Site icon Vistara News

7th Pay Commission : ಪ್ರಶ್ನಾವಳಿಗೆ ಉತ್ತರಿಸಲು ಕೊನೆಯ ದಿನಾಂಕ ವಿಸ್ತರಿಸಿದ ಆಯೋಗ

7th Pay Commission

7th Pay Commission

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗವು (7th Pay Commission) ತಾನು ಪ್ರಕಟಿಸಿರುವ ಪ್ರಶ್ನಾವಳಿಗಳಿಗೆ ಉತ್ತರ ನೀಡಲು ನಿಗದಿಪಡಿಸಿದ್ದ ಗಡುವನ್ನು ವಿಸ್ತರಿಸಿದೆ. ಈಗ ಫೆಬ್ರವರಿ 28ರವರೆಗೂ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು ಈ ಪ್ರಶ್ನಾವಳಿಗೆ ತಮ್ಮ ಉತ್ತರ, ಅನಿಸಿಕೆ ಹಾಗೂ ಸಲಹೆಗಳನ್ನು ನೀಡಬಹುದಾಗಿದೆ.

ಈ ಮೊದಲು ಹೊರಡಿಸಿದ್ದ ಅಧಿಸೂಚನೆಯಲ್ಲಿ ಪ್ರಶ್ನಾವಳಿಗಳಿಗೆ ಉತ್ತರ ನೀಡಲು ಫೆಬ್ರವರಿ ೧೦ ಕೊನೆಯ ದಿನವೆಂದು ಪ್ರಕಟಿಸಲಾಗಿತ್ತು. ಆಯೋಗವು ಬಿಡುಗಡೆ ಮಾಡಿದ್ದ ಪ್ರಶ್ನಾವಳಿಗಳಿಗೆ ಇನ್ನೂ ಸಂಬಂಧಿಸಿದ ಎಲ್ಲ ವರ್ಗಗಳಿಂದ ಪ್ರತಿಕ್ರಿಯೆ ಹಾಗೂ ಉತ್ತರಗಳು ಸ್ವೀಕೃತವಾಗಿಲ್ಲ. ಅಲ್ಲದೆ, ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಉತ್ತರ ಹಾಗೂ ಸಲಹೆಗಳನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶವನ್ನು ಕೋರಿದ್ದು, ಕಾಲಾವಕಾಶವನ್ನು ವಿಸ್ತರಿಸುವುದು ಅಗತ್ಯವೆಂದು ಮನಗಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗವು ಹೇಳಿದೆ.

ಈ ಸಂಬಂಧ ಮಂಗಳವಾರ ವಿಶೇಷ ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದೆ. ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಇಲಾಖಾ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ವಿಶ್ವವಿದ್ಯಾನಿಲಯಗಳ ಬೋಧಕ ಸಿಬ್ಬಂದಿ ವರ್ಗ, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಪ್ರಶ್ನಾವಳಿಯನ್ನು ರೂಪಿಸಿ ಈ ಹಿಂದೆಯೇ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ರಾಜ್ಯ ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘ, ಎನ್‌ಪಿಎಸ್‌ ನೌಕರರ ಸಂಘ, ನಿವೃತ್ತ ನೌಕರರ ಸಂಘ ಸೇರಿದಂತೆ ಅನೇಕ ನೌಕರರ ಸಂಘಟನೆಗಳು ತಮ್ಮ ಅಭಿಪ್ರಾಯವನ್ನು ಆಯೋಗದ ಮುಂದೆ ಮಂಡಿಸಿವೆ.

ಇನ್ನೂ ಸಲ್ಲಿಸದೇ ಇರುವ ಆಸಕ್ತರು ಫೆಬ್ರವರಿ 28ರ ಒಳಗೆ ಆಯೋಗಕ್ಕೆ ತಮ್ಮ ಅಭಿಪ್ರಾಯವನ್ನು ಸಲ್ಲಿಸಬೇಕೆಂದು ಕೋರಲಾಗಿದೆ. ಆಯೋಗದ ವಿಳಾಸವು ಇಂತಿದೆ; ಕಾರ್ಯದರ್ಶಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಔಷಧ ನಿಯಂತ್ರಣ ಇಲಾಖೆಯ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು- 560001.

ಪ್ರಶ್ನಾವಳಿಗೆ ಉತ್ತರಿಸಲು ದಿನಾಂಕ ವಿಸ್ತರಿಸಿ ಸರ್ಕಾರ ಹೊರಡಿಸಿದ ಅಧಿಸೂಚನೆ ಇಲ್ಲಿದೆ;

ಸಮಾನ ವೇತನದ ಕುರಿತೂ ಮಾಹಿತಿ ನೀಡಿ

ಆಯೋಗವನ್ನು ನಿರ್ದಿಷ್ಟವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಸಿಬ್ಬಂದಿಗಳ ನಡುವಿನ ಹುದ್ದೆಗಳ ಸಮಾನತೆಯನ್ನು ನಿರ್ಧರಿಸುವ ಮೂಲಕ ಕೇಂದ್ರೀಯ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಸರ್ಕಾರ ಕೋರಿದೆ. ಈ ಬಗ್ಗೆಯೂ ಆಯೋಗಕ್ಕೆ ಆಸಕ್ತರು ಮಾಹಿತಿ ನೀಡಬಹುದಾಗಿದೆ.

ನಿವೃತ್ತಿ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಸೌಲಭ್ಯ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆಯೂ ಅವಶ್ಯವಿರುವ ಬದಲಾವಣೆಗಳ ಕುರಿತು ಸಹ ಶಿಫಾರಸ್ಸು ಮಾಡುವಂತೆ ಆಯೋಗಕ್ಕೆ ಸರ್ಕಾರ ಸೂಚಿಸಿದೆ. ಹೀಗಾಗಿ ಈ ವಿಷಯಗಳ ಕುರಿತು ನೌಕರರು, ಸಾರ್ವಜನಿಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು ಈ ಪ್ರಶ್ನಾವಳಿಗೆ ಉತ್ತರಿಸುವ ಮೂಲಕ ಹಂಚಿಕೊಳ್ಳಬಹುದಾಗಿದೆ.

ಇದನ್ನೂ ಓದಿ | CLT Exam | ಸರ್ಕಾರಿ ನೌಕರರ ಕಂಪ್ಯೂಟರ್‌ ಟೆಸ್ಟ್‌; ಗಡುವು ಮಾ.31ರ ವರೆಗೆ ವಿಸ್ತರಣೆ

Exit mobile version