ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿಗೆ ಸಂಬಂಧಿಸಿದಂತೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿ ಕುರಿತು ಈ ಬಾರಿಯ ಬಜೆಟ್‌ನಲ್ಲಿ (Karnataka Budget) ಯಾವುದೇ ಘೋಷಣೆ ಮಾಡದಿರುವುದರಿಂದ ಆಕ್ರೋಶಗೊಂಡಿರುವ ರಾಜ್ಯ ಸರ್ಕಾರಿ ನೌಕರರು ಫೆಬ್ರವರಿ 23ರಿಂದ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಈ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಲು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿಣಿ ಸಭೆ, ವೃಂದ ಸಂಘಗಳ ಅಧ್ಯಕರ ಮತ್ತು ಪದಾಧಿಕಾರಿಗಳ ಸಭೆ ಹಾಗೂ ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಮುಂದಿನ ಗುರುವಾರದಿಂದ ಹೋರಾಟ ಆರಂಭಿಸಲು ತೀರ್ಮಾನಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಮೊದಲಿಗೆ ಕರ್ತವ್ಯಕ್ಕೆ ಗೈರು ಹಾಜರಾಗಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕುರಿತು ತೀರ್ಮಾನಿಸಲಿದ್ದೇವೆ. ಇದಕ್ಕೂ ಸರ್ಕಾರ ಮಣಿಯದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ʻವಿಸ್ತಾರ ನ್ಯೂಸ್ʼ ಗೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಾದ ವೇತನ, ಭತ್ಯೆಗಳ ಪರಿಷ್ಕರಣೆ ಹಾಗೂ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ರಾಜ್ಯ ಆಯವ್ಯಯದಲ್ಲಿ ಪ್ರಸ್ತಾಪಿಸದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರಲ್ಲಿ ನಿರಾಶೆ ಮೂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯುವ ಈ ಸಭೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಹಾಗೂ ಕೇಂದ್ರ ಸ್ಥಾನದ ಪದಾಧಿಕಾರಿಗಳೂ ಸೇರಿ ಸುಮಾರು 7000 ಚುನಾಯಿತ ಪ್ರತಿನಿಧಿಗಳು ಹಾಗೂ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸುತ್ತಿದ್ದಾರೆ.
ಇದುವರೆಗೂ ಸಂಘ ಈ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯದೇ ಸಮನ್ವಯತೆಯಲ್ಲಿಯೇ ತನ್ನೆಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಂಡು ಬಂದಿತ್ತು. ಸಂಘದ ಹಾಲಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸರ್ಕಾರಿ ನೌಕರರ ಬಹು ದಿನಗಳ ಸುಮಾರು 25 ಬೇಡಿಕೆಗಳಿಗೆ ಮಾತುಕತೆಯ ಮೂಲಕವೇ ಸರ್ಕಾರ ಸ್ಪಂದಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದೇ ರೀತಿಯಲ್ಲಿಯೇ ರಾಜ್ಯ ಬಜೆಟ್‌ನಲ್ಲಿ 7 ನೇ ವೇತನ ಆಯೋಗದ ಶಿಫಾರಸುಗಳ ಜಾರಿಯನ್ನು ಘೋಷಿಸುವುದರ ಜತೆಗೆ ಅಗತ್ಯವಾಗಿರುವ 10 ಸಾವಿರ ಕೋಟಿ ಅನುದಾನವನ್ನೂ ಕಾಯ್ದಿರಿಸುವ ವಿಶ್ವಾಸವನ್ನು ಅವರು ಹೊಂದಿದ್ದರು. ಆದರೆ ಸರ್ಕಾರ ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸದೇ ಇರುವುದು ಅವರಲ್ಲಿ ಅಸಮಧಾನವನ್ನುಂಟು ಮಾಡಿದೆ.
ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ
ಈ ಬಗ್ಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೂ ದೂರು ನೀಡಿರುವ ಸಿ. ಎಸ್ ಷಡಾಕ್ಷರಿ ಈಗ ಸಂಘದ ಪದಾಧಿಕಾರಿಗಳ ತೀರ್ಮಾನದಂತೆ ಹೋರಾಟಕ್ಕಿಳಿಯಲು ಮುಂದಾಗಿದ್ದಾರೆ ಎನ್ನಲಾಗಿದೆ. ʻʻಸಂಘ ೭ನೇ ವೇತನ ಆಯೋಗದ ಶಿಫಾರಸುಗಳ ಮತ್ತು ಓಪಿಎಸ್ ಜಾರಿಗೆ ಇನ್ನು ಮುಂದೆ ಹೋರಾಟ ನಡೆಸಲಿದೆ. ಇದರಿಂದ ಆಡಳಿತದ ಮೇಲೆ ಪರಿಣಾಮಗಳಾಗಬಹುದು. ಅಲ್ಲದೆ ಜನಸಾಮಾನ್ಯರಿಗೂ ತೊಂದರೆಯಾಗಬಹುದು. ಆದರೆ ಸರ್ಕಾರದ ವರ್ತನೆಯಿಂದ ಇದು ಅನಿವಾರ್ಯವಾಗಿದೆʼʼ ಎಂದು ಸಂಘದ ಪದಾಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ಹೋರಾಟ ಯಾವ ರೀತಿಯಲ್ಲಿರಲಿದೆ ಎಂಬುದು ಇಂದು ತೀರ್ಮಾನವಾಗಲಿದ್ದು, ಸರ್ಕಾರ ಚುನಾವಣೆಯ ಈ ಹೊತ್ತಿನಲ್ಲಿ ಮತ್ತೊಂದು ಇಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆಗಳಿವೆ.
ಇದನ್ನೂ ಓದಿ : Karnataka Budget 2023 : ಬಜೆಟ್‌ನಲ್ಲಿ ಪ್ರಸ್ತಾಪವಾಗದ 7ನೇ ವೇತನ ಆಯೋಗ; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?