ಬೆಂಗಳೂರು: ರಾಜ್ಯ ಸರ್ಕಾರವು ಏಳನೇ ವೇತನ ಆಯೋಗವನ್ನು (7th Pay Commission) ರಚಿಸಿರುವುದಕ್ಕೆ ಸರ್ಕಾರಿ ನೌಕರರು ಹರ್ಷ ವ್ಯಕ್ತಪಡಿಸುತ್ತಿದ್ದು, ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ ತಿಳಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಏಳನೇ ವೇತನ ಆಯೋಗವನ್ನು ರಚಿಸಿರುವುದಾಗಿ ದಾವಣಗೆರೆಯಲ್ಲಿ ಬುಧವಾರ ಬೆಳಗ್ಗೆ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅವರನ್ನು ಈ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಸರ್ಕಾರದ ಅಧಿಸೂಚನೆ ಇನ್ನಷ್ಟೇ ಹೊರಡಬೇಕಿದೆ. ಆಯೋಗಕ್ಕೆ ಎರಡು ತಿಂಗಳೊಳಗೆ ಮಧ್ಯಂತರ ವರದಿ ನೀಡುವಂತೆ ಸರ್ಕಾರ ಸೂಚಿಸಿದ್ದು, ಮುಂದಿನ ಫೆಬ್ರವರಿಯ ಒಳಗೆ ಆಯೋಗ ವರದಿ ನೀಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮೂಲವೇತನದೊಂದಿಗೆ ತುಟ್ಟಿ ಭತ್ಯೆ (ಡಿಎ) ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಸರ್ಕಾರವನ್ನು ಒತ್ತಾಯಿಸಿತ್ತು. ಈ ಮೂಲಕ ಮೂಲ ವೇತನದ ಶೇ.40ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗುತ್ತಿದೆ.
ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ
ಸರ್ಕಾರ ವೇತನ ಆಯೋಗ ರಚನೆ ಮಾಡಿ ಆದೇಶ ಹೊರಡಿಸುತ್ತಿರುವುದು ಖುಷಿಯ ವಿಚಾರ. ಸರ್ಕಾರಿ ನೌಕರರ ಬಗ್ಗೆ ವಿಶೇಷ ಕಾಳಜಿ ತೋರುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು. ಈ ಕುರಿತು ನಮ್ಮ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ.
ಸಿ ಎಸ್ ಷಡಾಕ್ಷರಿ | ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು.
2023ರ ಏಪ್ರಿಲ್ 1 ರಿಂದ ಆರ್ಥಿಕ ಅನುಕೂಲ ಸಿಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈಗಾಗಲೇ ಮುಖ್ಯಮಂತ್ರಿಯವರು ಈ ಬಗ್ಗೆ ಭರವಸೆಯನ್ನು ನೀಡಿದ್ದಾರೆ. ಆಯೋಗ 2023ರ ಫೆಬ್ರವರಿಯಲ್ಲಿ ಮಧ್ಯಂತರ ವರದಿ ನೀಡಲಿದ್ದು, ಫೆಬ್ರವರಿಯಲ್ಲಿ ಮಂಡಿಸಲಾಗುವ ಬಜೆಟ್‌ನಲ್ಲೇ ವೇತನ ಪರಿಷ್ಕರಣೆಯ ತೀರ್ಮಾನವನ್ನು ಸರ್ಕಾರ ಪ್ರಕಟಿಸುವ ನಿರೀಕ್ಷೆಯಿದೆ. ಮಾರ್ಚ್‌ನಲ್ಲಿ ಈ ಸಂಬಂಧ ಆದೇಶ ಹೊರಡಿಸಲಿದ್ದು, ಏಪ್ರಿಲ್‌ನಿಂದ ಜಾರಿಯಾಗಲಿದೆ ಎಂದು ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.
ಗುರುವಾರ ಸಿಎಂಗೆ ಅಭಿನಂದನೆ
7ನೇ ವೇತನ ಆಯೋಗ ರಚನೆ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿಗಳನ್ನು ನವೆಂಬರ್ 10ರಂದು ಅಭಿನಂದನಿಸಲು ರಾಜ್ಯ ಸರ್ಕಾರಿ ನೌಕರರ ಸಂಘವು ತೀರ್ಮಾನಿಸಿದೆ. ಗುರುವಾರ ಬೆಳಗ್ಗೆ 10.30 ಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಸರ್ಕಾರಿ ನೌಕರರ, ನಿಗಮ ಮಂಡಳಿ, ಪ್ರಾಧಿಕಾರ ಹಾಗೂ ನಿವೃತ್ತ ನೌಕರರ 11 ಲಕ್ಷ ಕುಟುಂಬದ ಸದಸ್ಯರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು, ವೃಂದ ಸಂಘಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ | 7th Pay Commission | 7ನೇ ವೇತನ ಆಯೋಗ ರಚನೆಯ ಘೋಷಣೆ; ಅಧ್ಯಕ್ಷರಾಗಿ ಸುಧಾಕರ್ ರಾವ್ ನೇಮಕ