ಚಿತ್ರದುರ್ಗ: ಆಟವಾಡುತ್ತಿದ್ದ ಬಾಲಕನಿಗೆ ನಾಯಿಯೊಂದು ಕಚ್ಚಿದ್ದು ಆತನ ಸಾವಿಗೆ ಕಾರಣವಾಗಿರುವ ಘಟನೆ ಚಿತ್ರದುರ್ಗದ ಬಿಳಿಕಲ್ಲು ನಾಯಕರಹಟ್ಟಿ ಗ್ರಾಮದಲ್ಲಿ ನಡೆದಿದೆ. 8 ವರ್ಷದ ಯಶವಂತ್‌ನನ್ನು ಉಳಿಸಲು 15 ದಿನ ಪಟ್ಟ ಶ್ರಮ ವ್ಯರ್ಥವಾಗಿದೆ. ಜುಲೈ 10ರಂದು ಮೆದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಲ್ಲು ನಾಯಕರಹಟ್ಟಿ ಗ್ರಾಮದಲ್ಲಿ ಯಶವಂತ್ ಆಟವಾಡುತ್ತಿದ್ದ. ಮನೆ ಬಳಿ ಆಡುತ್ತಿದ್ದ ಬಾಲಕನಿಗೆ ಬೀದಿ ನಾಯಿಯೊಂದು ಕಚ್ಚಿತ್ತು.
ರೇಖಾ ಮತ್ತು ಕೇಶವ ದಂಪತಿಯ ಪುತ್ರ ಯಶವಂತ್‌ನನ್ನು ಕೂಡಲೆ ಪೋಷಕರು ಆತನನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿ ಚಿಕಿತ್ಸೆ ಲಭಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಕನನ್ನು ಉಳಿಸಬೇಕೆಂದು ವೈದ್ಯರು ಅಪಾರ ಪರಿಶ್ರಮಪಟ್ಟರು.
ಆದರೆ ಚಿಕಿತ್ಸೆ ಫಲಿಸದೆ ಬಾಲಕ ಯಶವಂತ್ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಎಷ್ಟು ಪರಿಶ್ರಮಪಟ್ಟರೂ ಬಾಲಕನನ್ನು ಉಳಿಸಿಕೊಳ್ಳಲಾಗದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಇದ್ದದ್ದೇ ಪುತ್ರನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ನಾಯಿ ಹಾವಳಿಯನ್ನು ತಡೆಗಟ್ಟುವಲ್ಲಿ ಗ್ರಾಮಪಂಚಾಯಿತಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ | Karwar: ಮಕ್ಕಳು ಸೇರಿ ಏಳು ಜನರಿಗೆ ಕಚ್ಚಿದ ಬೀದಿ ನಾಯಿ