ಬೆಂಗಳೂರು: ಪರೀಕ್ಷೆಯ ಸಮಯ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅಘಾತವನ್ನುಂಟು ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ರಾಜ್ಯ ಸರ್ಕಾರ, ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸದೇ ಇದ್ದಲ್ಲಿ ನೌಕರರು ನಡೆಸಲಿರುವ ಕರ್ತವ್ಯಕ್ಕೆ ಗೈರಾಗುವ ಅನಿರ್ಧಿಷ್ಟಾವಧಿಯ ಮುಷ್ಕರದಲ್ಲಿ ಶಿಕ್ಷಕರೂ ಭಾಗವಹಿಸಲಿದ್ದಾರೆ. ಇದರಿಂದ ಪರೀಕ್ಷೆಯ ಸಮಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ರಾಜ್ಯದ 1,88,000 ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರತಿನಿಧಿಸುವ ಪ್ರಾತಿನಿಧಿಕ ಸಂಘಟನೆಯಾದ ʻಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘʼ ರಾಜ್ಯಾದ್ಯಂತ ನಡೆಯಲಿರುವ ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಬೆಂಬಲ ನೀಡುವ ನಿರ್ಣಯ ತೆಗೆದುಕೊಂಡಿದೆ. ಆನ್‌ಲೈನ್‌ನಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಂಭುಲಿಂನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ತಿಳಿಸಿದ್ದಾರೆ.
ʻʻರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿರುವ ಹೋರಾಟಕ್ಕೆ ಶಿಕ್ಷಕರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ. ರಾಜ್ಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ 1,43,000 ಶಿಕ್ಷಕರು ಮಾರ್ಚ್ 1ರಿಂದ ಕರ್ತವ್ಯಕ್ಕೆ ಗೈರುಹಾಜರಾಗಲಿದ್ದಾರೆ. ಈ ಬಗ್ಗೆ ಶಿಕ್ಷಕರಲ್ಲಿ ಜಾಗೃತಿ ಮೂಡಿಸಿ, ಹೋರಾಟದಲ್ಲಿ ಭಾಗವಹಿಸುವಂತೆ ಮಾಡಲಾಗುವುದುʼʼ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿಗೆ ತರುವ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸದೇ ಇರುವುದನ್ನು ವಿರೋಧಿಸಿ ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗುವ ಅನಿರದಿ ಅನಿರ್ಧಿಷ್ಟಾವಧಿಯ ಹೋರಾಟ ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘವು ತೀರ್ಮಾನಿಸಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಇದಕ್ಕೆ ರಾಜ್ಯದ ಬಹುತೇಕ ಸರ್ಕಾರಿ ನೌಕರರ ಸಂಘಟನೆಗಳು ಬೆಂಬಲ ಘೋಷಿಸಿವೆ. 7ನೇ ವೇತನ ಆಯೋಗದ ವರದಿಯನ್ನು ನಿರೀಕ್ಷಿಸಿ ತಕ್ಷಣ ಮಧ್ಯಂತರ ಪರಿಹಾರವನ್ನು ಹಾಗೂ ಶಿಕ್ಷಕರಿಗೆ ಈ ಹಿಂದಿನ ವೇತನ ಆಯೋಗಗಳು ನೀಡಿದ ಮಾದರಿಯಲ್ಲಿ ವಿಶೇಷ ವೇತನವನ್ನು ನೀಡಬೇಕು ಹಾಗೂ ದೇಶದ ಅನೇಕ ರಾಜ್ಯಗಳು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ (ಓಪಿಎಸ್) ಜಾರಿಗೊಳಿಸಿದಂತೆಯೇ ರಾಜ್ಯ ಸರ್ಕಾರವೂ ಓಪಿಎಸ್ ಜಾರಿಗೆ ತರಬೇಕೆಂದು ಶಿಕ್ಷಕರ ಸಂಘ ಆಗ್ರಹಿಸಿದೆ.
ಇದನ್ನೂ ಓದಿ : 7th Pay commission : ಮಾ. 1ರಿಂದ ಸರ್ಕಾರಿ ನೌಕರರ ಪ್ರತಿಭಟನೆ, ಮಾತುಕತೆ ಸಂದೇಶ ರವಾನಿಸಿದ ಸಿಎಂ ಬೊಮ್ಮಾಯಿ