Site icon Vistara News

7th Pay Commission : ಮಾರ್ಚ್‌ 1 ರಿಂದ ಕರ್ತವ್ಯಕ್ಕೆ ಗೈರಾಗುವ ಹೋರಾಟ ಪ್ರಕಟಿಸಿದ ಸರ್ಕಾರಿ ನೌಕರರ ಸಂಘ

7th pay commission state government employees plan to protest from march 1st

ಷಡಾಕ್ಷರಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿಗೆ ತರುವ ಕುರಿತು ಬದ್ಧತೆ ಪ್ರಕಟಿಸಬೇಕು ಮತ್ತು ಹಳೆ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮಾರ್ಚ್‌ 1 ರಿಂದ ಕರ್ತವ್ಯಕ್ಕೆ ಗೈರಾಗುವ ಹೋರಾಟ ನಡೆಸಲು ರಾಜ್ಯಸ ಸರ್ಕಾರಿ ನೌಕರರ ಸಂಘವು ತೀರ್ಮಾನಿಸಿದೆ.

ಅನಿರ್ಧಿಷ್ಟಾವಧಿಯವರೆಗೆ ಈ ಹೋರಾಟ ನಡೆಸಲಾಗುವುದು ಎಂದು ಇಂದು ನಡೆದ ಸರ್ಕಾರಿ ನೌಕರರ ಸಂಘದ ಸುಮಾರು ೮ ಸಾವಿರ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ. ಸರ್ಕಾರ ಮಾರ್ಚ್‌ 1 ರ ಒಳಗೆ ತೀರ್ಮಾನ ಪ್ರಕಟಿಸದೇ ಇದ್ದಲ್ಲಿ ಅನಿರ್ಧಿಷ್ಟಾವಧಿಯ ಈ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್‌ ಷಡಾಕ್ಷರಿ ಸಭೆಯಲ್ಲಿ ಪ್ರಕಟಿಸಿದರು.

ನಮ್ಮ ಬೇಡಿಕೆ ಈಡೇರದ ಹೊರತೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನನ್ನು ಕೆಲಸದಿಂದ ವಜಾ ಮಾಡಿದರೂ ಹೆದರಲಾರೆ ಎಂದ ಷಡಾಕ್ಷರಿ, ಇದು ಸರ್ಕಾರಿ ನೌಕರರ ಒಟ್ಟಾರೆ ತೀರ್ಮಾನ. ನನ್ನೊಬ್ಬನ ತೀರ್ಮಾನವಲ್ಲ. ಹೀಗಾಗಿ ಎಲ್ಲರೂ ಒಪ್ಪಿದರೆ ಮಾತ್ರ ಮುಂದೆ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಕುರಿತು ತೀರ್ಮಾನಿಸಲಾಗುತ್ತದೆ ಎಂದರು.

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ

ಮುಂದಿನ ಗುರುವಾರದಿಂದ ಹೋರಾಟ ಆರಂಭಿಸಲು ತೀರ್ಮಾನಿಸಲಾಗಿತ್ತಾದರೂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಭೈರಪ್ಪ ಸರ್ಕಾರಕ್ಕೆ ಒಂದು ವಾರ ಸಮಯಾವಕಾಶ ನೀಡುವಂತೆ ಸೂಚಿಸಿದ್ದರಿಂದ ಮಾರ್ಚ್‌ 1 ಬುಧವಾರದಿಂದ ಹೋರಾಟ ನಡೆಸಲು ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ವಿಧಾನಸೌಧ ಸಚಿವಾಲಯದ ಮೂರು ಪ್ರಮುಖ ಸಂಘಟನೆಗಳು ಸೇರಿದಂತೆ ಸರ್ಕಾರಿ ನೌಕರರ ಹಲವು ಸಂಘಟನೆಗಳು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಾದ ವೇತನ, ಭತ್ಯೆಗಳ ಪರಿಷ್ಕರಣೆ ಹಾಗೂ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ರಾಜ್ಯ ಆಯವ್ಯಯದಲ್ಲಿ ಪ್ರಸ್ತಾಪಿಸದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರಲ್ಲಿ ನಿರಾಶೆ ಮೂಡಿದೆ. ಈ ಹಿನ್ನೆಲೆಯಲ್ಲಿ ಈ ಹೋರಾಟ ನಡೆಸಲು ಸರ್ಕಾರಿ ನೌಕರರು ತೀರ್ಮಾನಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತುರ್ತು ಕಾರ್ಯಕಾರಿಣಿಯ ನಿರ್ಧಾರಗಳು

1.ಏಳನೇ ಆಯೋಗದ ಮಧ್ಯಂತರ ವರದಿ ಪಡೆದು ಶೇ.40 ಫಿಟ್ಮೆಂಟ್ ಅನ್ನು ಜುಲೈ ೧ ರಿಂದ ಜಾರಿಗೆ ತರುವುದು.

2.ರಾಜಸ್ತಾನ, ಛತ್ತೀಸ್‌ಗಡ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್ ಪಿ ಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಎನ್ ಪಿ ಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು

3.ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಏಳು ದಿನಗಳ ನೋಟಿಸ್ ನೀಡಿ ಬೇಡಿಕೆ ಈಡೇರಿಸದಿದ್ದರೆ ಮಾರ್ಚ್‌ 1ರಿಂದ ರಾಜ್ಯದ ಸಮಸ್ತ ಸರ್ಕಾರಿ ನೌಕರರು, ನಿಗಮ ಮತ್ತು ಮಂಡಳಿಗಳು ಅನುದಾನಿತ ಸಂಸ್ಥೆಯ ಎಲ್ಲ ನೌಕರರು ಅನಿರ್ದಿಷ್ಟಾವಧಿಯವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವುದು.

ಇದನ್ನೂ ಓದಿ: 7th Pay commission : ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮುಂದಿನ ವಾರ ತುಟ್ಟಿ ಭತ್ಯೆ ಏರಿಕೆ ಸಂಭವ

Exit mobile version