Site icon Vistara News

7th pay commission : ಎಸ್ಮಾ ಹೇರಿದರೂ ಹೆದರಲ್ಲ, ಹೋರಾಟ ನಿಲ್ಲಲ್ಲ ಎಂದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.‌ಎಸ್. ಷಡಾಕ್ಷರಿ

Shadakshari, President of Government Employees Union said that even if ESMA is imposed, the struggle will not stop

ಸಿ ಎಸ್‌ ಷಡಾಕ್ಷರಿ

ಬೆಂಗಳೂರು : ನಮ್ಮ ಎರಡು ಬೇಡಿಕೆಗಳನ್ನೂ (7th pay commission) ಈಡೇರಿಸುವವರೆಗೂ ನಮ್ಮ ಮುಷ್ಕರ ನಿಲ್ಲದು, ಸರ್ಕಾರ ಹೋರಾಟ ಹತ್ತಿಕ್ಕಲು ʻಎಸ್ಮಾ ʼ ಕಾಯ್ದೆ ಜಾರಿಗೆ ತಂದರೂ ಹೆದರುವುದಿಲ್ಲ. ನಾವು ಜೈಲಿಗೆ ಹೋಗಲೂ ಸಿದ್ಧವಾಗಿಯೇ ಈ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮಂಗಳವಾರ ಮತ್ತೆ ಗುಡುಗಿದ್ದಾರೆ.

ಮಾತುಕತೆಗೆ ಕರೆಯುವುದು, ಭರವಸೆ ನೀಡುವುದು, ಲಿಖಿತ ಪತ್ರ ನೀಡುವುದು ಬೇಡ. ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಬೇಕು ಅಲ್ಲಿಯವರೆಗೂ ಹೋರಾಟ ನಡೆಸುತ್ತೇವೆ. ಮೊದಲಿಗೆ ಒಂದು ವಾರ ಕರ್ತವ್ಯಕ್ಕೆ ಗೈರಾಗುವ ಹೋರಾಟ ನಡೆಸಲಾಗುವುದು, ನಂತರ ಸಂಘ ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ತೀರ್ಮಾನಿಸಲಿದೆ. ಆದರೆ ಸರ್ಕಾರ ಎರಡೂ ಭರವಸೆಗಳನ್ನು ಈಡೇರಿಸುವವರೆಗೆ ನಮ್ಮ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಕಳೆದ 22 ವರ್ಷಗಳಿಂದ ಸರ್ಕಾರಿ ನೌಕರರು ಈ ರೀತಿಯ ಹೋರಾಟಕ್ಕೆ ಮುಂದಾಗಿರಲಿಲ್ಲ. ಆದರೆ ಅನಿವಾರ್ಯವಾಗಿ ಈಗ ನಮ್ಮ ಜೀವನಕ್ಕಾಗಿ ಈ ಹೋರಾಟ ನಡೆಸಬೇಕಾಗಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿ, ಯಾವುದೇ ತೀರ್ಮಾನ ತೆಗೆದುಕೊಂಡರೂ ಹೆದರುವುದಿಲ್ಲ. ನಾನು ಮಾತ್ರವಲ್ಲ, ಹತ್ತು ಲಕ್ಷ ಸರ್ಕಾರಿ ನೌಕರರೂ ಜೈಲಿಗೆ ಹೋಗಲು ಸಿದ್ಧರಾಗಿಯೇ ಈ ಹೋರಾಟಕ್ಕಿಳಿದಿದ್ದೇವೆ. ಎಸ್ಮಾ ಜಾರಿಗೆ ತಂದಿದ್ದ ತಮಿಳುನಾಡಿನ ಜಯಲಲಿತಾ ಸರ್ಕಾರದ ಕತೆ ಏನಾಗಿತ್ತು ಎಂಬುದನ್ನು ಸರ್ಕಾರ ನೆನಪಿಸಿಕೊಳ್ಳಲಿ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಬಜೆಟ್‌ನಲ್ಲಿ ಎಲ್ಲಿದೆ ತೋರಿಸಿ…

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ಮಂಗಳವಾರ ಮಾತನಾಡಿ 7ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಅನುಷ್ಠಾನ ಮಾಡಲಾಗುವುದು. ಬಜೆಟ್ ನಲ್ಲಿ ಅದಕ್ಕಾಗಿ ಹಣವನ್ನೂ ಮೀಸಲಿಡಲಾಗಿದೆ ಎಂದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಎಸ್‌. ಷಡಾಕ್ಷರಿ, ಬಜೆಟ್‌ನಲ್ಲಿ ಎಲ್ಲಿ ಇದಕ್ಕಾಗಿ ಹಣ ತೆಗೆದಿರಿಸಲಾಗಿದೆ ಎಂದು ತಿಳಿಸಲಾಗಿದೆ ಎಂಬುದನ್ನು ತೋರಿಸಿ ಎಂದು ಸವಾಲೊಡ್ಡಿದರು.

ಕಳೆದ ಎಂಟು ತಿಂಗಳಿನಿಂದ ನಾವು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದೇವೆ. ಆದರೆ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ಉದಾಸೀನತೆ ತೋರುತ್ತಾ ಬಂದಿದೆ. ನಾವು ಸರ್ಕಾರವನ್ನು ಟೀಕಿಸುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಅನಿವಾರ್ಯವಾಗಿ ಈ ಹೋರಾಟಕ್ಕಿಳಿದಿದ್ದೇವೆ ಎಂದು ಷಡಾಕ್ಷರಿ ಹೇಳಿದ್ದಾರೆ.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಎರಡೂ ಬೇಡಿಕೆ ಈಡೇರಬೇಕು

ನಾವು ಸರ್ಕಾರದ ಮುಂದೆ ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಆರಂಭಿಸುತ್ತಿದ್ದೇವೆ. ಇವುಗಳನ್ನು ಈಡೇರಿಸುವ ಕುರಿತು ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಸಂಘ ಸಭೆ ನಡೆಸಿ ಮುಂದೇನು ಎಂಬುದರ ಕುರಿತು ತೀರ್ಮಾನಿಸುತ್ತದೆ. ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ. ಒಂದು ವೇಳೆ ಸರ್ಕಾರ ವೇತನ ಹೆಚ್ಚಳದ ಕುರಿತು ಮಾತ್ರ ತೀರ್ಮಾನ ತೆಗೆದುಕೊಂಡರೆ ಹೋರಾಟದಿಂದ ಹಿಂದೆ ಸರಿಯುತ್ತೇವೆಂದೇನೂ ಇಲ್ಲ. ಎನ್‌ಪಿಎಸ್‌ ರದ್ದುಪಡಿಸಿ ಓಪಿಎಸ್‌ ಜಾರಿಗೆ ತರಬೇಕೆಂಬುದು ಕೂಡ ನಮ್ಮ‌ ಪ್ರಬಲ ಬೇಡಿಕೆಯಾಗಿದ್ದು, ಇದನ್ನೂ ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಒಂದು ವೇಳೆ ಈ ಹೋರಾಟದ ಸಂದರ್ಭದಲ್ಲಿ ಸರ್ಕಾರ ಎನ್‌ಪಿಎಸ್‌ ರದ್ದಿಗೆ ಮುಂದಾಗದಿದ್ದಲ್ಲಿ, ಆಗ ಮುಂದೇನು ಎಂಬುದರ ಕುರಿತು ಸಂಘದ ಪದಾಧಿಕಾರಿಗಳೆಲ್ಲರೂ ಸಭೆ ನಡೆಸಿ ತೀರ್ಮಾನಿಸುತ್ತೇವೆ. ಸದ್ಯದ ನಮ್ಮ ಬೇಡಿಕೆ ನಮ್ಮ ಎರಡೂ ಬೇಡಿಕೆಗಳನ್ನು ಈಡೇರಿಸಬೇಕೆಂದಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೋರಾಟಕ್ಕೆ ಬೆಂಬಲ ನೀಡಿ

ಕಳೆದ ಎಂಟು ತಿಂಗಳಿನಿಂದ ನಾವು ಮನವಿ ಮಾಡಿದರೂ ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಸುವತ್ತ ಗಮನ ನೀಡದೇ ಇದ್ದುದ್ದರಿಂದ ಅನಿವಾರ್ಯವಾಗಿ ಸೇವೆ ಬಹಿಷ್ಕರಿಸುವ ಈ ಹೋರಾಟವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಇದರಿಂದ ಶಾಲಾ-ಕಾಲೇಜುಗಳಲ್ಲಿ ಪರೀಕ್ಷೆ ನಡೆಯದೇ ಇರಬಹುದು, ಕುಡಿಯುವ ನೀರು, ಕಸ ವಿಲೇವಾರಿ ಹೀಗೆ ಅನೇಕ ಸಮಸ್ಯೆಗಳು ಸೃಷ್ಟಿಯಾಗಬಹುದು. ಇದಕ್ಕಾಗಿ ನಾವು ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸುತ್ತೇವೆ ಜತೆಗೆ ಸಾರ್ವಜನಿಕರೆಲ್ಲರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ, ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಸಿ. ಎಸ್‌. ಷಡಾಕ್ಷರಿ ಹೇಳಿದ್ದಾರೆ.

ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಆದಷ್ಟು ಬೇಗ ತೀರ್ಮಾನ ತೆಗೆದುಕೊಂಡರೆ ಸಾರ್ವಜನಿಕರಿಗೆ ತೊಂದರೆಯಾಗುವುದೂ ತಪ್ಪುತ್ತದೆ ಎಂದು ಹೇಳಿದ ಅವರು, ಚುನಾವಣೆ ಮತ್ತು ಪರಿಕ್ಷೆಯ ಈ ಹೊತ್ತನ್ನು ನಾವು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಪ್ರಸ್ತಾಪ ಇಲ್ಲದೇ ಇದ್ದುದ್ದರಿಂದ ಈ ಹೋರಾಟವನ್ನು ಈಗ ಕೈಗೆತ್ತಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬುಧವಾರದಿಂದ ಯಾವ ಸರ್ಕಾರಿ ನೌಕರರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಒಂದು ವೇಳೆ ಯಾರಾದರೂ ಕರ್ತವ್ಯಕ್ಕೆ ಹಾಜರಾಗಲು ಮುಂದಾದರೆ ಅವರ ಮನವೊಲಿಸಿ, ಈ ಮುಷ್ಕರವನ್ನು ಯಶಸ್ವಿಗೊಳಿಸಲಾಗುವುದು. ಇದಕ್ಕಾಗಿ ಸಂಘದ ವತಿಯಿಂದ ವಿಜೆಲೆನ್ಸ್‌ ಟೀಮ್‌ ಸಿದ್ಧಪಡಿಸಲಾಗಿದ್ದು, ಅವರು ಈ ಮುಷ್ಕರವು ಸಂಪೂರ್ಣ ಯಶಸ್ವಿಯಾಗುವಂತೆ ನೋಡಿಕೊಳ್ಳಲಿದ್ದಾರೆ ಎಂದು ಸಿ. ಎಸ್‌. ಷಡಾಕ್ಷರಿ ವಿವರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸರ್ಕಾರಿ ನೌಕರರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತಿರಿದ್ದು, ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ : 7th pay commission : ವದಂತಿಗಳನ್ನು ನಂಬಬೇಡಿ, ಸರ್ಕಾರಿ ಸೇವೆ ಬಂದ್‌ ಹೋರಾಟ ನಿಲ್ಲದು ಎಂದ ಸಿ. ಎಸ್‌. ಷಡಾಕ್ಷರಿ

Exit mobile version