ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 80,000 ಅಪ್ರಾಪ್ತ ವಯಸ್ಸಿನವರು ಗರ್ಭಿಣಿಯರಾಗಿದ್ದಾರೆ (Underage Pregnancy) ಎಂಬ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (Child rights protection commission) ಅಂಕಿ ಅಂಶದಲ್ಲಿ ಈ ಅಂಶಗಳು ಕಂಡುಬಂದಿವೆ.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅಪ್ರಾಪ್ತ ಗರ್ಭಿಣಿಯರ ಪ್ರಕರಣ ಹೆಚ್ಚಾಗುತ್ತಿದೆ. 4 ವರ್ಷದಲ್ಲಿ 80 ಸಾವಿರಕ್ಕೂ ಅಧಿಕ ಅಪ್ರಾಪ್ತೆಯರು ಗರ್ಭಧಾರಣೆ ಮಾಡಿರುವ ವಿಚಾರವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪರಿಶೀಲನೆಗೆ ಹೊಸ ತಂಡ ರಚಿಸಲು ಸರ್ಕಾರಕ್ಕೆ ಮಕ್ಕಳ ರಕ್ಷಣಾ ಆಯೋಗ ಶಿಫಾರಸು ಮಾಡಿದೆ.
ಬೆಂಗಳೂರಿನಲ್ಲಿ ಅತೀ ಹೆಚ್ಚು ಅಪ್ತಾಪ್ತೆಯರು ಪ್ರೆಗ್ನೆಂಟ್ ಆಗಿದ್ದಾರೆ. ಕಲ್ಯಾಣ ಕರ್ನಾಟಕ, ಮಂಡ್ಯ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ. ಹದಿನೆಂಟು ತುಂಬುವ ಮೊದಲೇ ವಿವಾಹ, ಅತ್ಯಾಚಾರ, ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ಹೀಗೆ ಹಲವಾರು ರೀತಿಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಬಯಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಕಳವಳ ವ್ಯಕ್ತ ಪಡಿಸಿದ್ದಾರೆ.
ಕೆಲವೊಂದು ಪ್ರಕರಣಗಳಲ್ಲಿ ಸಂತ್ರಸ್ತೆಯರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳನ್ನು ಮುಚ್ಚಿಟ್ಟ ವಿಚಾರದಲ್ಲಿ ಈಗಾಲೇ 6 – 7 ವೈದ್ಯರ ಮೇಲೆಯೇ ಪ್ರಕರಣ ದಾಖಲಾಗಿದೆ. ಅಲ್ಲದೆ ಒಂದೆರಡು ನರ್ಸಿಂಗ್ ಹೋಮ್‌ಗಳನ್ನೇ ಮುಚ್ಚಲಾಗಿದೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪ್ರಾಪ್ತ ಗರ್ಭಿಣಿಯರ ವರದಿಯಾಗಿದ್ದು, ಉಡುಪಿಯಲ್ಲಿ ಅತಿ ಕಡಿಮೆ. ಹೆಚ್ಚಿನ ಜಿಲ್ಲೆಗಳಲ್ಲಿ 1,500-2,000 ಪ್ರಕರಣಗಳು ವರದಿಯಾಗಿವೆ. ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಗೆ “ಪ್ರೇಮ ಸಂಬಂಧ” ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಕೆಲವು ಹೆರಿಗೆಗಳು ಮನೆಯಲ್ಲಿ ನಡೆದಿವೆ, ಅನೇಕ ಸಂದರ್ಭಗಳಲ್ಲಿ ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ಅವರು ಹೇಳಿದರು.
ಅಪ್ರಾಪ್ತ ವಯಸ್ಸಿನ ಗರ್ಭಪಾತಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಯೋಗವು ನಿರ್ಧರಿಸಿದೆ. ಕಾನೂನು ಕ್ರಮವು ಸಂತ್ರಸ್ತರು ಮತ್ತು ಅವರ ಕುಟುಂಬದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಪೋಕ್ಸೊ ಅಡಿಯಲ್ಲಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆರೋಪಿಗಳು ಮಾತ್ರವಲ್ಲದೆ, ಅಂತಹ ಬಾಲಕಿಯರಿಗೆ ವೈದ್ಯಕೀಯ ನೆರವು ನೀಡಿದ ವೈದ್ಯರು ಮತ್ತು ಇತರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಾ.ನಾಗನ ಗೌಡ ಹೇಳಿದ್ದಾರೆ. ಹೈಸ್ಕೂಲ್ ಮತ್ತು ಪಿಯು ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ಆಯೋಗ ಕ್ರಮ ಕೈಗೊಂಡಿದೆ.
ಮಕ್ಕಳಿಗೆ 18 ವರ್ಷದವರೆಗೆ ಕಡ್ಡಾಯವಾಗಿ ಶಿಕ್ಷಣ ಪಡೆಯುವಂತೆ ಮಾಡಬೇಕು. ಅದಕ್ಕಾಗಿ ಡಿಡಿಪಿಐ ಹಾಗೂ ಬಿಇಒ ಅವರುಗಳು ಮಕ್ಕಳು 18 ವರ್ಷಗಳವರೆಗೆ ಶಾಲೆ – ಕಾಲೇಜು ತೊರೆಯದಂತೆ ಗಮನಹರಿಸಬೇಕು. ಶೇ. 90 ಬಾಲ್ಯ ಕಾರ್ಮಿಕ, ಬಾಲ್ಯ ವಿವಾಹವನ್ನು ತಪ್ಪಿಸಿದಂತಾಗುತ್ತದೆ ಎಂದು ನಾಗಣ್ಣ ಗೌಡ ಹೇಳಿದರು.
4 ವರ್ಷಗಳಲ್ಲಿ ದಾಖಲಾದ ಅಪ್ರಾಪ್ತೆಯರ ಗರ್ಭಧಾರಣೆ ಪ್ರಕರಣಗಳು
ವರ್ಷ | ಕೇಸ್ |
2020 | 10,864 |
2021 | 14,373 |
2022 | 26,440 |
2023 | 28,657 |
ಒಟ್ಟು | 80,334 |
ಇದನ್ನೂ ಓದಿ: Physical abuse : ಅಪ್ರಾಪ್ತೆ ಮೇಲೆ ದೌರ್ಜನ್ಯ ; ಅತ್ಯಾಚಾರ ಎಸಗಿ ವಿಡಿಯೊ ಮಾಡಿದ ಕಿರಾತಕರು!