ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಿಸಲು ರಚನೆ ಮಾಡಿದ್ದ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು ಆ.1ರಿಂದ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಯಾರಿಗೆ ಎಷ್ಟು ವೇತನ ಹೆಚ್ಚಾಗಲಿದೆ ಎಂಬ ಕುರಿತ ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಪ್ರಕಟ ಮಾಡಲಾಗಿದೆ.
ಈ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಆದೇಶ ಹೊರಡಿಸಿದ್ದಾರೆ. 2022ರ ನ.19ರಂದು ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಕುರಿತಂತೆ ತನ್ನ ವರದಿಯ ಸಂಪುಟ-1 ನ್ನು ಸಲ್ಲಿಸಿದೆ. ವರದಿಯಲ್ಲಿನ ಶಿಫಾರಸುಗಳನ್ನು ಸರ್ಕಾರವು ಪರಿಗಣಿಸಿದ್ದು, ಅದರಂತೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಜುಲೈ 1ರಿಂದ ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರಿಷ್ಕೃತ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳು
7th Pay Commission: 7ನೇ ವೇತನ ಆಯೋಗದ ವರದಿ ಜಾರಿಗೆ ಅಧಿಕೃತ ಆದೇಶ; ಪರಿಷ್ಕೃತ ವೇತನ ಶ್ರೇಣಿ ಪಟ್ಟಿ ಇಲ್ಲಿದೆ#vistaranews #7thpaycommission pic.twitter.com/5jOkqMctSs
— Vistara News (@VistaraNews) July 22, 2024
ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಈ ಕೆಳಕಂಡಂತೆ ವೇತನ ನಿಗದಿ
- ದಿನಾಂಕ: 01.07.2022 ರಲ್ಲಿದ್ದಂತೆ ಮೂಲ ವೇತನ.
- ದಿನಾಂಕ: 01.07.2022 ರಲ್ಲಿದ್ದಂತಹ ಬೆಲೆ ಸೂಚ್ಯಂಕ ಹಂತ 361.704 ಕ್ಕೆ ಸಂವಾದಿಯಾಗಿ ಲಭ್ಯವಿದ್ದ 312 ತುಟ್ಟಿ ಭತ್ಯೆ.
- ದಿನಾಂಕ: 01.07.2022 ರಲ್ಲಿ ಲಭ್ಯವಿದ್ದ ಮೂಲ ವೇತನದ ಮೇಲೆ 27.50% ರಷ್ಟು ಫಿಟ್‌ಮೆಂಟ್ ಸೌಲಭ್ಯ.
- ಮೇಲಿನ (ಅ), (ಅ). (ಇ) ಯನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸುವುದು.
ಆಗಸ್ಟ್ 1ರಿಂದ ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನ
1.ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯ ಪ್ರಸ್ತುತ ಮೊತ್ತವನ್ನು ಕ್ರಮವಾಗಿ ಮಾಸಿಕ 8,500 ರೂ. ಮತ್ತು 75,300 ರಿಂದ 13,500 ಮತ್ತು 1,20,600ಗಳಿಗೆ ಮತ್ತು ಸಂವಾದಿ ಕುಟುಂಬ ಪಿಂಚಣಿಯ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಅನುಕ್ರಮವಾಗಿ ಮಾಸಿಕ 8,500 ಮತ್ತು 45,180 ರಿಂದ 13,500 ಮತ್ತು 80,400 ಪರಿಷ್ಕೃಸುವುದು, ಪಿಂಚಣಿ ಮತ್ತು ಕುಟುಂಬ ಪಿಂಚಣಿಗಳು ದಿನಾಂಕ: 01.07.2022 ರಿಂದ ಜಾರಿಗೆ ಬರುತ್ತವೆ. ಆದರೆ, ಪಿಂಚಣಿ ಪರಿಷ್ಕರಣೆಯ ಆರ್ಥಿಕ ಲಾಭವು ದಿನಾಂಕ: 01.08.2024 ರಿಂದ ಸಿಗಲಿದೆ. ಮರಣ ಮತ್ತು ನಿವೃತ್ತಿ ಉಪದಾನದ ಪ್ರಸ್ತುತ ಗರಿಷ್ಠ ಮಿತಿ ರೂ.20 ಲಕ್ಷಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
2.ದಿನಾಂಕ: 01.07.2022ಕ್ಕೆ ಪೂರ್ವದಲ್ಲಿ ನಿವೃತ್ತರಾದ ಅಥವಾ ಸೇವೆಯಲ್ಲಿದ್ದಾಗ ಮೃತರಾದ ಸರ್ಕಾರಿ ನೌಕರರ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಈ ಕೆಳಗಿನಂತೆ ನಿಗದಿಪಡಿಸತಕ್ಕದ್ದು:-
ಅ) ದಿನಾಂಕ: 01.07 2022 ರಂದು ಇದ್ದ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನ:
ಅ) ದಿನಾಂಕ: 01.07.2022 ರಂದು ಲಭ್ಯವಿದ್ದ 31% ರಷ್ಟು ತುಟ್ಟಿ ಭತ್ಯೆ,
ಇ) ದಿನಾಂಕ: 01.07.2022 ರಂದು ಇದ್ದ ನಿವೃತ್ತಿ ವೇತನ/ಕುಟುಂಬ ವೇತನದ ಮೇಲೆ 27.50% ರಷ್ಟು ಫಿಟ್‌ಮೆಂಟ್ ಸೌಲಭ್ಯ.
3.ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನದ ಈ ಮೇಲಿನ (ಅ) + (ಅ) + (ಇ) ರ ಒಟ್ಟಾರೆ ಮೊತ್ತವು ಮಾಸಿಕ 13,500 ಗಳ ಕನಿಷ್ಠ ಪಿಂಚಣಿಗೆ ಕಡಿಮೆ ಇಲ್ಲದಂತೆ ಮತ್ತು ನಿವೃತ್ತಿ ವೇತನವು ಗರಿಷ್ಠ ಮಾಸಿಕ 1,20,600 ರೂ. ಮಿತಿಗೆ ಹಾಗೂ ಕುಟುಂಬ ನಿವೃತ್ತಿ ವೇತನದ ಗರಿಷ್ಠ ಮೊತ್ತವು ಮಾಸಿಕ 80,400 ರೂ. ಮಿತಿಗೆ ಒಳಪಟ್ಟಿರುತ್ತದೆ. ಈ ಪರಿಷ್ಕೃತ ಪಿಂಚಣಿಯ ಆರ್ಥಿಕ ಲಾಭವು ದಿನಾಂಕ: 01.08.20224 ರಿಂದ ಪ್ರಾಪ್ತವಾಗತಕ್ಕದ್ದು.
4.ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಸಂಬಂಧಿತ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ. ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆಗಳ ಪರಿಷ್ಕರಣೆಯ ಶಿಫಾರಸ್ಸು ಮತ್ತು ಪರಿಷ್ಕೃತ ವೇತನ ಹಾಗೂ ಪರಿಷ್ಕೃತ ಪಿಂಚಣಿಯಲ್ಲಿ ತುಟ್ಟಿ ಭತ್ಯೆ ಲೆಕ್ಕಾಚಾರ ಮಾಡಲು ಶಿಫಾರಸ್ಸು ಮಾಡಲಾದ ಪರಿಷ್ಕೃತ ಸೂತ್ರಕ್ಕೆ ಸಂಬಂಧಿಸಿದ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಭಾರ ಭತ್ಯೆ ಮಂಜೂರಾತಿಯ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ.
5.ನೌಕರರ ಸಾಮೂಹಿಕ ವಿಮಾ ಯೋಜನೆಗೆ ನೌಕರರ ವಂತಿಗೆ ಹೆಚ್ಚಳದ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ.
6.ಅನ್ವಯಿಸುವ ಬದಲಾವಣೆಯೊಂದಿಗೆ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ವಿಸ್ತರಿಸಲು ಸರ್ಕಾರವು ಹರ್ಷಿಸುತ್ತದೆ.
7.ಮುಂದುವರೆದು, ಈ ಮೇಲಿನಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ಉಂಟಾಗುವ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ: 01.08.2024ರಿಂದ ನಗದಾಗಿ ಪಾವತಿ ಮಾಡತಕ್ಕದ್ದು, ದಿನಾಂಕ: 01.07.2022 ರಿಂದ 31.07.2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ನಮಾಪ್ತಿಗೊಂಡ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು. ಆದರೆ, ಸದರಿ ಕಾಲ್ಪನಿಕ ಪುನರ್ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರನ ಫಲಾನುಭವಿಗೆ ಸಂದರ್ಭಾನುಸಾರ ದಿನಾಂಕ: 01.08.2024 ರಿಂದ ಪ್ರಾಪ್ತವಾಗತಕ್ಕದ್ದು.
ಪರಿಷ್ಕೃತ ವೇತನ ಶ್ರೇಣಿಗಳ ಹಂಚಿಕೆ ಮತ್ತು ಅದರಲ್ಲಿ ವೇತನ ಹಾಗೂ ನಿವೃತ್ತಿ ವೇತನವನ್ನು ಕ್ರಮಬದ್ಧಗೊಳಿಸುವ ಕುರಿತು, ಸರ್ಕಾರದಿಂದ ವಿವರವಾದ ನಿಯಮ ಮತ್ತು ಆದೇಶಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | 7th Pay Commission: ವೇತನ ಹೆಚ್ಚಿಸಿದ್ದಕ್ಕೆ ನೌಕರರಿಂದ ಅಭಿನಂದನೆ; ಸರ್ಕಾರದ ನಿಲುವುಗಳಿಗೆ ತಕ್ಕಂತೆ ಕೆಲಸ ಮಾಡಿ ಎಂದ ಸಿಎಂ