Site icon Vistara News

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Govt employees ssociation

#image_title

ಬೆಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳ ಕೆಲಸ ಅವಧಿಯನ್ನು ಈಗಿರುವ ಏಳುವರೆ ಗಂಟೆ ಬದಲಾಗಿ ಎಂಟುವರೆ ಗಂಟೆಗೆ ವಿಸ್ತರಿಸಿ, ತಿಂಗಳ ಮೊದಲ ಮತ್ತು ಕೊನೆಯ ಶನಿವಾರ ಸಾರ್ವತ್ರಿಕ ರಜೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೇಡಿಕೆ ಮುಂದಿಟ್ಟಿದೆ. ಈಗಾಗಲೇ ವಾರದ ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುವುದರಿಂದ ಸಂಘವು ವಾರಕ್ಕೆ ಐದು ದಿನದ ಕೆಲಸಕ್ಕೆ ಬೇಡಿಕೆ ಇಟ್ಟಂತಾಗಿದೆ. ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ (7th pay commission) ಪ್ರಶ್ನಾವಳಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನೀಡಲಾದ ಉತ್ತರದಲ್ಲಿ ಈ ಬೇಡಿಕೆಯನ್ನು ಮುಂದಿಡಲಾಗಿದೆ.

ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಿಸಿತ್ತು. ಈ ಕುರಿತು ಶಿಫಾರಸುಗಳನ್ನು ಮಾಡುವ ಮುನ್ನ ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ಅರಿಯುವುದಕ್ಕಾಗಿ, ರಾಜ್ಯ ಸರ್ಕಾರಿ ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವೇತನ ಆಯೋಗವು ೨೦೨೩ರ ಜನವರಿ ೧೭ರಂದು ಪ್ರಶ್ನಾವಳಿಗಳನ್ನು ಬಿಡುಗಡೆಗೊಳಿಸಿ ಸರ್ಕಾರಿ ನೌಕರರ ಸಂಘದಿಂದ ಉತ್ತರ, ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿತ್ತು.

ಅದರಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ-ನೌಕರರಿಂದ ಮಾಹಿತಿಗಳನ್ನು ಸಂಗ್ರಹಿಸಿ ೬೫ ಪುಟಗಳ ವರದಿಯನ್ನು ತಯಾರಿಸಿತ್ತು. ಫೆಬ್ರವರಿ ೧೦ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ, ಸಂಘದ ಹಿರಿಯ ಪದಾಧಿಕಾರಿಗಳು ಮತ್ತು ವೃಂದ ಸಂಘದ ಅಧ್ಯಕ್ಷರ ನಿಯೋಗವು ಈ ವರದಿಯನ್ನು ವೇತನ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರಿಗೆ ಒಪ್ಪಿಸಿತು.

ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಗಳಿಗೆ ಸಲ್ಲಿಸಲಾದ ಉತ್ತರಗಳ ಮುಖ್ಯಾಂಶಗಳು

1. ಹೊಸ ವೇತನ ಶ್ರೇಣಿಗಳ ರಚನೆಗೆ ಅಳವಡಿಸಿಕೊಳ್ಳುವ ಮಾನದಂಡಗಳೇನಿರಬೇಕು?
– ಸಮಾನ ಕೆಲಸಕ್ಕೆ ಸಮಾನ ವೇತನ, ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ, ಜೊತೆಗೆ ನೆರೆ ರಾಜ್ಯ ಮತ್ತು ಕೇಂದ್ರ ವೇತನ ಮತ್ತು ಭತ್ಯೆಗಳ ಹೋಲಿಕೆ ಮಾಡಬೇಕು.

2. ಕಚೇರಿ ವೇಳೆಯನ್ನು ಹೆಚ್ಚಿಸಿ, ವಾರದ ಕರ್ತವ್ಯ ದಿನಗಳನ್ನು ಕಡಿಮೆ ಮಾಡುವ ಬಗ್ಗೆ
ಸರ್ಕಾರಕ್ಕೆ ಸಾರಿಗೆ, ವಿದ್ಯುತ್, ನೀರು, ಟ್ರಾಫಿಕ್, ಸರ್ಕಾರಿ ವಾಹನಗಳ ಇಂಧನ ಹಾಗೂ ವೆಚ್ಚದಲ್ಲಿ ಆರ್ಥಿಕ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನಿರ್ವಹಣೆ ನೌಕರರಿಗಿರುವಂತೆ-
– ಬೆಳಗ್ಗೆ 10.00ಕ್ಕೆ ಬದಲಾಗಿ ಬೆಳಿಗ್ಗೆ 9.30ರಿಂದ ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00ರವರೆಗೆ ಬದಲಾಯಿಸುವುದು.
– ತಿಂಗಳ ಮೊದಲ ಮತ್ತು ಮೂರನೆ ಶನಿವಾರ ಸಾರ್ವತ್ರಿಕ ರಜೆ ನೀಡುವುದು.

೩. ವೇತನ ಹೆಚ್ಚಳ ಹೊರೆ-ಸರಿದೂಗಿಸುವುದು ಹೇಗೆ?
– ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು.
– ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಿಸುವುದು.
– ನೌಕರರಲ್ಲಿ ದಕ್ಷತೆ ಮತ್ತು ನೈಪುಣ್ಯತೆ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಎಟಿಐ ಮಾದರಿ ತರಬೇತಿ ನೀಡುವುದು.

೪. ವೇತನ ಪರಿಷ್ಕರಣೆಗೆ ಕೇಂದ್ರ-ನೆರೆ ರಾಜ್ಯಗಳ ವೇತನ ಶ್ರೇಣಿಗಳನ್ನು ಪರಿಗಣಿಸಬೇಕೆ?
– ಅನುಕೂಲವಾಗುವ ಕೇಂದ್ರ ಮತ್ತು ಕೇರಳ ರಾಜ್ಯ ನೌಕರರ ವೇತನ-ಭತ್ಯೆಗಳನ್ನು ಪರಿಗಣಿಸುವುದು.

5. ಕೇಂದ್ರಕ್ಕೆ ಸಮಾನ ವೇತನ ನೀಡುವ ಸಾಧ್ಯತೆ ಬಗ್ಗೆ ಸಮಂಜಸವಾದ ಸಮರ್ಥನೆಗಳು
– 6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಹಾಲಿ ಇರುವ ಶೇ.31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ. 40ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು 01.07.2022ರಿಂದ ಜಾರಿಗೆ ತರುವುದು.
– 2026ರಲ್ಲಿ ಪರಿಷ್ಕರಣೆಯಾಗಲಿರುವ ಕೇಂದ್ರ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಈಗಾಗಲೇ 26 ರಾಜ್ಯಗಳಲ್ಲಿರುವಂತೆ ಯಥಾವತ್ತಾಗಿ ಅನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡುವುದು.

6. ಹಾಲಿ ಇರುವ ಮುಖ್ಯ ವೇತನ ಶ್ರೇಣಿ ಹಾಗೂ 25 ಪ್ರತ್ಯೇಕ ವೇತನ ಶ್ರೇಣಿಗಳನ್ನು ಮುಂದುವರಿಸಬಹುದೇ?
– ಹಾಲಿ ಇರುವ 25 ಮಾಸ್ಟರ್ ವೇತನ ಶ್ರೇಣಿ ಹಾಗೂ 92 ವೇತನ ಹಂತಗಳನ್ನು ಮುಂದುವರಿಸುವುದು.

7. ನೂತನ ವೇತನ ಶ್ರೇಣಿಗಳನ್ನು ಯಾವ ಆಧಾರ ಮೇಲೆ ರೂಪಿಸಬೇಕು?
– ಹೊಸ ವೇತನ ಶ್ರೇಣಿಗಳನ್ನು 2022ನೇ ಸಾಲಿನ ಬೆಲೆ ಸೂಚ್ಯಾಂಕದ 12 ತಿಂಗಳ ಸರಾಸರಿಯ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿಪಡಿಸುವುದು.

8. ಪ್ರಸ್ತುತ ವೇತನ ಮತ್ತು ಭತ್ಯೆಗಳು ಸೇರಿ ಮಾಹೆಯಾನ ಎಷ್ಟಿರಬೇಕು?
– ಕನಿಷ್ಠ 40% ಫಿಟ್‌ಮೆಂಟ್‌ನೊಂದಿಗೆ ಹಾಗೂ ಜೀವನ ನಿರ್ವಹಣೆಯನ್ನಾಧರಿಸಿ…
ಗ್ರೂಪ್ ‘ಡಿ’ ನೌಕರನ ಕನಿಷ್ಠ ಮೂಲ ವೇತನ ರೂ. 31,000ಕ್ಕೆ ನಿಗದಿಗೊಳಿಸುವುದು.

9. ಮುಖ್ಯ ವೇತನ ಶ್ರೇಣಿಯ ಗರಿಷ್ಠ ಹಾಗೂ ಕನಿಷ್ಠ ವೇತನಗಳ ನಡುವಿನ ಅನುಪಾತ ಪುನರ್‌ ಪರಿಶೀಲನೆ ಆಗಬೇಕೆ?
-ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಈಗಿರುವ ಅನುಪಾತ 1:5,20 ಬದಲಾಗಿ 1:8.86 ಕ್ಕೆ ನಿಗದಿಪಡಿಸಿ ಶಿಫಾರಸು ಮಾಡುವುದು.

10. ವೇತನ ಶ್ರೇಣಿಗಳ ನಡುವೆ ಇರುವ ಹೋಲಿಕೆ-ಜವಾಬ್ದಾರಿಗಳಿಗೆ ಅನುಗುಣವಾಗಿದೆಯೇ?
– ವೇತನ ಶ್ರೇಣಿಗಳ ನಡುವಿನ ಸಾಪೇಕ್ಷೆಗಳನ್ನು (Relativity) ಸಾಧ್ಯವಾದಷ್ಟು ಮಟ್ಟಿಗೆ ಹಾಗೆಯೇ ಮುಂದುವರಿಸುವುದು ಸಮಂಜಸವಾಗಿರುತ್ತದೆ.

11. ಸರ್ಕಾರಿ ನೌಕರರಿಗೆ ಸೇವೆಯಲ್ಲಿ ಎಷ್ಟು ಮುಂಬಡ್ತಿಗಳಿರಬೇಕು.
– ಒಬ್ಬ ಸರ್ಕಾರಿ ನೌಕರನಿಗೆ ಸೇವಾವಧಿಯಲ್ಲಿ ಕನಿಷ್ಠ 3-4 ಮುಂಬಡ್ತಿ ಅವಕಾಶಗಳು ಲಭ್ಯವಾಗುವಂತೆ ಶಿಫಾರಸ್ಸು ಮಾಡುವುದು.

ಸರ್ಕಾರಿ ನೌಕರರ ಸಂಘ ವತಿಯಿಂದ ಏಳನೇ ವೇತನ ಆಯೋಗದ ಅಧ್ಯಕ್ಷರಿಗೆ ಶಿಫಾರಸುಗಳನ್ನು ಸಲ್ಲಿಸಲಾಯಿತು.

12 ಕನಿಷ್ಠ ವಾರ್ಷಿಕ ವೇತನ ಬಡ್ತಿ ದರ ಎಷ್ಟಿರಬೇಕು?
– ವಾರ್ಷಿಕ ವೇತನ ಬಡ್ತಿಯ ದರವನ್ನು ಕೇರಳ ರಾಜ್ಯದ ಮಾದರಿಯಲ್ಲಿ ಮೂಲ ವೇತನಕ್ಕೆ 3.04% ರಷ್ಟು ನಿಗದಿಪಡಿಸುವುದು.

13. ಸ್ಥಗಿತ ವೇತನ ಬಡ್ತಿ ಸಂಖ್ಯೆ ಬಗ್ಗೆ ನಿಮ್ಮ ಅಭಿಮತ
– ಸ್ಥಗಿತ ವೇತನ ಬಡ್ತಿಯನ್ನು ಹಾಲಿ ಇರುವ 8ರಿಂದ 12ಕ್ಕೆ ಹೆಚ್ಚಿಸುವುದು ಹಾಗೂ ಕಚೇರಿ ಮುಖ್ಯಸ್ಥರು ಮಂಜೂರು ಮಾಡುವುದು.

14. ಸಚಿವಾಲಯ-ಸಚಿವಾಲಯೇತರ ಸಮಾನ ಹುದ್ದೆಗಳ ವೇತನ ಸಮಾನಾಂತರಗೊಳಿಸುವುದು.
– ಸಚಿವಾಲಯ-ಸಚಿವಾಲಯೇತರ ಸಮಾನ ಹುದ್ದೆಗಳ ವೇತನವನ್ನು ಸಮಾನಗೊಳಿಸಲು ಶಿಫಾರಸ್ಸು ಮಾಡುವುದು. ಸಚಿವಾಲಯ ಸಿಬ್ಬಂದಿಗೆ ಕೇಂದ್ರ ಸಚಿವಾಲಯದ ಮಾದರಿಯಲ್ಲಿ ಹಾಗೂ ವಿಧಾನಸಭೆ/ವಿಧಾನ ಪರಿಷತ್ ಸಚಿವಾಲಯಗಳ ನೌಕರರಿಗೆ ಲೋಕಸಭೆ/ರಾಜ್ಯಸಭೆ ಸಚಿವಾಲಯ ಮಾದರಿಯಲ್ಲಿ ಪ್ರತ್ಯೇಕ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಮಂಜೂರು ಮಾಡಲು ಶಿಫಾರಸು ಮಾಡುವುದು.

15. ವಿಶೇಷ ಭತ್ಯೆಗಳು ಹೇಗಿರಬೇಕು?
– ಅತ್ಯಂತ ವಿಶೇಷ-ಕ್ಲಿಷ್ಟಕರ, ಅನಾರೋಗ್ಯಕರ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯನ್ನು ದ್ವಿಗುಣಗೊಳಿಸುವುದು.

16. ತುಟ್ಟಿಭತ್ಯೆ ವಿಷಯದಲ್ಲಿ ಅಭಿಮತ
– ಪ್ರತಿ ಆರು ತಿಂಗಳಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಪರಿಷ್ಕೃತ ವೇತನದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ರಾಜ್ಯ ಸರ್ಕಾರಿ ನೌಕರರಿಗೆ ವಿಳಂಬವಿಲ್ಲದೆ ನೀಡುವುದು.

17. ಮನೆ ಬಾಡಿಗೆ ಭತ್ಯೆ
– ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಲಭ್ಯವಿರುವ 2021ರ ಜನಸಂಖ್ಯೆಯ ಮಾಹಿತಿಯನ್ನಾಧರಿಸಿ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಪುನರ್‌ವರ್ಗೀಕರಿಸುವುದು ಹಾಗೂ ಬಿಬಿಎಂಪಿ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಗಡಿ ವ್ಯಾಪ್ತಿಗೆ ವಿಸ್ತರಿಸುವುದು. ಪ್ರಸ್ತುತ ಜೀವನ ನಿರ್ವಹಣೆ ಆಧಾರದ ಮೇಲೆ ಈ ಕೆಳಕಂಡ ದರದಲ್ಲಿ ಮನೆ ಬಾಡಿಗೆ ಭತ್ಯೆ ನೀಡುವುದು.

೧. ‘ಎ’ ವರ್ಗಕ್ಕೆ -ಶೇ 24 ರಿಂದ ಶೇ.30%
2. ‘ಬಿ’ ವರ್ಗಕ್ಕೆ ಶೇ 16 ರಿಂದ ಶೇ.20
3. ‘ಸಿ’ ವರ್ಗಕ್ಕೆ ಶೇ.8% ರಿಂದ ಶೇ 15%

-ಕೇಂದ್ರ ಮಾದರಿಯಲ್ಲಿ ತುಟ್ಟಿಭತ್ಯೆಯು ಶೇ.25 ಮತ್ತು ಶೇ.50ರ ಹಂತವನ್ನು ತಲುಪಿದಾಗ ಮನೆ ಬಾಡಿಗೆ ಭತ್ಯೆಗಳನ್ನು ಸ್ವಯಂಚಾಲಿತವಾಗಿ ಶೇ. 3ರಷ್ಟು ಹೆಚ್ಚಿಸುವುದು.

18. ರಜಾ ಪ್ರಯಾಣ ರಿಯಾಯಿತಿ (LTC) ಹೇಗಿರಬೇಕು?
ನಮ್ಮ ರಾಜ್ಯದಲ್ಲಿ ಸೇವಾವಧಿಯಲ್ಲಿ 2 ಬಾರಿ ಇದ್ದು, ಕೇಂದ್ರ ಸರ್ಕಾರದಲ್ಲಿ (LTC) ಸೌಲಭ್ಯವು ಪ್ರತಿ 4 ವರ್ಷಕ್ಕೊಮ್ಮೆ ನೀಡುತ್ತಿದ್ದು, ಆದರಂತೆ ನೀಡುವುದು. ಹಾಗೂ ದಿನಭತ್ಯೆಯನ್ನು ಸಹ ನೀಡುವುದು.

19. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)
– ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯೋನ್ಮುಖವಾಗಿದೆ.
– ಸರ್ಕಾರಿ ನೌಕರರು ವಂತಿಗೆ ನೀಡುವುದರಿಂದ ಅವಲಂಬಿತರ ಆದಾಯದ ಮಿತಿಯನ್ನು ತೆಗೆದುಹಾಕುವುದು.
– ವಿವಾಹಿತ ಮಹಿಳಾ ಸರ್ಕಾರಿ ನೌಕರರ ತಂದೆ-ತಾಯಿಯವರನ್ನು ಈ ಯೋಜನೆಯ ವ್ಯಾಪ್ತಿಗೆ ತರುವುದು.
– ಎಲ್ಲಾ ವೈದ್ಯಕೀಯ ಸೇವೆಗಳು ವಿಳಂಬವಿಲ್ಲದೇ ಸರಳವಾಗಿ ಹಾಗೂ ತ್ವರಿತಗತಿಯಲ್ಲಿ ಲಭ್ಯವಾಗಬೇಕು.

20. ಮಹಿಳಾ ಉದ್ಯೋಗಿಗಳ ವಿಶೇಷ ಸಮಸ್ಯೆಗಳ ಕುರಿತು
ಈಗಿರುವ ಸೌಲಭ್ಯಗಳ ಜೊತೆಗೆ ಕೆಳಗಿನ ಸೌಲಭ್ಯಗಳನ್ನು ಒದಗಿಸುವುದು.
-ಮಕ್ಕಳಿಗೆ ದಿನಕ್ಕೆ 2 ಬಾರಿ ಸ್ತನ್ಯಪಾನಕ್ಕಾಗಿ ಅವಕಾಶ ನೀಡುವುದು.
– ನಿಗದಿತ ವೇಳೆಯ ನಂತರ ಕೆಲಸ ಮಾಡಿದ ಸಂದರ್ಭದಲ್ಲಿ ಸುರಕ್ಷಿತವಾಗಿ ಮನೆಗೆ ಬಿಡುವುದು.
– ತಮ್ಮ ಕಾರ್ಯವ್ಯಾಪ್ತಿಯಲ್ಲಿ ಶುಚಿತ್ವವಾದ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು.
– ಬಾಡಿಗೆ ತಾಯ್ತನದ ಮಹಿಳಾ ನೌಕರರಿಗೆ ಶಿಶುಪಾಲನಾ, ಹೆರಿಗೆ ರಜೆ ಮಂಜೂರು ಮಾಡುವುದು.
– ಹಾಲಿ ಇರುವ ಶಿಶುಪಾಲನಾ ರಜೆಯ ಮಂಜೂರಾತಿಯನ್ನು ಕನಿಷ್ಠ 15 ದಿನಗಳ ಬದಲಾಗಿ 7 ದಿನಗಳಿಗೆ ನಿಗದಿಪಡಿಸುವುದು.

21. ಇತರೆ ಭತ್ಯೆಗಳು
– ಬೆಟ್ಟಗುಡ್ಡಗಳಿರುವ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ನೌಕರರಿಗೆ ಗಿರಿಭತ್ಯೆಯನ್ನು ಮಂಜೂರು ಮಾಡುವುದು.
– ಪ್ರಸ್ತುತ ನೀಡುತ್ತಿರುವ ವಾಹನ ಭತ್ಯೆ, ಸಮವಸ್ತ್ರ ಭತ್ಯೆ, ಅನ್ಯಸೇವೆ ಭತ್ಯೆ, ವಿಶೇಷಭತ್ಯೆಗಳನ್ನು ದ್ವಿಗುಣಗೊಳಿಸುವುದು.
– ನಿಗದಿತ ಪ್ರಯಾಣ ಭತ್ಯೆ, ಅನ್ಯಸೇವೆ ಭತ್ಯೆ ಹಾಗೂ ಪ್ರಭಾರ ಭತ್ಯೆ ದರವನ್ನು ಹೆಚ್ಚಿಸುವುದು.

22. ವರ್ಗಾವಣೆ ಅನುದಾನ-ಸಾಮಾನು ಸಾಗಣೆ ವೆಚ್ಚ
– ಕೇಂದ್ರ ಮಾದರಿಯಂತೆ ವರ್ಗಾವಣೆಗೊಂಡ/ವಯೋನಿವೃತ್ತಿ ಹೊಂದುವ ರಾಜ್ಯ ಸರ್ಕಾರಿ ನೌಕರರಿಗೆ ಕೊನೆ ಮಾಹೆಯ ಮೂಲವೇತನದ ಶೇ. 8೦ರಷ್ಟು ವರ್ಗಾವಣೆ ಅನುದಾನ ಮತ್ತು ಸಾಮಾನು ಸರಂಜಾಮು ಸಾಗಣೆ ಭತ್ಯೆಯನ್ನು ನೀಡುವಂತೆ ಶಿಫಾರಸ್ಸು ಮಾಡುವುದು.

23. ಪ್ರಯಾಣ ಭತ್ಯೆ ಹಾಗೂ ದಿನಭತ್ಯೆ
ಹಾಗೂ ಊಟ-ಉಪಹಾರಗಳು, ಇಂಧನ ಬೆಲೆ, ಪ್ರಯಾಣ ಸಾರಿಗೆ ವೆಚ್ಚ, ವಸತಿ ದುಬಾರಿಯಾಗಿರುವುದರಿಂದ ಪ್ರಯಾಣ ಭತ್ಯೆ, ದಿನಭತ್ಯೆ ವಿಮಾನ,ರೈಲು ಮತ್ತು ಬಸ್ಸಿನ ದರಗಳನ್ನು ಹೆಚ್ಚಿಸುವುದು.

24. (ಎ)ರಜೆ ಸೌಲಭ್ಯಗಳು ಮತ್ತು ಗಳಿಕೆ ರಜೆ ಅಧ್ಯರ್ಪಣೆ ನಗದೀಕರಣ ಮತ್ತು ನಿವೃತ್ತಿ-ಗಳಿಕೆ ರಜಾ ನಗದೀಕರಣ
– ರಜೆ ಸೌಲಭ್ಯವನ್ನು ಪಡೆಯುವ ಉದ್ದೇಶಕ್ಕಾಗಿ ಮಾತ್ರ ಗಳಿಕೆ ರಜೆಯ ಮಿತಿಯನ್ನು ತೆಗೆದು ಹಾಕುವುದು.
– ನಿವೃತ್ತಿ ನಂತರ 300 ಗಳಿಕೆ ರಜಾ ದಿನಗಳ ನಗದೀಕರಣ ಸೌಲಭ್ಯದ ಗರಿಷ್ಠ ಮಿತಿಯನ್ನು 330ಕ್ಕೆ ಹೆಚ್ಚಿಸುವುದು.
ಬಿ. ಬೈಸಿಕಲ್, ಮೋಟಾರು ವಾಹನ, ಗೃಹ ನಿರ್ಮಾಣ, ಗೃಹ ರಿಪೇರಿ ಮುಂಗಡ
– ರೂ. 25,000-00 ಗಳ ಬಡ್ಡಿರಹಿತ ಹಬ್ಬದ ಮುಂಗಡವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಎಲ್ಲಾ ನೌಕರರಿಗೂ ಮಂಜೂರು ಮಾಡುವುದು.
– ಎಲ್ಲಾ ಮುಂಗಡಗಳ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುವುದು.
– ಮುಂಗಡದ ಮೊತ್ತವನ್ನು ಮಾರುಕಟ್ಟೆಗಳಿಗೆ ಅನುಗುಣವಾಗಿ ಹೆಚ್ಚಿಸುವುದು.
– ಕನಿಷ್ಠ ವೇತನದ ಮಿತಿಯನ್ನು (Home take Salary) ಶೇ. 60% ರಿಂದ ಶೇ. 40%ಕ್ಕೆ ನಿಗದಿಗೊಳಿಸುವುದು.

(ಸಿ)ಅಂಧ ಮತ್ತು ಅಂಗವಿಕಲ ನೌಕರರಿಗೆ ಈಗ ನೀಡಲಾಗುತ್ತಿರುವ ಮಾಹೆಯಾನ ಮೂಲ ವೇತನದ ಶೇಕಡ 6 ರಂತೆ ವಾಹನ ಭತ್ಯೆ.
– ಅಂಧ ಮತ್ತು ಅಂಗವಿಕಲ ನೌಕರರ ವಾಹನ ಭತ್ಯೆಯನ್ನು ಮೂಲ ವೇತನದ ಶೇ. ೬ರಿಂದ ಶೇ. 10ಕ್ಕೆ ಹೆಚ್ಚಳ ಮಾಡಲು ಶಿಫಾರಸ್ಸು ಮಾಡುವುದು.

25. ಸಾಮೂಹಿಕ ವಿಮಾ ಯೋಜನೆ
– ಒಂದು ಯುನಿಟ್ ದರ ರೂ. 120/-ರಿಂದ 1200/ ಕ್ಕೆ ಹೆಚ್ಚಿಸುವ ಮೂಲಕ ವಿಮಾ ಮೊತ್ತವನ್ನು ಹೆಚ್ಚಿಸುವುದು.
– ಉಳಿತಾಯ ನಿಧಿ ಮತ್ತು ವಿಮಾ ನಿಧಿ ಸದ್ಯದ 70:30ರ ಅನುಪಾತವನ್ನು 75:25 ಮಾರ್ಪಡಿಸುವುದು.
– ಉಳಿತಾಯ ನಿಧಿ ಮೇಲಿನ ಬಡ್ಡಿ ದರವನ್ನು ಶೇ.2ರಷ್ಟು ಹೆಚ್ಚಿಸುವುದು.

26. ಸ್ವಇಚ್ಛಾ ನಿವೃತ್ತಿ
– ಸ್ವಇಚ್ಛಾ ನಿವೃತ್ತಿಗೆ 15 ವರ್ಷ ಕನಿಷ್ಠ ಸೇವೆ ಅಥವಾ 50 ವರ್ಷ ವಯಸ್ಸು ಎನ್ನುವ ಬದಲಾಗಿ 12 ವರ್ಷಗಳ ಸೇವಾವಧಿ ಅಥವಾ 45 ವರ್ಷಗಳ ವಯಸ್ಸಾಗಿರಬೇಕೆಂದು ತಿದ್ದುಪಡಿ ಮಾಡುವುದು.

27. ಪಿಂಚಣಿ ಪ್ರಯೋಜನಗಳು
– ನಿವೃತ್ತಿ ಪಿಂಚಣಿಗಾಗಿ ಕನಿಷ್ಠ ಸೇವೆ-30 ರಿಂದ 25ಕ್ಕೆ ಇಳಿಸುವುದು.
– ಕುಟುಂಬ/ವಿಶ್ರಾಂತಿ ಪಿಂಚಣಿ ಕನಿಷ್ಠ ೧೬,೫೦೦ರಿಂದ ಗರಿಷ್ಠ ರೂ.1,50,000ಕ್ಕೆ ಹೆಚ್ಚಿಸುವುದು.
-ಮರಣ-ನಿವೃತ್ತಿ ಉಪದಾನ-ಗರಿಷ್ಠ ಮಿತಿಯನ್ನು 20 ಲಕ್ಷಗಳಿಂದ 25 ಲಕ್ಷಗಳಿಗೆ ಹೆಚ್ಚಿಸುವುದು.
– ಪರಿವರ್ತಿತ ಹಣವನ್ನು 15 ವರ್ಷಗಳ ಕಾಲ ಪ್ರತಿ ತಿಂಗಳ ಪಿಂಚಣಿಯಲ್ಲಿ ಕಟಾಯಿಸುವ ಪದ್ಧತಿಯನ್ನು ಕೈಬಿಟ್ಟು 12 ವರ್ಷಗಳ ಕಾಲ ಮಾತ್ರ ಪಿಂಚಣಿಯಲ್ಲಿ ಕಟಾಯಿಸುವುದು.

28. ಪಿಂಚಣಿ ಪಾವತಿ ನಿಯಮ ಸರಳೀಕರಣ
-ಎಲೆಕ್ಟ್ರಾನಿಕ್ ಸರ್ವೀಸ್ ರಿಜಿಸ್ಟರ್ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸಿ ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ಸವಲತ್ತುಗಳನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದ ಮೂಲಕವೇ ಪಡೆಯುವ ಅವಕಾಶ ಕಲ್ಪಿಸುವುದು.

29. ನಿವೃತ್ತ ಪಿಂಚಣಿದಾರರಿಗೆ ತುಟ್ಟಿಭತ್ಯೆ
-ಸೇವಾನಿರತ ನೌಕರರಿಗೆ ನೀಡುವ ವಾರ್ಷಿಕ ವೇತನ ಬಡ್ತಿ ದರದಲ್ಲಿಯೇ ನಿವೃತ್ತ ನೌಕರರಿಗೂ ಸಹ ಸಮನಾಂತರ ತುಟ್ಟಿಭತ್ಯೆಯನ್ನು ನೀಡಲು ಶಿಫಾರಸು ಮಾಡುವುದು.

30. 80 ವರ್ಷ ಮೇಲ್ಪಟ್ಟವರಿಗೆ ಹೆಚ್ಚುವರಿ ನಿವೃತ್ತಿ ವೇತನ
– 80 ವರ್ಷ ಮೇಲ್ಪಟ್ಟವರಿಗೆ ಪಿಂಚಣಿದಾರರಿಗೆ ವಯೋಮಾನವನ್ನಾಧರಿಸಿ ಹೆಚ್ಚುವರಿ ಪಿಂಚಣಿಯನ್ನು ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡುವುದು.

31. ಕುಟುಂಬ ಪಿಂಚಣಿ
– ಹಾಲಿ ಇರುವ ಶೇ. 30 ಕುಟುಂಬ ಪಿಂಚಣಿಯ ಪ್ರಮಾಣವನ್ನು ಮೂಲ ವೇತನದ ಶೇ. 40ಕ್ಕೆ ಹೆಚ್ಚಳ ಮಾಡುವುದು.

32. ರಾಷ್ಟ್ರೀಯ ಪಿಂಚಣಿ ಯೋಜನೆ
– ರಾಷ್ಟ್ರದ ಕೆಲವು ರಾಜ್ಯಗಳು ಈಗಾಗಲೇ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿರುವ ಮಾದರಿಯಂತೆ ರಾಜ್ಯದಲ್ಲೂ ಸಹ ಎನ್.ಪಿ.ಎಸ್ ಯೋಜನೆಯನ್ನು ರದ್ದುಗೊಳಿಸಿ ದಿನಾಂಕ:01-4-2006 ರಿಂದ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು.
-ಸೇವೆಯಲ್ಲಿರುವ ಎನ್.ಪಿ.ಎಸ್. ಯೋಜನೆಗೆ ಒಳಪಡುವ ನೌಕರನಿಂದ ಇದುವರೆವಿಗೂ ಕಟಾವಣೆಗೊಂಡಿರುವ ಯೋಜನೆಯ ಒಟ್ಟು ಮೊತ್ತವನ್ನು ನೌಕರನಿಗೆ ಹಿಂದಿರುಗಿಸುವುದು ಅಥವಾ ಸಾಮಾನ್ಯ ಭವಿಷ್ಯನಿಧಿ ಖಾತೆ (ಜಿ.ಪಿ.ಎಫ್) ತೆರೆದು ವರ್ಗಾಯಿಸುವುದು.
-ವಯೋನಿವೃತ್ತಿ/ಮೃತಪಟ್ಟಿರುವ ನೌಕರನ ಸೇವಾವಧಿಯಲ್ಲಿ ಕಟಾವಣೆಗೊಂಡ ಎನ್.ಪಿ.ಎಸ್. ಮೊತ್ತವನ್ನು ಅವಲಂಬಿತ ಕುಟುಂಬ ಸದಸ್ಯರಿಗೆ ಮರುಪಾವತಿಸುವುದು.

– ಈಗಾಗಲೇ ಎನ್.ಪಿ.ಎಸ್. ಯೋಜನೆಗೆ ಒಳಪಟ್ಟು ವಯೋನಿವೃತ್ತಿ/ಮೃತಪಟ್ಟಿರುವ ನೌಕರರಿಗೆ ಹಾಗೂ ಸೌಲಭ್ಯಗಳನ್ನು ಹಳೆ ಪಿಂಚಣಿದಾರರ ಮಾದರಿಯಲ್ಲಿ ನಿವೃತ್ತಿ ವೇತನ ಜಾರಿಗೊಳಿಸುವುದು.

33. ಪ್ರಶ್ನಾವಳಿಯಲ್ಲಿ ಒಳಗೊಂಡಿರದ ವಿಷಯಗಳು
– 2,50,363 ಖಾಲಿ ಹುದ್ದೆಗಳ ಭರ್ತಿ ಮಾಡಿ ನೌಕರರನ್ನು ಒತ್ತಡದಿಂದ ಮುಕ್ತಿಗೊಳಿಸಿ ಸಮುದಾಯಕ್ಕೆ ಗುಣಮಟ್ಟದ ನಾಗರಿಕ ಸೇವೆಗಳನ್ನು ನೀಡಲು ಶಿಫಾರಸು ಮಾಡುವುದು.
– ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದಲ್ಲಿ ಪ್ರೋತ್ಸಾಹ ಧನವನ್ನು ನೀಡುವುದು.
-ಶವಸಂಸ್ಕಾರ ಭತ್ತೆಯನ್ನು ರೂ.15000-00 ಗಳನ್ನು 30,000 ರೂ.ಗೆ ಹೆಚ್ಚಿಸುವುದು.
-ಕೇಂದ್ರ ಮಾದರಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಭತ್ಯೆ ಯೋಜನೆ ಜಾರಿಗೆ ತರುವುದು.

ಇದನ್ನೂ ಓದಿ : CLT Exam | ಸರ್ಕಾರಿ ನೌಕರರ ಕಂಪ್ಯೂಟರ್‌ ಟೆಸ್ಟ್‌; ಗಡುವು ಮಾ.31ರ ವರೆಗೆ ವಿಸ್ತರಣೆ

ವಿಸ್ತಾರ ನ್ಯೂಸ್​ನ ಇನ್ನಷ್ಟು ಸುದ್ದಿಗಳಿಗೆ https://www.facebook.com/vistaranewsspecial ಫೇಸ್​ಬುಕ್​ ಪೇಜ್​ ಫಾಲೊ ಮಾಡಿ.

Exit mobile version