ಬಳ್ಳಾರಿ: ಬಡವರಿಗೆ ಸರ್ಕಾರ ಕೊಡುವ ಪಡಿತರ ಅಕ್ಕಿಯನ್ನು ಅವರಿಂದ ೮ ರೂಪಾಯಿಗೆ ಖರೀದಿಸಿ, ೧೮ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಶಂಕೆಯ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ. ಈ ಬಗ್ಗೆ ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಬೇಕಿದೆ.
ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ದಂಧೆಯ ಮೇಲೆ ಎಸ್‌ಪಿ ಸ್ಕ್ವಾಡ್ ಮತ್ತು ಬಳ್ಳಾರಿ ಗ್ರಾಮೀಣ ಪೊಲೀಸರು ದಾಳಿ ಮಾಡಿ ಅಂದಾಜು ೨೦೦ ಕ್ವಿಂಟಾಲ್ ಅಕ್ಕಿ ಮತ್ತು ಆರು ವಾಹನಗಳನ್ನು ವಶಪಡಿಸಿಕೊಂಡು, ೭ ಜನ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ವಕ್ರಾಣಿ ಕ್ಯಾಂಪಿನಲ್ಲಿ ಶನಿವಾರ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ನಡೆದಿದೆ.
ಸ್ಥಳೀಯವಾಗಿ ಸಂಗ್ರಹಿಸಿ ಗೂಡ್ಸ್ ವಾಹನದಲ್ಲಿ ತಂದಿರುವ ಪಡಿತರ ಅಕ್ಕಿಯನ್ನು ಲಾರಿಗೆ ವಕ್ರಾಣಿ ಕ್ಯಾಂಪ್ ಸಮೀಪದಲ್ಲಿ ಕೊಳಗಲ್‌ಗೆ ಹೋಗುವ ರಸ್ತೆಯಲ್ಲಿ ಲೋಡ್ ಮಾಡುತ್ತಿರುವ ಮಾಹಿತಿ ಆಧರಿಸಿ ಪೊಲೀಸರು ರಾತ್ರೋರಾತ್ರಿ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಎರಡು ಸರಕು ಸಾಗಾಣಿಕೆ ವಾಹನದಲ್ಲಿ ತಂದಿರುವ ಪಡಿತರ ಅಕ್ಕಿಯನ್ನು ಲಾರಿಗೆ ಲೋಡ್ ಮಾಡುತ್ತಿದ್ದಾಗ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ | Election 2023 | 12 ವರ್ಷದ ನಂತರ ರಾಜಕೀಯಕ್ಕೆ ಜನಾರ್ದನ ರೆಡ್ಡಿ ಎಂಟ್ರಿ ಕೊಡ್ತಾರಾ?
ದಾಳಿಯ ಸಂದರ್ಭದಲ್ಲಿ ಒಂದು ಲಾರಿ, ಎರಡು ಗೂಡ್ಸ್ ವಾಹನಗಳು, ಒಂದು ಓಮಿನಿ ಕಾರು, ಎರಡು ಬೈಕನ್ನು, ೮ ಮೊಬೈಲ್, ೩೦ ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ೭ ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಜತೆಗೆ ಅಕ್ಕಿಯ ಪರಿಶೀಲನೆ ಕಾರ್ಯ ನಡೆದಿದೆ.
೮ ರೂಪಾಯಿ ಅಕ್ಕಿ ೧೮ ರೂ.ಗೆ ಮಾರಾಟ?
ಸ್ಥಳೀಯವಾಗಿ ೮ ರೂ.ಗಳಿಗೆ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ೧೮ ರೂ.ಗಳಿಗೆ ಮಾರಾಟ ಮಾಡುತ್ತಾರೆ. ಇಲ್ಲಿನ ಅಕ್ಕಿಯನ್ನು ಬೆಂಗಳೂರು, ಗಂಗಾವತಿ, ತುಮಕೂರು ಸೇರಿದಂತೆ ಇತರ ಕಡೆಗಳಲ್ಲಿ ಸಾಗಾಣಿಕೆ ಮಾಡಲಾಗತ್ತದೆ. ಇವುಗಳನ್ನು ಹೋಟೆಲ್‌ಗಳಿಗೆ ಮತ್ತು ರೈಸ್‌ಮಿಲ್‌ಗಳಿಗೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮೂರು ಹಂತದಲ್ಲಿ ಪಡಿತರ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಜನಸಾಮಾನ್ಯರಿಂದ ೮ ರೂಪಾಯಿಗಳಿಗೆ ಅಕ್ಕಿಯನ್ನು ಪಡೆದು, ನಂತರದಲ್ಲಿ ಎರಡನೇ ಹಂತಲ್ಲಿ ೧೮ ರೂಪಾಗಳಿಗೆ ಮೂರನೇ ಹಂತದಲ್ಲಿ ೨೫ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಪಡಿತರ ಅಕ್ಕಿಗಳನ್ನು ಪಡೆಯುವ ಹೋಟೆಲ್‌ಗಳು ಇಡ್ಲಿ, ದೋಸೆ ಸೇರಿದಂತೆ ಇತರ ಆಹಾರ ತಯಾರಿಕೆಗೆ ಬಳಸಿದರೆ, ಕೆಲವೊಂದು ಅಕ್ಕಿ ಮಿಲ್‌ಗಳು ಅಕ್ಕಿಯನ್ನು ಪಾಲಿಶ್ ಮಾಡಿ, ಮಾರಾಟ ಮಾಡುವ ದಂಧೆಯೂ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ | ಗಣಿನಾಡಿಂದ ಬೆಂಗಳೂರು, ಹೈದರಾಬಾದ್‌ಗೆ ಮತ್ತೆ ಹಾರಲಿದೆ ವಿಮಾನ, ಅ. 30ರಿಂದ ಅಲಯನ್ಸ್ ಏರ್ ಹಾರಾಟ