ಶಿವಮೊಗ್ಗ: ನಮ್ಮ ಬೇಡಿಕೆಗಳನ್ನು (7th pay commission) ಈಡೇರಿಸುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡುವುದಿಲ್ಲ, ಮನವಿ ಮಾಡುತ್ತೇವೆ. ಡೆಡ್‌ಲೈನ್ ಕೂಡ ನೀಡುವುದಿಲ್ಲ, ಮಾರ್ಚ್ 1 ರಿಂದ ನಮ್ಮಷ್ಟಕ್ಕೆ ನಾವು ಪ್ರತಿಭಟನೆ ನಡೆಸುತ್ತೇವೆ. ಸರ್ಕಾರ ಎಷ್ಟು ಸಮಯ ಬೇಕಾದರೂ ತೆಗೆದುಕೊಳ್ಳಲಿ, ನಾವು ಕಾಯುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯಲು ನಮ್ಮದೇನು ರಾಜಕೀಯ ಪಕ್ಷವಲ್ಲ. ಸರ್ಕಾರಿ ನೌಕರರು ಸರ್ಕಾರದ ಮಕ್ಕಳು. ಹೀಗಾಗಿಯೇ ಸರ್ಕಾರ ನೀಡಿದ ಭರವಸೆಯನ್ನು ನಂಬಿ ಏಳೆಂಟು ತಿಂಗಳಿನಿಂದ ಸುಮ್ಮನಿದ್ದೆವು. ಆದರೆ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ಉದಾಸೀನ ತೋರಿಸಿದ್ದರಿಂದ ಈಗ ಪ್ರತಿಭಟನೆ ನಡೆಸುತ್ತಿದ್ದೇವೆ. ಅಗ್ರೆಸಿವ್ ಆಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದುವರೆಗೂ ಒದಗಿ ಬಂದಿಲ್ಲ. ಮುಂದೆ ಅನಿವಾರ್ಯವೆನಿಸಿದರೆ ಅದಕ್ಕೂ ಸಿದ್ಧ ಎಂದು ಅವರು ಹೇಳಿದ್ದಾರೆ.
ರಾಜ್ಯದ ಪ್ರಗತಿಗೆ ಕಾರಣವಾಗಿರುವ ಸರ್ಕಾರಿ ನೌಕರರನ್ನು ತನ್ನ ಮಕ್ಕಳಂತೆ ಚೆನ್ನಾಗಿ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ರಾಜ್ಯದಲ್ಲಿ ಶೇ. 39 ರಷ್ಟು ಹುದ್ದೆಗಳು ಖಾಲಿ ಇದ್ದರೂ ಅವರೆಲ್ಲರ ಕೆಲಸವನ್ನು ಈಗಿರುವ ನೌಕರರು ಹಂಚಿಕೊಂಡು ಮಾಡುತ್ತಿದ್ದಾರೆ. ಕೆಲವರು ಮನೆ-ಮಕ್ಕಳು ಮರೆತು ರಾತ್ರಿ ಒಂಬತ್ತು ಗಂಟೆಯವರೆಗೂ ಕೆಲಸ ಮಾಡಬೇಕಾಗಿದೆ. ಅಭಿವೃದ್ಧಿಯಲ್ಲಿ ರಾಜ್ಯ ಇಂದು ಮುಂಚೂಣಿಯಲ್ಲಿದೆ ಎಂದರೆ ಅದಕ್ಕೆ ಸರ್ಕಾರಿ ನೌಕರರೇ ಕಾರಣ. ಹೀಗಿರುವಾಗ ಸರ್ಕಾರ ನಮ್ಮ ಬಗ್ಗೆ ಈ ರೀತಿ ಉದಾಸೀನತೆ ತೋರುವುದು ಸರಿಯೇ ಎಂದು ಷಡಾಕ್ಷರಿ ಪ್ರಶ್ನಿಸಿದ್ದಾರೆ.
ಹೆಚ್ಚು ಕೆಲಸ ಮಾಡಲು ನಾವು ರೆಡಿ !
ನಮ್ಮ ಹೋರಾಟಕ್ಕೆ ಮಾಧ್ಯಮಗಳು ಬೆಂಬಲ ನೀಡಿವೆ, ನೀಡುತ್ತಿವೆ ಎಂದು ಹೇಳಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ʻʻಒಳ್ಳೆಯ ಸುದ್ದಿ ಚಾನೆಲ್ ಒಂದರ ಮುಖ್ಯಸ್ಥರು ನನ್ನೊಂದಿಗೆ ಲೈವ್‌ನಲ್ಲಿ ಮಾತನಾಡಿ, ನಿಮ್ಮ ಬೇಡಿಕೆ ಸರಿಯಾಗಿದೆ, ಇದಕ್ಕೆ ನಾವು ಬೆಂಬಲ ನೀಡುತ್ತೇವೆ. ಆದರೆ ನೀವು ಮುಂದಿನ ದಿನಗಳಲ್ಲಿ ಸರಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ನಾವು ಇನ್ನಷ್ಟು ಪ್ರಮಾಣಿಕವಾಗಿ ಕೆಲಸಮಾಡುವುದಾಗಿ ಅವರಿಗೆ ಹೇಳಿದೆ. ನಮ್ಮೆಲ್ಲ ಬೇಡಿಕೆಗಳು ಈಡೇರಿದರೆ ಅರ್ಧಗಂಟೆ ಮೊದಲೇ ಕೆಲಸ ಆರಂಭಿಸಲು ನಾವು ರೆಡಿ. ಸರ್ಕಾರ ಬೇಕಾದರೆ ನಮಗೆ ಟಾರ್ಗೆಟ್ ಕೊಡಲಿ, ಅದನ್ನು ನಾವು ಮುಟ್ಟುತ್ತೇವೆ. ಈಗಾಗಲೇ ವಾಣಿಜ್ಯ ತೆರಿಗೆ ಇಲಾಖೆಯ ಸಿಬ್ಬಂದಿ ತೆರಿಗೆ ಸಂಗ್ರಹದ ಗುರಿಯನ್ನು ಜನವರಿಯಲ್ಲಿಯೇ ಮುಟ್ಟಿದ್ದಾರೆ. ರಾಜಸ್ವ ಸಂಗ್ರಹಣೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ನಾವು ಈಗಾಗಲೇ ಸರ್ಕಾರದ ಆದಾಯವನ್ನು ಹೆಚ್ಚಿಸುವಲ್ಲಿ ಮೊದಲ ಸ್ಥಾನದಲ್ಲಿದ್ದು, ಇನ್ನೂ ಉತ್ತಮ ಸಾಧನೆ ಮಾಡಿ ತೋರಿಸುತ್ತೇವೆʼʼ ಎಂದರು.
ಕಳೆದ ಗುರುವಾರ ರಾತ್ರಿ “ವಿಸ್ತಾರ ನ್ಯೂಸ್ʼʼ ಚಾನೆಲ್‌ನ “ನ್ಯೂಸ್ ಫ್ರಂಟ್‌ಲೈನ್ ವಿತ್ ಎಚ್‌ಪಿಕೆʼʼ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸಿ.ಎಸ್. ಷಡಾಕ್ಷರಿ ಅವರೊಂದಿಗೆ ಲೈವ್‌ನಲ್ಲಿ ಮಾತನಾಡಿ, ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
ನಮ್ಮ ಈಗಿನ ಬೇಡಿಕೆ ಈಡೇರಿಸುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯೇನೂ ಆಗದು ಎಂದು ಅಂಕಿ-ಸಂಖ್ಯೆ ಸಹಿತ ವಿವರಿಸಿದ ಸಿ ಎಸ್ ಷಡಾಕ್ಷರಿ, ಹಣ ದುಬ್ಬರ ಹೆಚ್ಚಳದಿಂದ ದಿನನಿತ್ಯ ಬಳಕೆಯ ಎಲ್ಲ ಸಾಮಾನುಗಳ ಬೆಲೆಯೂ ಹೆಚ್ಚಿದೆ. ಹೀಗಾಗಿ ವೇತನ ಹೆಚ್ಚಿಸಿ ಎಂದು ಮನವಿ ಮಾಡುತ್ತಿದ್ದೇವೆ. ಎಂಟು ತಿಂಗಳಿನಿಂದ ಸರ್ಕಾರ ಉದಾಸೀನ ಮಾಡಿರುವುದರಿಂದ ಅನಿವಾರ್ಯವಾಗಿ ನಾವು ಹೋರಾಟಕ್ಕಿಳಿಯಬೇಕಾಗಿದೆ ಎಂದು ವಿವರಿಸಿದ್ದಾರೆ.
ಹಿಂದೆಲ್ಲಾ ನಮ್ಮ ಸಂಘಟನೆಗಳಲ್ಲಿ ಗೊಂದಲವಿತ್ತು. ಆದರೆ ಈ ಬಾರಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಟ್ಟಾಗಿ ಈ ಹೋರಾಟದ ತೀರ್ಮಾನ ತೆಗೆದುಕೊಂಡಿದ್ದೇವೆ. ರಾಜ್ಯದಾದ್ಯಂತ ಈ ಹೋರಾಟದ ಕುರಿತು ಪ್ರಚಾರ ಮಾಡಲಾಗಿದೆ. ಇಡೀ ರಾಜ್ಯದ ಸರ್ಕಾರಿ ನೌಕರರು ಈ ಹೋರಾಟದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ ಷಡಾಕ್ಷರಿ, ಸರ್ಕಾರ ವೇತನ ಹೆಚ್ಚಳದ ಕುರಿತು ಆದೇಶ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದರು.
ಸೋಮವಾರ ಮಾತುಕತೆಗೆ ಬರುವಂತೆ ಅಧಿಕಾರಿಗಳು ಕರೆದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಕರೆದಿಲ್ಲ. ಯಾರೇ ಕರೆದರೂ ಮಾತುಕತೆಗೆ ಹೋಗುತ್ತೇವೆ. ಅಲ್ಲಿ ನಮ್ಮ ಬೇಡಿಕೆಗಳನ್ನು ಮಂಡಿಸುತ್ತೇವೆ. ನಮ್ಮ ಎರಡೂ ಪ್ರಮುಖ ಬೇಡಿಕೆಗಳ ಬಗ್ಗೆ ಗಮನ ಸೆಳೆಯುತ್ತೇವೆ ಎಂದು ಸಿ ಎಸ್ ಷಡಾಕ್ಷರಿ ಹೇಳಿದರು.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಗೆ ತರುವುದರೊಳಗೆ ಸರ್ಕಾರ ಆದೇಶ ಹೊರಡಿಸಬೇಕು. ಒಂದು ವೇಳೆ ಸರ್ಕಾರ ನಮ್ಮ ಹೋರಾಟಕ್ಕೆ ಮಣಿಯದಿದ್ದಲ್ಲಿ ಮುಂದೇನು ಎಂಬುದರ ಕುರಿತು ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ತೀರ್ಮಾನಿಸುತ್ತೇವೆ. ಅಲ್ಲಿಯವರೆಗೂ ಹೋರಾಟ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : 7th Pay commission : ಮಾ.1 ರಿಂದ ಸರ್ಕಾರಿ ನೌಕರರ ಮುಷ್ಕರ ಖಚಿತ; ಆಸ್ಪತ್ರೆ, ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಸೇವೆ ಬಂದ್