Site icon Vistara News

Farmers Protest: ಸ್ವಾಮೀಜಿಗಳ ಸಂಧಾನ ಯಶಸ್ವಿ; ಕಿತ್ತೂರಲ್ಲಿ ಪ್ರತಿಭಟನೆ ಹಿಂಪಡೆದ 9 ಹಳ್ಳಿ ರೈತರು

Farmers Protest

ಬೆಳಗಾವಿ: ಸ್ವಾಮೀಜಿಗಳ ನೇತೃತ್ವದಲ್ಲಿ ಸಂಧಾನ ಯಶಸ್ವಿಯಾಗಿದ್ದು, ಕಿತ್ತೂರಿನಲ್ಲಿ ಪ್ರತಿಭಟನೆ ಹಿಂಪಡೆಯಲು 9 ಗ್ರಾಮಗಳ ರೈತರು ತಾತ್ಕಾಲಿಕ ಒಪ್ಪಿಗೆ ನೀಡಿದ್ದಾರೆ. ಇದೇ ವೇಳೆ ಬಂಧಿಸಿರುವ 12 ರೈತರಿಗೆ ಜಾಮೀನು ನೀಡಿ ಸೋಮವಾರ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದು, ತಪ್ಪಿದ್ದಲ್ಲಿ ಮತ್ತೆ ಪ್ರತಿಭಟನೆ (Farmers Protest) ನಡೆಸುವಾಗಿ ಎಚ್ಚರಿಕೆ ನೀಡಿದ್ದಾರೆ.

ಕುಲವಳ್ಳಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ವಿರೋಧಿಸಿ 9 ಗ್ರಾಮಗಳ ರೈತರು ಕಿತ್ತೂರಿನಲ್ಲಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರು. ಸಚಿವರನ್ನು ಭೇಟಿ ಮಾಡಿಸುವುದಾಗಿ ಕಿತ್ತೂರು ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಅವರು ಭರವಸೆ ನೀಡಿದ್ದರಿಂದ ರೈತರು ಹೋರಾಟ ಕೈಬಿಟ್ಟಿದ್ದಾರೆ.

ಎರಡು‌ ಕಡೆಯಿಂದ ದಾಖಲೆ ಬರಬೇಕು, ಇದು ಸಾವಿರಾರು ಎಕರೆ ಜಮೀನಿನ ಸಮಸ್ಯೆ. ದಾಖಲೆ ತರುವುದು ನನ್ನ ಕೆಲಸವಲ್ಲ, ಬಂಧನವಾದವರಿಗೆ ಸಮಸ್ಯೆ ಆಗಬಾರದು ಎಂದು ತಾತ್ಕಾಲಿಕ ಧರಣಿ ವಾಪಸ್ ಪಡೆಯಲು ಹೇಳಿದ್ದೇನೆ. ಸೋಮವಾರ ಒಂದು ದಿನ ಸಮಯ ಕೇಳಿದ್ದೇನೆ. ನಂತರ ಸಚಿವರನ್ನು ಭೇಟಿ ಮಾಡುತ್ತೇವೆ. ದಾಖಲೆ ಕೊಡುವುದು, ವಕೀಲರನ್ನು ನೇಮಿಸುವುದು ನನ್ನ ಕೆಲಸ ಅಲ್ಲಾ. ಕೆಲವು ದಾಖಲೆ ಅಧಿಕಾರಿಗಳ ಬಳಿ ಇವೆ, ಕೆಲ ದಾಖಲೆ ರೈತರ ಬಳಿ ಇವೆ. ಇವುಗಳನ್ನು ಪರಿಶೀಲಿಸಿ ಇತ್ಯರ್ಥ ಮಾಡಬೇಕಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ | Farmers Protest: ರೈತರ ಒಕ್ಕಲೆಬ್ಬಿಸುವಿಕೆಗೆ ಆಕ್ರೋಶ; ಕಿತ್ತೂರಲ್ಲಿ ಹೆದ್ದಾರಿ ತಡೆದು 9 ಗ್ರಾಮಸ್ಥರ ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮಸ್ಥರು ಸೇರಿ 9 ಹಳ್ಳಿಗಳಿಂದ ಜಾನುವಾರು, ಟ್ರ್ಯಾಕ್ಟರ್ ಸಮೇತ ಸಾವಿರಾರು ಜನರು, ಕಿತ್ತೂರು ಚೆನ್ನಮ್ಮ‌ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. 9 ಹಳ್ಳಿಗಳ ರೈತರ ಸಾಗುವಳಿ ಜಮೀನನ್ನು ಕಂದಾಯ ಅಧಿಕಾರಿಗಳು ಇನಾಮದಾರ್ ಹೆಸರಿಗೆ ಖಾತೆ ‌ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ 70 ವರ್ಷದಿಂದ ಉಳುಮೆ ಮಾಡಿರುವ ರೈತರು, ತಮ್ಮ ಜಮೀನು ಬಿಟ್ಟು ಕೊಡುವಂತೆ ಒತ್ತಾಯಿಸಿದ್ದಾರೆ.

ಚೆನ್ನಮ್ಮ ವೃತ್ತದ ಬಳಿ ಶುಕ್ರವಾರ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡಿದರು. ಈ ಹಿನ್ನೆಲೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಳಗಾವಿಯ ಅಡಿಷನಲ್ ಎಸ್ಪಿ ಎಂ. ವೇಣುಗೋಪಾಲ್ ಆಗಮಿಸಿ ಬಿಗಿ ಬಂದೋಬಸ್ತ್‌ಗೆ ಕ್ರಮ ಕೈಗೊಂಡಿದ್ದರು. ಆದರೆ, ಶನಿವಾರ ಸಂಜೆ ಸ್ವಾಮೀಜಿಗಳು ಸಂಧಾನ ನಡೆಸಿದ್ದರಿಂದ ರೈತರು ಪ್ರತಿಭಟನೆ ವಾಪಸ್‌ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version