರಿ ಕುರಿತು ಬಜೆಟ್‌ನಲ್ಲಿ ಘೋಷಣೆ; ಕಾಯ್ದಿರಿಸುವ ಹಣವೆಷ್ಟು?

7th Pay Commission

7th Pay Commission

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗವು (7th Pay Commission) ಇನ್ನೂ ಮಾಹಿತಿ ಕಲೆಹಾಕುವ ಕೆಲಸ ಮಾಡುತ್ತಿದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿಯೇ (Karnataka Budget) ಇದರ ಜಾರಿಗೆ ರಾಜ್ಯ ಸರ್ಕಾರವು ಬದ್ಧತೆ ವ್ಯಕ್ತಪಡಿಸಲಿದೆ ಎಂದು ರಾಜ್ಯ ಸರ್ಕಾರಿ ನೌಕರರು ಕಾತುರದಿಂದ ಕಾಯುತ್ತಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ 4 ವರ್ಷ 7 ತಿಂಗಳಲ್ಲಿಯೇ ಆಯೋಗ ರಚನೆ ಮಾಡಿದೆ. ಆಯೋಗಕ್ಕೆ ಶಿಫಾರಸು ನೀಡಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ರಾಜ್ಯ ಸರ್ಕಾರಿ ನೌಕರರ ಸಂಘವು ಫೆಬ್ರವರಿಯಲ್ಲಿ ಆಯೋಗದಿಂದ ಮಧ್ಯಂತರ ವರದಿ ಪಡೆದು, ಬಜೆಟ್‌ನಲ್ಲಿ ವೇತನ ಪರಿಷ್ಕರಣೆಯ ತೀರ್ಮಾನವನ್ನು ಪ್ರಕಟಿಸಬೇಕೆಂದು ಒತ್ತಾಯಿಸಿತ್ತು. ಆದರೆ ಆಯೋಗದ ಅಧ್ಯಕ್ಷರ ಆಯ್ಕೆ, ಆಯೋಗದ ರಚನೆ ಮತ್ತಿತರ ಕೆಲಸಗಳು ವೇಗವಾಗಿ ನಡೆಯದೇ ಇದ್ದುದ್ದರಿಂದ ಕಳೆದ ನವೆಂಬರ್‌ನಲ್ಲಿ ರಚನೆಯಾದ ಆಯೋಗ ಇನ್ನೂ ಮಾಹಿತಿ ಸಂಗ್ರಹಿಸುತ್ತಿದೆ. ಹೀಗಾಗಿ ಸರ್ಕಾರಿ ನೌಕರರ ಸಂಘ ನಿರೀಕ್ಷಿಸಿದಂತೆ ಬಜೆಟ್‌ನಲ್ಲಿ ವೇತನ ಪರಿಷ್ಕರಣೆಯ ಘೋಷಣೆ ಹೊರಡಿಸಲಾಗುತ್ತಿಲ್ಲ.

ಇದು ಚುನಾವಣೆಯ ವರ್ಷವಾಗಿರುವುದರಿಂದ ಆಯೋಗ ಮುಂದೆ ಶಿಫಾರಸು ಮಾಡಿದರೂ ಅದರ ಜಾರಿಗೆ ಬಜೆಟ್‌ನಲ್ಲಿ ಬದ್ಧತೆ ವ್ಯಕ್ತಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಹಣ ಕಾಯ್ದಿರಿಸುವ ಕುರಿತು ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಸರ್ಕಾರಿ ನೌಕರರು ಶುಕ್ರವಾರ ಮಂಡನೆಯಾಗಲಿರುವ ಬಜೆಟ್‌ಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.

ಅನುದಾನ ಕಾಯ್ದಿರಿಸುವ ವಿಶ್ವಾಸ
ವಿತ್ತ ಸಚಿವರೂ ಆಗಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ 7 ನೇ ವೇತನ ಆಯೋಗದ ಶಿಫಾರಸುಗಳ ಜಾರಿಯನ್ನು ಘೋಷಿಸುವುದರ ಜತೆಗೆ ಅಗತ್ಯವಾಗಿರುವ 10 ಸಾವಿರ ಕೋಟಿ ಅನುದಾನವನ್ನೂ ಕಾಯ್ದಿರಿಸುವ ವಿಶ್ವಾಸವಿದೆ.
ಸಿ ಎಸ್‌ ಷಡಾಕ್ಷರಿ | ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು.

ಒಂದು ಅಂದಾಜಿನ ಪ್ರಕಾರ ಆಯೋಗದ ಶಿಫಾರಸುಗಳ ಜಾರಿಗೆ 12 ಸಾವಿರ ಕೋಟಿಗೂ ಹೆಚ್ಚು ಹಣ ಬೇಕಾಗಬಹುದು. ಮುಖ್ಯಮಂತ್ರಿಗಳು ಈಗಾಗಲೇ ಈ ಬಗ್ಗೆ ಸರ್ಕಾರಿ ನೌಕರರ ಸಂಘದಿಂದ ಮಾಹಿತಿಯನ್ನು ಪಡೆದುಕೊಂಡಿದ್ದು, ಎಷ್ಟು ಹಣ ಕಾಯ್ದಿರಿಸುತ್ತಾರೆ ಎಂಬ ಬಗ್ಗೆಯೂ ನೌಕರರ ವರ್ಗದಲ್ಲಿ ಚರ್ಚೆ ನಡೆಯುತ್ತಿದೆ.

ಆರನೇ ವೇತನ ಆಯೋಗದ ಅವಧಿಯು ಕಳೆದ ಜನವರಿಗೇ ಅಂತ್ಯಗೊಂಡಿದೆ. ಹೀಗಾಗಿ ಬಜೆಟ್‌ನಲ್ಲಿ 7ನೇ ವೇತನ ಆಯೋಗದ ಜಾರಿಯ ಕುರಿತು ಪ್ರಕಟಿಸಬೇಕು. ಇಲ್ಲವಾದಲ್ಲಿ, ಮಧ್ಯಂತರ ಪರಿಹಾರವನ್ನಾದರೂ ಘೋಷಿಸಬೇಕು ಎಂದು ಕೆಲ ಸರ್ಕಾರಿ ನೌಕರರು ಆಗ್ರಹಿಸುತ್ತಿದ್ದಾರೆ.

7ನೇ ವೇತನ ಆಯೋಗದ ಶಿಫಾರಸಿನ ಜಾರಿಯಿಂದ ರಾಜ್ಯದ 5.40 ಲಕ್ಷ ಸರ್ಕಾರಿ ನೌಕರರು, 3ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ 4 ಲಕ್ಷ ನಿವೃತ್ತ ನೌಕರರು ಇದರ ಲಾಭ ಪಡೆಯಲಿದ್ದಾರೆ.

ಇದನ್ನೂ ಓದಿ: 7th Pay Commission : ಪ್ರಶ್ನಾವಳಿಗೆ ಉತ್ತರಿಸಲು ಕೊನೆಯ ದಿನಾಂಕ ವಿಸ್ತರಿಸಿದ ಆಯೋಗ

Exit mobile version