ಬೆಂಗಳೂರು: ಏಳನೇ ವೇತನ ಆಯೋಗದ (7th Pay commission) ಶಿಫಾರಸುಗಳ ಜಾರಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ನೀಡಿರುವ ಭರವಸೆ ಸ್ಪಷ್ಟತೆಯಿಂದ ಕೂಡಿಲ್ಲ. ಹಾಗಾಗಿ ಮಾ.1ರಿಂದ ನಡೆಸಲು ಉದ್ದೇಶಿಸಿರುವ ಸರ್ಕಾರಿ ನೌಕರರ ಮುಷ್ಕರ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಹೇಳಿದ್ದಾರೆ.
ಈ ಕುರಿತು ವಿಸ್ತಾರ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಅವರು, ಸಿಎಂ ಬೊಮ್ಮಾಯಿ ಅವರು ಸ್ಪಷ್ಟ ಭರವಸೆ ನೀಡಿದರೆ ಮಾತ್ರ ಮುಷ್ಕರ ವಾಪಸ್ ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು. ಈಗಾಗಲೇ ಸರ್ಕಾರಿ ನೌಕರರು ಮುಷ್ಕರಕ್ಕೆ ಸಜ್ಜಾಗಿದ್ದಾರೆ ಎಂದು ತಿಳಿಸಿದ್ದಾರೆ.
7ನೇ ವೇತನ ಆಯೋಗ ಶಿಫಾರಸು ಕುರಿತ ವರದಿ ಸರ್ಕಾರದ ಬಳಿಯೇ ಸಿದ್ಧವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಯಾವುದೇ ವಿಳಂಬ ಮಾಡದೆ ನೌಕರರ ಪರ ನಿಲುವನ್ನು ಪ್ರಕಟಿಸಬೇಕು. ಎನ್ ಪಿ ಎಸ್ ಜಾರಿ ಕುರಿತೂ ಗೊಂದಲ ಬಗೆಹರಿಸಬೇಕು ಎಂದು ಷಡಾಕ್ಷರಿ ಅವರು ಆಗ್ರಹಿಸಿದ್ದಾರೆ.
ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದ್ದೇನು?
ಏಳನೇ ವೇತನ ಆಯೋಗದ ಮಧ್ಯಂತರ ವರದಿಯನ್ನು ಮಾರ್ಚ್ ಅಂತ್ಯದೊಳಗೆ ಪಡೆದು ಅದರ ಶಿಫಾರಸುಗಳನ್ನು ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಹೇಳಿದ್ದರು. ಈ ಬಗ್ಗೆ ನೌಕರರ ಸಂಘಟನೆಗಳ ಜತೆ ಮಾತುಕತೆ ನಡೆಸುವುದಾಗಿಯೂ ತಿಳಿಸಿದ್ದರು.
೭ನೇ ವೇತನ ಆಯೋಗದ ವರದಿ ಜಾರಿಗೆ ಸಂಬಂಧಿಸಿ ಸರ್ಕಾರ ಸ್ಪಷ್ಟವಾದ ಭರವಸೆ ನೀಡದೆ ಇದ್ದರೆ, ಬದ್ಧತೆ ತೋರದೆ ಇದ್ದರೆ ಮಾರ್ಚ್ ೧ರಿಂದ ಎಲ್ಲ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರ ನಡೆಸಲಿದ್ದಾರೆ ಎಂದು ನೌಕರರ ಸಂಘಟನೆಗಳ ಒಕ್ಕೂಟ ಹೇಳಿದೆ. ಇದರಲ್ಲಿ ಶಿಕ್ಷಕರೂ ಭಾಗಿಯಾಗುವುದರಿಂದ ಮಾರ್ಚ್ ಆರಂಭದಲ್ಲಿ ನಿಗದಿಯಾಗಿರುವ ಪರೀಕ್ಷೆಗಳ ಕಥೆ ಏನು ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ.