Site icon Vistara News

ಮದುವೆ ಸಮಾರಂಭದಲ್ಲಿ ಆದರ್ಶ ತಾಯಂದಿರಿಗೆ ಸನ್ಮಾನ; ಹೀಗೊಂದು ವಿಶೇಷ ಮದುವೆ

ಕೊಪ್ಪಳ: ಮದುವೆ ಎನ್ನುವುದು ಕುಟುಂಬದ ವೈಯಕ್ತಿಕ ಕಾರ್ಯಕ್ರಮ. ಸಾಕಷ್ಟು ಹಣ ಖರ್ಚು ಮಾಡಿ ಅದ್ಧೂರಿಯಾಗಿ ಸಂಭ್ರಮಿಸುವ ರೂಢಿ ಸಮಾಜದಲ್ಲಿ ಸಾಮಾನ್ಯ. ಆದರೆ, ಇಲ್ಲೊಂದು ಕುಟುಂಬ ಆದರ್ಶ ತಾಯಂದಿರಿಗೆ ಸನ್ಮಾನ ಮಾಡುವ ಮೂಲಕ ವಿವಾಹ ಸಮಾರಂಭವನ್ನು ಅರ್ಥಪೂರ್ಣಗೊಳಿಸಿದೆ.

ಮದುವೆ ಎಂದರೆ ಖಾಸಗಿಯಾಗಿರುವ ಒಂದು ಸುಂದರ ಕಾರ್ಯಕ್ರಮ. ಆದರೆ, ಈ ಸಂಭ್ರಮದಲ್ಲಿ ಸಾಮಾಜಿಕ ಜವಾಬ್ದಾರಿ ಮೆರೆದರೆ ಅದಕ್ಕೆ ಮತ್ತಷ್ಟು ಮೆರಗು ಬರುತ್ತದೆ. ಕೊಪ್ಪಳದಲ್ಲಿ ನಡೆದ ಒಂದು ಮದುವೆ ವಿಭಿನ್ನತೆಗೆ ಸಾಕ್ಷಿಯಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಶಿಕ್ಷಕರಾಗಿರುವ ಗುಮಗೇರಿ ಹನುಮಂತಯ್ಯ ಶೆಟ್ಟಿ ಎಂಬುವವರಿಗೆ ತಮ್ಮ ಪುತ್ರಿಯ ಮದುವೆ ಕೇವಲ ಸಂಭ್ರಮ, ಸಡಗರಕ್ಕೆ ಮಾತ್ರ ಸೀಮಿತವಾಗಿರದೇ ಅದರಿಂದಾಚೆಗೆ ಸ್ಮರಣೀಯವಾಗಿ ಮಾಡಬೇಕೆಂಬ ಹಂಬಲ ಇತ್ತು.

ಈ ಕಾರಣಕ್ಕಾಗಿ ತಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡರು. ತಂದೆಯ ಸ್ಥಾನದಲ್ಲಿ ನಿಂತು ಕುಟುಂಬದ ಜವಾಬ್ದಾರಿಯನ್ನು ಹೊತ್ತ 12 ತಾಯಂದಿರನ್ನು ಗುರತಿಸಿ ಅವರಿಗ ಗೌರವ ಸಲ್ಲಿಸುವ ಕಾರ್ಯಕ್ರಮ ಅದಾಗಿತ್ತು. ಈ ಕಾರ್ಯಕ್ರಮಕ್ಕೆ ʼಆದರ್ಶ ತಾಯಿʼ ಎಂದು ಹೆಸರು ಕೊಟ್ಟರು.

೧೨ ತಾಯಂದಿರಿಗೆ ಆರ್ಥಿಕ ನೆರವು

ಪತಿಯ ಅಕಾಲಿಕ ಮರಣದ ಬಳಿಕ ಮಕ್ಕಳ ಲಾಲನೆ-ಪಾಲನೆ, ಶೈಕ್ಷಣಿಕ ಬದುಕು ಸೇರಿದಂತೆ ಎಲ್ಲ ಹಂತಗಳಲ್ಲೂ ತಂದೆಯ ಜವಾಬ್ದಾರಿಯನ್ನು ನಿಭಾಯಿಸಿ ಯಶಸ್ವಿಯಾದ 12 ತಾಯಂದಿರನ್ನು ಹನುಮಂತಯ್ಯ ಶೆಟ್ಟಿ ಅವರು ಗುರುತಿಸಿದರು. ಬಳಿಕ ಅವರನ್ನು ಮದುವೆ ಸಮಾರಂಭಕ್ಕೆ ಆಮಂತ್ರಿಸಿ, ಸನ್ಮಾನಿಸಿ, ಆರ್ಥಿಕ ನೆರವು ನೀಡಿದ್ದಲ್ಲದೆ, ಪ್ರಮಾಣಪತ್ರ ನೀಡಿ ಗೌರವಿಸಿದರು. ಈ ಶ್ರೇಷ್ಠ ಕಾರ್ಯದಲ್ಲಿ ಹನುಮಂತ ಶೆಟ್ಟಿಯವರ ಸಹೋದ್ಯೋಗಿಗಳು ಸಹ ಭಾಗಿಯಾಗಿದರು.

ಗಂಗಾವತಿ ನಗರದ ಹೊರವಲಯದಲ್ಲಿರುವ ಕಂಪ್ಲಿ ರಸ್ತೆಯ ದೇವಿನಗರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗುಮಗೇರಿ ಹನುಮಂತಯ್ಯ ಶೆಟ್ಟಿ ಅವರು ತಮ್ಮ ಮಗಳ ಮದುವೆ ಕಾರ್ಯಕ್ರಮವನ್ನು ಬುಧವಾರ (ಜುಲೈ ೬) ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರು. ಮದುವೆ ಸಂಭ್ರಮದಲ್ಲೂ ಸಾಮಾಜಿಕ ಕಳಕಳಿಯನ್ನು ತೋರಿದ ಈ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ.

ಇದನ್ನೂ ಓದಿ: ಮದುವೆಯಲ್ಲಿ ವಧುವಿನ ಕಾಲಿಗೆರಗಿದ ವರ; ಸಮಾನತೆಯತ್ತ ಇನ್ನೊಂದು ಹೆಜ್ಜೆ!

Exit mobile version