Site icon Vistara News

My Soil My Country: ಗರಿಷ್ಠ ದೇಶಪ್ರೇಮ ಇರುವ ದೇಶ ಅತಿಹೆಚ್ಚು ಅಭಿವೃದ್ಧಿ ಕಾಣುತ್ತದೆ: ಡಿ.ವಿ. ಸದಾನಂದ ಗೌಡ

DV Sadananda Gowda and Dr CN Ashwath narayan

ಬೆಂಗಳೂರು: ಇವತ್ತು ಭಾರತವು ಯಶಸ್ವಿ ದೇಶವಾಗಿದೆ. ದೇಶಕ್ಕೆ (My Soil My Country) ನಮ್ಮ ಮಣ್ಣಿನ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಆಧರಿತ ಹೆಸರಿರಬೇಕು. ಗರಿಷ್ಠ ದೇಶಪ್ರೇಮ ಇರುವ ದೇಶ ಅತಿಹೆಚ್ಚು ಅಭಿವೃದ್ಧಿ ಕಾಣುತ್ತದೆ. ಇಸ್ರೇಲ್, ಜಪಾನ್ ಇದಕ್ಕೆ ಉದಾಹರಣೆಯಾಗಿದೆ. ರಾಜಕೀಯ ಕಾರಣಕ್ಕಾಗಿ ಇಂಡಿಯಾ ಹೆಸರಿಗೆ ಪ್ರಾಮುಖ್ಯತೆ ನೀಡಿದ್ದು ದುರ್ದೈವ ಎಂದು ಸಂಸದ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದರು.

ನಗರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ (my soil my country) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹೆಸರು ಬದಲಾವಣೆ ಯಾವಾಗಲೋ ಆಗಬೇಕಿತ್ತು. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಭರತ ಭೂಮಿಯಲ್ಲಿ ನಾವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲೇ ಭಾರತ ಎಂಬ ಒಂದೇ ಹೆಸರನ್ನು ಈ ಭೂಮಿಗೆ ಇಡಬೇಕಾಗಿತ್ತು. ವಿದೇಶಿ ಪ್ರೇಮದ ಜನರು ಇದ್ದ ಕಾರಣ ಆ ‘ಇಂಡಿಯಾ’ ಶಬ್ದ ಬಂದಿದೆ ಎಂದು ತಿಳಿಸಿದರು.

ಸನಾತನ ಹಿಂದೂ ಧರ್ಮ ಪುರಾತನ ಕಾಲದ್ದು. ಅದರ ಬೇರುಗಳು ಆಳವಾಗಿವೆ. ಡಾ. ಪರಮೇಶ್ವರ್ ಅವರಿಗೂ ಅದರ ಬೇರು ಕಂಡುಹಿಡಿಯಲು ಸಾಧ್ಯವಿಲ್ಲ. ಅದೇ ಧರ್ಮದಲ್ಲಿ ಹುಟ್ಟಿದ ವ್ಯಕ್ತಿ ಆ ಧರ್ಮದ ಕುರಿತು ಮಾತನಾಡುವಾಗ ಸ್ವಲ್ಪ ಪರಿಜ್ಞಾನ ಇಟ್ಟುಕೊಂಡು ಮಾತನಾಡುವುದು ಸೂಕ್ತ ಎಂದು ಕಿಡಿಕಾರಿದರು.

ಇದನ್ನೂ ಓದಿ | Karnataka Politics : ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೆ ಶಾಸಕರ ಟೆನ್ಶನ್‌; ಸ್ವಪಕ್ಷೀಯರಿಂದ ಬಿದ್ದ ಬರ ಭಾರ!

ಪ್ರಕಾಶ್‍ರಾಜ್ ಅವರ ಮಾತು ಬಾಲಿಶ, ಇಂಥ ಮಾತು ಅವರಿಗೆ ಗೌರವ ತರುವುದಿಲ್ಲ ಎಂದು ಹೇಳಿದ ಅವರು, ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನೀರು ಬಿಡುವ ವಿಚಾರದಲ್ಲಿ ‘ಇಂಡಿಯ’ದ ಪಾಲುದಾರರಾಗಿ ವರ್ತಿಸುತ್ತಿದ್ದಾರೆ. ಇದು ಕರ್ನಾಟಕ ಜನರಿಗೆ ಮಾಡಿದ ದ್ರೋಹ ಎಂದರು.

‘ನನ್ನ ಮಣ್ಣು ನನ್ನ ದೇಶ’ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮ

my soil my country programme

ದೇಶದ ಪರಂಪರೆ, ಆಚಾರ, ವಿಚಾರಗಳನ್ನು ಕ್ರೋಡೀಕರಿಸುವ ಕಾರ್ಯ ನಡೆಯುತ್ತಿದ್ದು, ದೇಶ ರಕ್ಷಿಸುವ ಸೈನಿಕರ ವನಕ್ಕೆ ರಾಜ್ಯದಿಂದ ಕೂಡ ಮಣ್ಣು ಕಳುಹಿಸುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕರೆಯ ಮೇರೆಗೆ ಪುಣ್ಯ ಭೂಮಿಯ ಮಣ್ಣು ಶೇಖರಿಸಿ ದೇಶದ ವೀರ ಯೋಧರ ಸ್ಮರಣಾರ್ಥ ಅಮೃತ ವಾಟಿಕಾ ವನದಲ್ಲಿ (ನವ ದೆಹಲಿಯ ಕರ್ತವ್ಯ ಪಥ) ಸೇರಿಸುವ ಸಂಕಲ್ಪದ ಪುಣ್ಯ ದಿನ ಇದಾಗಿದೆ ಎಂದರು.

ಕೆಂಪೇಗೌಡರ ಪ್ರತಿಮೆ ಅನಾವರಣದ ಸಂದರ್ಭದಲ್ಲೂ ಇಡೀ ರಾಜ್ಯದ ಎಲ್ಲ ಪುಣ್ಯ ಸ್ಥಳಗಳಿಂದ ಮಣ್ಣು ತರಲಾಗಿತ್ತು. ಈಗ ದೇಶ ರಕ್ಷಿಸುವ ಸೈನಿಕರ ವನಕ್ಕೆ ಇಲ್ಲಿಂದ ಕೂಡ ಮಣ್ಣು ಕಳಿಸುವ ಕೆಲಸ ನಡೆಸಲಾಗುತ್ತಿದೆ. ಈ ಕಾರ್ಯ ಇಡೀ ರಾಜ್ಯದಲ್ಲಿ ಅಕ್ಟೋಬರ್ 30ರವರೆಗೆ ನಡೆಯಲಿದೆ ಎಂದರು.

ದೇಶದ ಸಮಸ್ತ ಜನತೆಗೆ ಶ್ರೀಕೃಷ್ಣ ಜಯಂತಿಯ ಶುಭಾಶಯ ಕೋರಿದ ಅವರು, ಭಗವದ್ಗೀತೆಗೆ ಪೂರಕ ಕೆಲಸ ಇಲ್ಲಿ ನಡೆಯುತ್ತಿದೆ. ದೇಶಪ್ರೇಮ ಇಮ್ಮಡಿಗೊಳಿಸುವ ಮತ್ತು ದೇಶಕ್ಕೆ ಗೌರವ ಕೊಡುವ ಕಾರ್ಯಕ್ರಮ ಇದಾಗಿದ್ದು, ಈ ಅದ್ಭುತ ಕಾರ್ಯಕ್ರಮದಲ್ಲಿ ಜನತೆ ಭಾಗವಹಿಸಬೇಕೆಂದು ವಿನಂತಿಸಿದರು.

ಸನಾತನ ಧರ್ಮವನ್ನು ಇಡೀ ವಿಶ್ವ ಒಪ್ಪಿದೆ: ಡಾ. ಸಿ.ಎನ್. ಅಶ್ವತ್ಥನಾರಾಯಣ

ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮಾತನಾಡಿ, ನಾಡಿನ ಉದ್ದಗಲಕ್ಕೂ ಮಣ್ಣು ಸಂಗ್ರಹ ಕಾರ್ಯಕ್ರಮ ನಡೆದಿದೆ. ದೇಶದ ಪುಣ್ಯ ಭೂಮಿಯ ಮಣ್ಣಿಗೆ ಗೌರವ ಸಲ್ಲಿಸುವ ಅಭಿಯಾನ ಹಾಗೂ ಭಾರತ ಒಂದು ಎಂಬ ಪರಿಕಲ್ಪನೆಯ ಕಾರ್ಯಕ್ರಮ ಇದು ಎಂದು ತಿಳಿಸಿದರು.

ಇದನ್ನೂ ಓದಿ | Karnataka Politics : ಸರ್ಕಾರಕ್ಕೆ ಬಡವರ ಕಾಳಜಿ ಇದ್ದರೆ ತಕ್ಷಣ ಬರ ತಾಲೂಕು ಘೋಷಿಸಲಿ: ಬಿ.ವೈ. ವಿಜಯೇಂದ್ರ

ಸನಾತನ ಧರ್ಮವನ್ನು ಇಡೀ ವಿಶ್ವ ಒಪ್ಪಿದೆ. ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಈ ಧರ್ಮ ಸರ್ವಶ್ರೇಷ್ಠ. ಇತ್ತೀಚೆಗೆ ಹುಟ್ಟಿದ ಧರ್ಮಗಳ ತಪ್ಪನ್ನು ತಪ್ಪೆಂದು ಹೇಳಲು ಇವರಿಗೆ ಧೈರ್ಯ ಇಲ್ಲ. ದುರಹಂಕಾರದ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.

ಸಂಸದ ಪಿ.ಸಿ.ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಎನ್.ರವಿಕುಮಾರ್, ನಗರ ಜಿಲ್ಲಾ ಅಧ್ಯಕ್ಷರು ಸೇರಿ ಹಲವರು ಉಪಸ್ಥಿತರಿದ್ದರು.

Exit mobile version