ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ (Bangalore Traffic) ಕಿರಿಕಿರಿಗೆ ಜನ ಹೈರಾಣಾಗಿದ್ದಾರೆ. ಹೀಗಾಗಿ ಖಾಸಗಿ ವಾಹನಗಳಲ್ಲಿ (Private vehicles) ಹೋಗುವವರು ಪರ್ಯಾಯಕ್ಕಾಗಿ ಹುಡುಕಾಡುತ್ತಿದ್ದಾರೆ ಎಂಬ ಅಂಶವು ಅಧ್ಯಯನವೊಂದರಿಂದ ಬಹಿರಂಗಗೊಂಡಿದೆ. “#Personal2Public ಬೆಂಗಳೂರು” ಎಂಬ ಅಧ್ಯಯನವನ್ನು ನಡೆಸಲಾಗಿದ್ದು, ಇದರ ಅನುಸಾರ ಅಧ್ಯಯನಕ್ಕೊಳಪಟ್ಟವರಲ್ಲಿ ಶೇ. 95ರಷ್ಟು ಮಂದಿ ನಮ್ಮ ಮೆಟ್ರೋ (Namma Metro) ಸೇವೆಯನ್ನು ಬಳಸಲು ಸಿದ್ಧರಿದ್ದಾರೆ. ಅವರ ಏಕೈಕ ಷರತ್ತು ಎಂದರೆ, ತಮ್ಮ ಗಮ್ಯ ಸ್ಥಾನದವರೆಗೆ ಮೆಟ್ರೋ ಸಂಪರ್ಕ ಇರಬೇಕು ಎಂಬುದಾಗಿದೆ.
ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ (Bangalore Political Action Committee – ಬಿಪಿಎಸಿ), ಡಬ್ಲ್ಯುಆರ್‌ಐ ಇಂಡಿಯಾ (WRI India), ಕೆಲವು ಕಾರ್ಪೊರೇಟ್ ಸಂಸ್ಥೆಗಳು, ನಾಗರಿಕ ಸಮಾಜ ಸಂಸ್ಥೆಗಳು, ಆಟೋ ಚಾಲಕ ಸಂಘಗಳು ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಈ #Personal2Public ಅಭಿಯಾನವನ್ನು ನಡೆಸಲಾಗಿದೆ. ಇಲ್ಲಿ ಟ್ರಾಫಿಕ್ ಮುಕ್ತ ಸಂಚಾರ (Traffic free traffic) ಹಾಗೂ ಸಮಯದ ಉಳಿತಾಯಕ್ಕೆ (Time Saving) ಹೆಚ್ಚಿನವರು ಆದ್ಯತೆ ನೀಡಿದ್ದು, ಪ್ರಯಾಣದ ವೆಚ್ಚದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಈ ಅಧ್ಯಯನಕ್ಕಾಗಿ ಕಚೇರಿಗೆ ಹೋಗಲು ಖಾಸಗಿ ವಾಹನಗಳನ್ನು ಬಳಸುತ್ತಿರುವ 3,855 ಜನರನ್ನು ಆಯ್ದುಕೊಳ್ಳಲಾಗಿತ್ತು. ಅವರಲ್ಲಿ ಶೇ. 95ರಷ್ಟು ಜನರು ಮೆಟ್ರೋಗೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದಾರೆ ಎಂಬ ಅಂಶವು ಬಹಿರಂಗಗೊಂಡಿದೆ.
ಇದನ್ನೂ ಓದಿ: Lok Sabha Election 2024 : ಲೋಕಸಭಾ ಟಿಕೆಟ್‌ಗೆ ಪ್ರಬಲ ಸಮುದಾಯಗಳ ಪಟ್ಟು; ಕಾಂಗ್ರೆಸ್‌ಗೆ ಇಕ್ಕಟ್ಟು!
3,855 ಮಂದಿ ಸಮೀಕ್ಷೆಯಲ್ಲಿ ಭಾಗಿ
ಪ್ರಶ್ನಾವಳಿ ಮೂಲಕ ಈ ಅಧ್ಯಯನವನ್ನು ನಡೆಸಲಾಗಿದ್ದು, ಜುಲೈನಲ್ಲಿ ಅಭಿಯಾನವನ್ನು ಆರಂಭಿಸಲಾಗಿತ್ತು. ಸಮೀಕ್ಷೆಯಲ್ಲಿ 3,855 ಮಂದಿ ಭಾಗವಹಿಸಿದ್ದರು. ಇವರಲ್ಲಿ ಹೆಚ್ಚಿನವರು (ಶೇ. 60) ಪ್ರತಿದಿನ ಪ್ರಯಾಣಕ್ಕಾಗಿ ತಮ್ಮ ವೈಯಕ್ತಿಕ ವಾಹನಗಳನ್ನು ಬಳಸುತ್ತಾರೆ. 1,172 ಕಾರುಗಳು ಮತ್ತು 1,046 ದ್ವಿಚಕ್ರ ವಾಹನಗಳ ಮೂಲಕ ತಮ್ಮ ತಮ್ಮ ಕಚೇರಿಗಳನ್ನು ತಲುಪುತ್ತಾರೆ. ಇದೇ ರೀತಿಯಾಗಿ ಪ್ರಸ್ತುತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಕೆ ಮಾಡುತ್ತಿರುವವರನ್ನೂ ಅಧ್ಯಯನಕ್ಕೊಳಪಡಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ಅಂದರೆ ಶೇ. 62ರಷ್ಟು ಮಂದಿ ಉತ್ತಮ ಫುಟ್ಪಾತ್ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ. ಇನ್ನು ಶೇ. 33ರಷ್ಟು ಮಂದಿ ಪ್ರಯಾಣಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಬಯಸಿದ್ದಾರೆ.
ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿದ ಪ್ರದೇಶಗಳಿವು
ಈ ಅಭಿಯಾನಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದ್ದರೂ ವೈಟ್‌ಫೀಲ್ಡ್, ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಪ್ರದೇಶಗಳಲ್ಲಿನ ಪ್ರಯಾಣಿಕರು ಮತ್ತು ನಿವಾಸಿಗಳ ಭಾಗವಹಿಸುವಿಕೆಯನ್ನು ನಿರ್ದಿಷ್ಟವಾಗಿ ಕೋರಲಾಗಿತ್ತು. ಈ ಪ್ರದೇಶಗಳಲ್ಲಿ ಸರಿಸುಮಾರು 10 ಲಕ್ಷ ಉದ್ಯೋಗಿಗಳಿದ್ದಾರೆ. ಇವರಲ್ಲಿ ಹೆಚ್ಚಿನವರು ಖಾಸಗಿ ವಾಹನಗಳ ಮೂಲಕ ತಮ್ಮ ಕಚೇರಿಗೆ ಪ್ರಯಾಣಿಸುತ್ತಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಮುಂದಿನ ಮೆಟ್ರೋ ಮಾರ್ಗಗಳಿಗೆ ಸಂಪರ್ಕ ಹೊಂದುವ ಯೋಜನೆ ಆಗುತ್ತಿರುವುದರಿಂದ ಈ ಭಾಗದ ಜನರ ಅಭಿಪ್ರಾಯಗಳು ಹೆಚ್ಚಿನ ಮಹತ್ವವನ್ನು ಪಡೆದಿದ್ದವು.
ರಸ್ತೆ ಪ್ರಯಾಣ – ಸಮಯ ಹರಣ
ವೈಟ್‌ಫೀಲ್ಡ್, ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ ಮತ್ತು ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಪ್ರದೇಶಗಳಲ್ಲಿ ಕಚೇರಿಗೆ ಹೋಗುವ ಮೆಟ್ರೋ ಬಳಕೆದಾರರಿಗೆ 45 ನಿಮಿಷಗಳಿಂದ 1 ಗಂಟೆಯವರೆಗೆ ಸಮಯ ತಗಲುತ್ತದೆ. ಆದರೆ, ಕಾರು ಪ್ರಯಾಣವು ಸುಮಾರು 1.15 ಗಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಹೀಗಾಗಿ ಕಾರು ಮತ್ತು ದ್ವಿಚಕ್ರ ವಾಹನ ಬಳಕೆದಾರರು ತಮ್ಮ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೆಟ್ರೋ ಸೇವೆಯನ್ನು ಕಲ್ಪಿಸಿದರೆ ತಾವು ತಮ್ಮ ವಾಹನಗಳನ್ನು ಬಿಟ್ಟು ಮೆಟ್ರೋ ಪ್ರಯಾಣವನ್ನು ಅವಲಂಬಿಸುವುದಾಗಿ ಅಧ್ಯಯನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: SSLC PUC Exam : ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನು 3 ಪರೀಕ್ಷೆ! ಗುಡ್‌ನ್ಯೂಸ್ ಕೊಟ್ಟ ಸರ್ಕಾರ
ಇನ್ನು ಶೇ. 50ರಷ್ಟು ಮಹಿಳೆಯರು ಖಾಸಗಿ ವಿಧಾನಗಳಿಗಿಂತ ನಿಯಮಿತ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುತ್ತಾರೆ ಎಂಬ ವಿಷಯ ಸಮೀಕ್ಷೆಯಿಂದ ಗೊತ್ತಾಗಿದೆ. ಶೇಕಡಾ 40ರಷ್ಟು ಮಹಿಳೆಯರು ತಮ್ಮ ಗಮ್ಯ ಸ್ಥಾನದವರೆಗೆ ಟ್ರಾಫಿಕ್ ರಹಿತ ಪ್ರಯಾಣಕ್ಕೆ ಸಾರಿಗೆ ಸೇವೆ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.