Site icon Vistara News

7th Pay commission : ಮಾ.1 ರಿಂದ ಸರ್ಕಾರಿ ನೌಕರರ ಮುಷ್ಕರ ಖಚಿತ; ಆಸ್ಪತ್ರೆ, ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಸೇವೆ ಬಂದ್‌

karnataka government employees withdraan their strike

ಸಿ ಎಸ್‌ ಷಡಾಕ್ಷರಿ

ಶಿವಮೊಗ್ಗ: ಏಳನೇ ವೇತನ ಆಯೋಗದ (7th Pay commission) ಶಿಫಾರಸುಗಳ ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗಾಗಿ ಒತ್ತಾಯಿಸಿ ಈಗಾಗಲೇ ತೀರ್ಮಾನಿಸಿದಂತೆ ಸರ್ಕಾರಿ ನೌಕರರೆಲ್ಲರೂ ಒಗ್ಗಟ್ಟಾಗಿ ಮಾ.1 ರಿಂದ ಮುಷ್ಕರ ಆಂರಭಿಸುತ್ತೇವೆ. ಇದು ಖಚಿತ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.

ವೇತನ ಹೆಚ್ಚಳದ ಕುರಿತು ಸರ್ಕಾರ ಬಾಯಿ ಮಾತಿನ ಹೇಳಿಕೆ ನೀಡುತ್ತಿದೆ. ಆದರೆ ಈ ಸಂಬಂಧ ಆದೇಶ ಹೊರಡಿಸಲು ಯಾವುದೇ ತೊಂದರೆಗಳಿಲ್ಲ. ಇದಕ್ಕಾಗಿ ನಾವು ಕಳೆದ ಎಂಟು ತಿಂಗಳಿನಿಂದ ಕಾಯುತ್ತಿದ್ದೇವೆ. ಬಜೆಟ್‌ನಲ್ಲಿ ಈ ಬಗ್ಗೆ ಪ್ರಕಟಿಸಲಾಗುತ್ತದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಅಲ್ಲದೆ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂಬುದು ನಮ್ಮ ಇನ್ನೊಂದು ಪ್ರಮುಖ ಬೇಡಿಕೆಯಾಗಿದ್ದು, ಈ ಬಗ್ಗೆಯೂ ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಹೀಗಾಗಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಸರ್ಕಾರದ ಎಲ್ಲ ಸೇವೆಗಳೂ ಬಂದ್‌
ಎಲ್ಲ ಇಲಾಖೆಗಳ ಮತ್ತು ವೃಂದಗಳ ಸರ್ಕಾರಿ ನೌಕರರೂ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತು ಪಡಿಸಿ ಮತ್ತೆಲ್ಲಾ ಸೇವೆಗಳು ಬಂದ್‌ ಆಗಲಿವೆ. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುವುದಿಲ್ಲ, ಕಂದಾಯ ಇಲಾಖೆಯ ಸೇವೆಗಳು, ವಿಧಾನಸೌಧದ ಕಚೇರಿಗಳು ಬಂದ್‌ ಆಗಲಿವೆ ಎಂದು ಷಡಾಕ್ಷರಿ ತಿಳಿಸಿದರು. ಈಗಾಗಲೇ ಆರಂಭವಾಗಿರುವ ಪ್ರಿಪ್ರೆಟರಿ ಪರೀಕ್ಷೆಗಳನ್ನು ನಿಲ್ಲಿಸುವುದು ಕೂಡ ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.

ಹೋರಾಟದ ಸಂದರ್ಭದಲ್ಲಿ ನಾವು ಸರ್ಕಾರದ ವಿರುದ್ಧ ಘೋಷಣೆ ಕೂಗುವುದಿಲ್ಲ. ಸಾವಿರಾರು ನೌಕರರನ್ನು ಒಂದೆಡೆ ಸೇರಿಸಿ ಧರಣಿ ನಡೆಸುವುದಿಲ್ಲ. ಆದರೆ ಎಲ್ಲ ಸರ್ಕಾರಿ ನೌಕರರೂ ಕರ್ತವ್ಯಕ್ಕೆ ಗೈರಾಗುವ ಮೂಲಕ ಮನೆಯಲ್ಲಿಯೇ ಇರುತ್ತೇವೆ. ಭವಿಷ್ಯದ ಬದುಕಿಗಾಗಿ ಈ ರೀತಿ ಕರ್ತವ್ಯಕ್ಕೆ ಗೈರು ಹಾಜರಾಗುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಈ ಹೋರಾಟ ನಡೆಯಲಿದೆ. ಇದು ಅನಿರ್ಧಿಷ್ಟಾವಧಿಯ ಹೋರಾಟವಾಗಿದೆ ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಸಂಘದ ಪತ್ರಿಕಾಗೋಷ್ಠಿ

ಸರ್ಕಾರದ ಎಲ್ಲ ಇಲಾಖೆಗಳ, ವೃಂದಗಳ ನೌಕರೂ ಇದರಲ್ಲಿ ಭಾಗಿಯಾಗುತ್ತಾರೆ. ಇದು ಹೋರಾಟದ ಮೊದಲ ಹಂತ, ಇದಕ್ಕೂ ಸರ್ಕಾರ ಬಗ್ಗದೇ ಇದ್ದಲ್ಲಿ ಮುಂದಿನ ಹೋರಾಟದ ಕುರಿತು ಸರ್ಕಾರಿ ನೌಕರರ ಕುಟುಂಬದ ಒಟ್ಟು 16 ಸದಸ್ಯರೆಲ್ಲರೂ ಸೇರಿ ತೀರ್ಮಾನಿಸುತ್ತೇವೆ ಎಂದು ಹೇಳಿದ ಅವರು, ದೇಶದಲ್ಲಿಯೇ ಅತ್ಯಂತ ಹೆಚ್ಚು ಸರ್ಕಾರಕ್ಕೆ ಆದಾಯ ತರುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಆದರೆ ದೇಶದಲ್ಲಿಯೇ ಅತ್ಯಂತ ಕಡಿಮೆ ವೇತನವನ್ನು ನಮ್ಮ ನೌಕರರಿಗೆ ನೀಡಲಾಗುತ್ತಿದೆ. ಸರ್ಕಾರಿ ನೌಕರರ ಬಗ್ಗೆ ಸರ್ಕಾರ ಉದಾಸೀನತೆ ತೋರುತ್ತಿರುವುದರಿಂದ ಅಸಮಾಧಾನಗೊಂಡು, ಅನಿವಾರ್ಯವಾಗಿ ಈ ಹೋರಾಟಕ್ಕಿಳಿದಿದ್ದೇವೆ ಎಂದು ಹೇಳಿದರು.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ದಿನಾಂಕ 01-07-2022ರಿಂದ ಜಾರಿಗೆ ಬರುವಂತೆ ಶೇ.40 ರಷ್ಟು ವೇತನ ಹೆಚ್ಚಳ ಮಾಡಬೇಕು. ಸರ್ಕಾರಿ ಆದೇಶ ಹೊರಡಿಸುವ ಮೂಲಕ ಇದನ್ನು ಅನುಷ್ಠಾನಗೊಳಿಸಬೇಕು. ಇದರ ಜತೆಗೆ ಪಂಜಾಬ್, ರಾಜಸ್ಥಾನ, ಛತ್ತಿಸ್‌ಗಢ, ಜಾರ್ಖಂಡ್, ಹಿಮಾಚಲಪ್ರದೇಶ ರಾಜ್ಯಗಳ ಮಾದರಿಯಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಹೋರಾಟಕ್ಕೆ ಸೋಲಾಗುತ್ತದೆಯೋ, ಗೆಲುವಾಗುತ್ತದೆಯೋ ಎಂದು ನಾವು ಯೋಚಿಸುವುದಿಲ್ಲ. ಮುಷ್ಕರ ನಡೆಸದೇ ಸರ್ಕಾರದ ಗಮನ ಸೆಳೆಯಲು ನಾವು ಸರ್ವ ರೀತಿಯಲ್ಲಿಯೂ ಪ್ರಯತ್ನಿಸಿದ್ದೇವೆ. 2015 ರಲ್ಲಿ ಒಂದು ದಿನ ಮುಷ್ಕರ ನಡೆಸಿದ್ದನ್ನು ಬಿಟ್ಟರೆ ನಾವು ಎಂದೂ ಈ ರೀತಿಯ ಹೋರಾಟವನ್ನು ಇತ್ತೀಚೆಗೆ ಕೈಗೊಂಡಿರಲಿಲ್ಲ. ಆದರೆ ಸರ್ಕಾರ ನಮ್ಮ ಬಗ್ಗೆ ತೋರುತ್ತಿರುವ ಉದಾಸೀನತೆ ಎಲ್ಲ ನೌಕರರಿಗು ಬೇಸರ ಮೂಡಿಸಿದೆ. ಅವರೆಲ್ಲರ ಒತ್ತಾಯದಂತೆ 200 ಕ್ಕೂ ಹೆಚ್ಚಿರುವ ವಿವಿಧ ವೃಂದಗಳನ ನೌಕರ ಸಂಘಟನೆಗಳು, ಐದು ಸಾವಿರ ಚುನಾಯಿತ ಪ್ರತಿನಿಧಿಗಳು ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸಿ ಎಸ್‌ ಷಡಾಕ್ಷರಿ ತಿಳಿಸಿದರು.

ಇದನ್ನೂ ಓದಿ 7th Pay commission : ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಮಧ್ಯಂತರ ವರದಿ ಶಿಫಾರಸು ಜಾರಿಗೆ ಕ್ರಮ ಎಂದು ಘೋಷಿಸಿದ ಸಿಎಂ

Exit mobile version