Site icon Vistara News

Road Rage Video : ಬಂಡೀಪುರದಲ್ಲಿ ಮಹಿಳೆಯರಿದ್ದ ಕಾರಿನ ಮೇಲೆ ಯುವಕರ ದಾಳಿ!

Road Rage

ಬೆಂಗಳೂರು: ಬಂಡೀಪುರದ ರಾಷ್ಟ್ರೀಯ ಉದ್ಯಾನದ ರಸ್ತೆಯಲ್ಲಿ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದ ನಾಲ್ವರು ಯುವಕರ ಗುಂಪು ಕಾರಿನಲ್ಲಿದ್ದವರಿಗೆ (Road Rage) ಹಲ್ಲೆ ಮಾಡಿರುವ ಬಗ್ಗೆ ಸೋಶಿಯಲ್​ ಮೀಡಿಯಾ ಟ್ವಿಟರ್​ನಲ್ಲಿ ವಿಡಿಯೊ ಸಮೇತ ಚರ್ಚೆ ನಡೆಯುತ್ತಿದೆ. ಕಾರಿನಲ್ಲಿದ್ದ ಮಹಿಳೆ ಗಾಯಗೊಂಡಿದ್ದಾರೆ ಎಂಬುದಾಗಿಯೂ ಹೇಳಲಾಗಿದೆ. ಆದರೆ, ಈ ಬಗ್ಗೆ ಪೊಲೀಸ್​ ದೂರು ದಾಖಲಾಗಿಲ್ಲ. ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಟ್ವೀಟ್​ ಮೂಲಕ ಒತ್ತಾಯ ಮಾಡಲಾಗಿದೆ. ಆದರೆ ಹಲ್ಲೆಗೊಳಗಾದವರು ಯಾರು ವಿಡಿಯೊ ಕಳುಹಿಸಿದವರು ಯಾರು ಎಂಬ ಮಾಹಿತಿ ಬಹಿರಂಗವಾಗಿಲ್ಲ.

ಥರ್ಡ್​ ಐ ಎಂಬ ಟ್ವಿಟರ್​​ ಖಾತೆಯಿಂದ ಈ ವಿಡಿಯೊ ಶೇರ್ ಮಾಡಲಾಗಿದೆ. ಅಲ್ಲದೆ, ಹಲ್ಲೆಗೊಳಗಾದ ವ್ಯಕ್ತಿಯು ತಮಗೆ ವಿಡಿಯೊ ಸಮೇತ ಮಾಹಿತಿ ಕೊಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇಡೀ ಘಟನೆಯ ದೃಶ್ಯಗಳು ಹಲ್ಲೆಗೊಳಗಾದ ಕಾರಿನ ಡ್ಯಾಶ್​ ಕ್ಯಾಮೆರಾದಲ್ಲಿ ದಾಖಲಾಗಿರುವುದು ಎಂದು ಹೇಳಲಾಗಿದೆ. ಆ ವಿಡಿಯೊವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಗುಂಪೊಂದು ತಮ್ಮ ಮೇಲೆ ವಾಹನ ಅಡ್ಡಗಟ್ಟಿ ದಾಳಿ ಮಾಡಿದೆ. ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಹೋಗುವ ವೇಳೆ ತನ್ನ ಪತ್ನಿಯ ಕೈಗೆ ಗಾಯವಾಗಿದೆ ಎಂದು ಸಂತ್ರಸ್ತ ವ್ಯಕ್ತಿ ಹೇಳಿರುವುದಾಗಿ ಬರೆದುಕೊಳ್ಳಲಾಗಿದೆ. ಈ ವಿಡಿಯೊವನ್ನು ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕ ಅಲೋಕ್​ಕುಮಾರ್​ ಹಾಗೂ ಕರ್ನಾಟಕ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.

ನಾವು ಗಡಿ ಪ್ರದೇಶದ ವ್ಯಕ್ತಿಗಳು. ಈ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಲು ಮುಂದಾದಾಗ ಅವರು ನಮ್ಮ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಸಂತ್ರಸ್ತರು ಹೇಳಿಕೊಂಡಿರುವುದಾಗಿಯೂ ಟ್ವೀಟ್​ನಲ್ಲಿ ಬರೆಯಲಾಗಿದೆ.

ಬೆಂಗಳೂರು ಮೂಲದ ಕಾರು: ಕೆಎ04 ಎನ್​ಬಿ 5716 ನೋಂದಣಿ ಸಂಖ್ಯೆಯ ಕಾರಿನಲ್ಲಿದ್ದ ಯುವಕರು ಹಲ್ಲೆ ಮಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ಕಾರು ಬೆಂಗಳೂರಿಗೆ ಸೇರಿದ್ದು ಎನ್ನಲಾಗಿದೆ. ಆದರೆ, ದೂರು ದಾಖಲಾಗದಿರುವ ಕಾರಣ ಯಾರು ಆರೋಪಿಗಳು ಎಂಬುದು ಗೊತ್ತಾಗಿಲ್ಲ.

ದೂರು ನೀಡುವಂತೆ ಅಲೋಕ್​ಕುಮಾರ್​ ಮಾಹಿತಿ

ಟ್ವೀಟ್​ಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್​ ಕುಮಾರ್ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಘಟನೆ ಜೂನ್​ 17ರಂದು ನಡೆದಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ. ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಬಹುದಾಗಿದೆ. ಆದರೆ, ಯಾರೂ ಈವರೆಗೆ ದೂರು ನೀಡಿಲ್ಲ. ಸಂತ್ರಸ್ತರು ಸಿಪಿಐ (9480804601) ಅವರನ್ನು ಸಂಪರ್ಕಿಸಬಹುದು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : Assault Case : ಇಸ್ಲಾಂ ಹೆಸರಲ್ಲಿ ವಿವಾದಿತ ಪೋಸ್ಟ್‌; ರಾಯಚೂರಲ್ಲಿ ಎರಡು ಕೋಮಿನ ನಡುವೆ ಗಲಾಟೆ

ಕೇರಳಿಗನ ಕುಮ್ಮಕ್ಕು ಎಂದ ನೆಟ್ಟಿಗರು

ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧ ಚರ್ಚೆ ಶುರುವಾಗಿದೆ. ಬಹುತೇಕ ಮಂದಿ ಇದು ಕೇರಳದವರ ಕುತಂತ್ರ ಎಂದು ಹೇಳಿದ್ದಾರೆ. ಥರ್ಡ್ ಐ ಟ್ವೀಟ್​ ಖಾತೆ ಹೊಂದಿರುವ ವ್ಯಕ್ತಿ ಸದಾ ಕೇರಳ ಪರವಾಗಿ ಮಾತನಾಡುತ್ತಾರೆ. ಕನ್ನಡಿಗರ ಬಗ್ಗೆ ದೂರು ಹೇಳುತ್ತಾರೆ ಎಂದು ಟ್ವೀಟ್​ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

Exit mobile version