Site icon Vistara News

ಒಂಟಿಯಾಗಿದ್ದ ವೃದ್ಧೆಯ ಭೀಕರ ಹತ್ಯೆ; ಗಂಡ ಕಟ್ಟಿದ ಮನೆಯೆಂದು ಮಗನ ಜತೆಗೂ ಹೋಗಿರಲಿಲ್ಲ

80 years Old woman Murdered In Bengaluru

#image_title

ಬೆಂಗಳೂರಿನ ಉತ್ತರ ವಿಭಾಗದಲ್ಲಿ ಕಳೆದ ಒಂದು ವಾರದಿಂದಲೂ ಕೊಲೆ, ಕೊಲೆಯತ್ನ, ರಾಬರಿ ಪ್ರಕರಣಗಳು ನಡೆಯುತ್ತಲೇ ಇವರ. ಈಗ ಮೇ 27ರಂದು ರಾತ್ರಿ ಹಂತಕರು ಮಹಾಲಕ್ಷ್ಮೀ ಲೇಔಟ್​​​ನಲ್ಲಿ ಮನೆಯೊಂದರಲ್ಲಿ ಒಂಟಿಯಾಗಿ ಇದ್ದ 80ವರ್ಷದ ವೃದ್ಧೆಯನ್ನು (Old Lady Murder) ಭಯಾನಕವಾಗಿ ಹತ್ಯೆಗೈದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ಸಿಸಿಟಿವಿ ಫೂಟೇಜ್​ಗಳನ್ನೆಲ್ಲ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ವೃದ್ಧೆಯ ಹೆಸರು ಕಮಲಮ್ಮ ಎಂದಾಗಿದ್ದು, ಮನೆ ಇರುವುದು ಪೊಲೀಸ್​ ಠಾಣೆಗೆ ಕೂಗಳತೆ ದೂರದಲ್ಲಿ. ರಾತ್ರಿ ಮನೆಗೆ ನುಗ್ಗಿದವರು ವೃದ್ಧೆಯ ಕೈಯಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್​ ಹಾಕಿ ಉಸಿರುಗಟ್ಟಿ ಕೊಂದಿದ್ದಾರೆ. ವೃದ್ಧೆಗೆ ಮೂರು ಮಕ್ಕಳಿದ್ದು ಮಗ ವೈಟ್​ಫೀಲ್ಡ್​ನಲ್ಲಿ ಮತ್ತು ಹೆಣ್ಣುಮಕ್ಕಳಿಬ್ಬರು ಜೆಪಿ ನಗರದಲ್ಲಿ ಇದ್ದಾರೆ. ಮಗ ಅದೆಷ್ಟೋ ಬಾರಿ ಇವರನ್ನು ತನ್ನ ಜತೆಗೆ ಬಂದಿರು ಎಂದು ಕರೆದರೂ ವೃದ್ಧೆ ಹೋಗಿರಲಿಲ್ಲ. ನನ್ನ ಗಂಡ ಕಟ್ಟಿಸಿದ ಮನೆ ಇದು, ಇಲ್ಲಿಯೇ ಇರುತ್ತೇನೆ ಎಂದು ಹೇಳಿ ಈ ಮನೆಯಲ್ಲೇ ಒಬ್ಬರೇ ಇದ್ದರಂತೆ.

ಹಂತಕರು ಸಂಜೆ ವೇಳೆ ಮನೆಗೆ ನುಗ್ಗಿದಾಗ ಕಮಲಮ್ಮ ತಮ್ಮ ಮಲಗುವ ಕೋಣೆಯಲ್ಲಿ ಇದ್ದರು. ಅಲ್ಲಿಗೇ ಹೋಗಿ ಅವರ ಕೈಕಾಲು ಕಟ್ಟಿದ್ದಾರೆ. ಬಳಿಕ ಉಸಿರುಗಟ್ಟಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣಗಳು, ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇನ್ನು ಏಳುಗಂಟೆ ಹೊತ್ತಿಗೆ ಪಕ್ಕದ ಮನೆ ಮಕ್ಕಳು ಅಜ್ಜಿಯನ್ನು ಹುಡುಕಿ ಬಂದಾಗ, ಬಾಗಿಲು ತೆರೆದೇ ಇತ್ತು. ಒಳಗೆ ಹೋದರೆ ಅಜ್ಜಿ ಬಿದ್ದಿದ್ದರು. ಅದನ್ನು ನೋಡಿ ತಮ್ಮ ಮನೆಯವರಿಗೆ ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: Road Accident: ಅಪರಿಚಿತ ವಾಹನ ಡಿಕ್ಕಿಯಾಗಿ ವೃದ್ಧೆ ಸಾವು; ಭೀಕರ ಅಪಘಾತದಲ್ಲಿ ಚಾಲಕ ದುರ್ಮರಣ

ಸ್ಥಳಕ್ಕಾಗಮಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಶ್ವಾನದಳ, ಪಿಂಗರ್ ಪ್ರಿಂಟ್ ತಜ್ಞರು ಹಾಗೂ ಎಫ್ಎಸ್ಎಲ್ ತಜ್ಞರಿಂದ ಪರಿಶೀಲನೆ ಮಾಡಿಸಿದ್ದಾರೆ. ಹಂತಕರ ಸುಳಿವಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮೇಲ್ನೊಟಕ್ಕೆ ಕಮಲಮ್ಮನನ್ನ ವೃತ್ತಿಪರ ಹಂತಕರೇ ಚಿನ್ನಾಭರಣ ದೋಚುವ ಸಲುವಾಗಿ ಹತ್ಯೆಗೈದಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Exit mobile version