Site icon Vistara News

ಜೈಲಿನಲ್ಲೇ ಕುಳಿತು ದರೋಡೆ ಸಂಚು ರೂಪಿಸಿದರು: 105 ಗ್ರಾಂ ಚಿನ್ನಾಭರಣದ ಜತೆಗೆ ಬಂಧನ

ಬೆಂಗಳೂರು: ಸಮಾಜದಲ್ಲಿ ಕಾನೂನುಬಾಹಿರ ಚಟುವಟಿಕೆಯನ್ನು ನಡೆಸಿದವರು ಸರಿದಾರಗೆ ಬರಲು, ಪಶ್ಚಾತ್ತಾಪದಿಂದ ಉತ್ತಮ ವ್ಯಕ್ತಿಗಳಾಗಲು ಜೈಲಿಗೆ ಕಳಿಸಲಾಗುತ್ತದೆ. ಸಮಾಜದಲ್ಲಿ ಮರ್ಯಾದೆಗೆ ಅಂಜಿ ಉತ್ತಮ ವ್ಯಕ್ತಿಗಳಾಗುತ್ತಾರೆ ಎಂದುಕೊಂಡರೆ ಇಲ್ಲಿಬ್ಬರು ಜೈಲಿನಲ್ಲೆ ಪರಿಚಯವಾಗಿ, ಅಲ್ಲೇ ಕುಳಿತು ದರೋಡೆಗೆ ಸಂಚುರೂಪಿಸಿ, ಕೃತ್ಯವನ್ನೂ ಎಸಗಿ ಇದೀಗ ಪೊಲೀಸರ ವಶದಲ್ಲಿದ್ದಾರೆ.

ಮಂಜುನಾಥ್‌ ಎನ್ನುವಾತ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್‌ ಆಗಿದ್ದವು. ಜೈಲು ಸೇರಿ ಪರಪ್ಪನ ಅಗ್ರಹಾರದಲ್ಲೆ ಇದ್ದ ಮಂಜುನಾಥ್‌ಗೆ, ಮತ್ತೊಂದು ಪ್ರಕರಣದಲ್ಲಿ ಬಂಧಿತ ವೆಂಕಟೇಶ್‌ ಜೈಲಿನಲ್ಲಿ ಜತೆಯಾಗಿದ್ದಾನೆ. ಇಬ್ಬರಲ್ಲೂ ಸ್ನೇಹ ಬೆಳೆದಿದೆ. ಕೊನೆಗೆ, ಜಂಟಿ ಕಾರ್ಯಾಚರಣೆಯಲ್ಲಿ ದರೋಡೆಯನ್ನು ಮುಂದುವರಿಸಿ ಪಾಲು ಹಂಚಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಹೊರಬಂದವರೆ ಕರ್ನಾಟಕದ ವಿವಿಧ ನಗರಗಳಲ್ಲಿ ಸುತ್ತುತ್ತಿದ್ದರು. ಕೋಲಾರ, ತುಮಕೂರು, ಹುಬ್ಬಳ್ಳಿ, ಬೆಂಗಳೂರು ಸೇರಿ ಅನೇಕ ಸ್ಥಳಗಳಲ್ಲಿ ಬೈಕ್‌ ಮೂಲಕ ಬೀದಿಬೀದಿ ಸುತ್ತುತ್ತಿದ್ದರು. ಈ ವೇಳೆ ಬೈಕ್‌ನಲ್ಲಿಯೇ ದರೋಡೆಗೆ ಅಗತ್ಯ ಉಪಕರಣಗಳನ್ನು ಹೊಂದಿರುತ್ತಿದ್ದ ಆರೋಪಿಗಳು, ದೊಡ್ಡ ಮನೆಯನ್ನು ಹುಡುಕುತ್ತಿದ್ದರು. ಅವಕಾಶ ಸಿಕ್ಕೊಡನೆ ಸಮಯ ವ್ಯರ್ಥ ಮಾಡದೆ ಕಾರ್ಯಾಚರಣೆಗೆ ಇಳಿಯುತ್ತಿದ್ದರು. ಜೈಲಿನಿಂದ ಹೊರಬಂದರೂ ಮತ್ತೆ ಕಳ್ಳತನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಇಬ್ಬರು ಆರೋಪಿಗಳನ್ನೂ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 5.25 ಲಕ್ಷ ರೂ. ಮೊತ್ತದ 105 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

Exit mobile version