Site icon Vistara News

ಜಿನದತ್ತ ದೇಸಾಯಿ, ಮೊಗಸಾಲೆ, ಸರಸ್ವತಿ ಚಿಮ್ಮಲಗಿ ಸೇರಿ 15 ಸಾಧಕರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಧಾರವಾಡದ ಹಿರಿಯ ಕವಿ ಜಿನದತ್ತ ದೇಸಾಯಿ, ಕಾರ್ಕಳ ತಾಲೂಕಿನ ಕಾಂತಾವರದ ಡಾ. ನಾ. ಮೊಗಸಾಲೆ, ವಿಜಯಪುರದ ಲೇಖಕಿ ಹಾಗೂ ಇತ್ತೀಚೆಷ್ಟೆ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಾ. ಸರಸ್ವತಿ ಚಿಮ್ಮಲಗಿ, ಸಂಶೋಧಕ ಡಾ. ಬಸವರಾಜ ಕಲ್ಗುಡಿ ಹಾಗೂ ಹಿರಿಯ ಸಾಹಿತಿ ಡಾ. ಯಲ್ಲಪ್ಪ ಕೆ.ಕೆ. ಪುರ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗೌರವ ಪ್ರಶಸ್ತಿ ಜತೆಗೆ 10 ಜನರನ್ನು ವಾರ್ಷಿಕ ʼಸಾಹಿತ್ಯಶ್ರೀʼ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ. ಚಂದ್ರಕಲಾ ಬಿದರಿ, ಪ್ರೊ. ಎಂ.ಎನ್‌. ವೆಂಕಟೇಶ್‌, ಡಾ. ಚನ್ನಬಸವಯ್ಯ ಹಿರೇಮಠ, ಡಾ. ಮ. ರಾಮಕೃಷ್ಣ, ಅಬ್ದುಲ್‌ ರಶೀದ್‌, ಡಾ. ವೈ. ಎಂ. ಭಜಂತ್ರಿ, ಜೋಗಿ(ಗಿರೀಶ್‌ರಾವ್‌ ಹತ್ವಾರ್‌), ಮೈಸೂರು ಕೃಷ್ಣಮೂರ್ತಿ, ಗಣೇಶ ಅಮೀನಗಡ, ಆಲೂರು ದೊಡ್ಡನಿಂಗಪ್ಪ ಅವರನ್ನು ಸಾಹಿತ್ಯ ಶ್ರೀ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಹತ್ತು ಜನರಲ್ಲಿ ಐವರು ಸೃಜನಶೀಲ ಕ್ಷೇತ್ರ, ಸೃಜನೇತರ ಕ್ಷೇತ್ರದ ಮೂವರು ಹಾಗೂ ಸಾಹಿತ್ಯ ಪರಿಚಾರಿಕೆ ಮತ್ತು ಹೊರನಾಡಿನ ಸಾಧಕರಿಗೆ ತಲಾ ಒಂದು ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.

ಗೌರವ ಪ್ರಶಸ್ತಿಯು ತಲಾ ಐವತ್ತು ಸಾವಿರ ರೂ. ನಗದು, ಸಾಹಿತ್ಯಶ್ರೀ ಪ್ರಶಸ್ತಿಯು ತಲಾ ಇಪ್ಪತ್ತೈದು ಸಾವಿರ ರೂ. ನಗದು ಪ್ರಶಸ್ತಿ ಫಲಕ, ಶಾಳು, ಹಾರ, ಫಲ ತಾಂಬೂಲವನ್ನು ಒಳಗೊಂಡಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version