Site icon Vistara News

ಅಗಲಿದ ಮುದ್ದು ಮಗಳಿಗೆ ದೇವಸ್ಥಾನ, ಅಮ್ಮ-ಅಪ್ಪನಿಗಾಗಿ ಶಾಂತಿಧಾಮ!

ದೇವಾಲಯ

| ಶಶಿಧರ ಮೇಟಿ, ಬಳ್ಳಾರಿ
ಪಾಲಕರ ವಾತ್ಸಲ್ಯ ಎಂದರೆ ಹೀಗೇ. ಬಳ್ಳಾರಿಯಲ್ಲೊಬ್ಬರು ಚಿಕ್ಕವಯಸ್ಸಿನಲ್ಲಿಯೇ ಮೃತಪಟ್ಟಿರುವ ತಮ್ಮ ಮಗಳ ನೆನಪು ಸದಾ ಇರಬೇಕೆಂದು ದೇವಾಲಯವನ್ನು ಕಟ್ಟಿಸುತ್ತಿದ್ದಾರೆ. ಇಲ್ಲಿ ತಮ್ಮ ತಂದೆ-ತಾಯಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಕುಟುಂಬದ ದೇವಾಲಯದ ಜತೆಗೆ ಶಾಂತಿಧಾಮ ಮಾಡಲು ಹೊರಟಿದ್ದಾರೆ.

ಬಳ್ಳಾರಿ ನಗರ ನಿವಾಸಿ ನಾಗೇಂದ್ರಕುಮಾರ್ ಅವರ 10 ವರ್ಷದ ಮಗಳು ಅಕ್ಷರ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟಿದ್ದಳು. ಇದು ಈ ಕುಟುಂಬವನ್ನು ದುಃಖದ ಮಡುವಿಗೆ ತಳ್ಳಿತ್ತು. ಚಿಕ್ಕವಯಸ್ಸಿನಲ್ಲಿ ತಮ್ಮನ್ನಗಲಿದ ಮಗಳನ್ನು ಮರೆಯಲಾಗದೆ, ನೆನಪಿಗಾಗಿ ಈಗ ತಂದೆ ನಾಗೇಂದ್ರ ಕುಮಾರ್ ದೇವಾಲಯವೊಂದನ್ನು ಕಟ್ಟಿಸುತ್ತಿದ್ದಾರೆ.

ನಾಗೇಂದ್ರ ಕುಮಾರ್‌ ದಂಪತಿ

25 ಸೆಂಟ್‌ ಜಾಗದಲ್ಲಿ ದೇವಾಲಯ ನಿರ್ಮಾಣ
ಬಳ್ಳಾರಿಯಿಂದ ತಾಳೂರಿಗೆ ಹೋಗುವ ರಸ್ತೆಯಲ್ಲಿ ನಗರದಿಂದ 6 ಕಿ.ಮೀ ದೂರದ ಶ್ರೀಧರಗಡ್ಡೆ ಸಮೀಪದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡು 25 ಸೆಂಟ್‌ (0.25 ಎಕರೆ) ಜಾಗದಲ್ಲಿ ಮಗಳ ಸಮಾಧಿ ಇರುವ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. 70×45 ಪ್ರದೇಶದಲ್ಲಿ ಮಗಳ ಸಮಾಧಿಯನ್ನು ಕೇಂದ್ರೀಕರಿಸಿ ದೇವಾಲಯ ಮತ್ತು ಸುತ್ತಲು ಉದ್ಯಾನವನ ನಿರ್ಮಾಣವಾಗುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ ನಿರ್ಮಾಣ ಕಾರ್ಯ ಶರುವಾಗಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣವಾಗಲಿದೆ. ದೇವಾಲಯ ನಿರ್ಮಾಣವಾಗುವವರೆಗೆ ಬೇರೆ ಕೆಲಸ ಮಾಡುವುದಿಲ್ಲವೆಂದು ಅಕ್ಷರಾಳ ತಂದೆ ನಾಗೇಂದ್ರಕುಮಾರ್ ತಾವೇ ಮುಂದೆ ನಿಂತು‌ ದೇವಾಲಯ ಕಟ್ಟಿಸುತ್ತಿದ್ದಾರೆ.

ಇದನ್ನೂ ಓದಿ | ಕೇರಳದ ಈ ದೇವಾಲಯದಲ್ಲಿ ಸಂವಿಧಾನವೇ ದೇವರು!

ಮಗಳ ನೆನಪಿನ ಅಂಗಳ
ಮಗಳ ಸಮಾಧಿಯನ್ನು ನಿರ್ಮಿಸಿ, ಮಗಳ ಭಾವಚಿತ್ರವನ್ನು ಕಲ್ಲಿನಲ್ಲಿ ಕೆತ್ತಿಸಲಾಗುತ್ತಿದೆ. ಇನ್ನು ಮಗಳ 8ನೇ ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಟ್ಟಿದ್ದ ಆಕ್ಸಿಜನ್ ಪ್ಲಾಂಟ್‌ ಅನ್ನು ಮಗಳ ಸಮಾಧಿ ಪಕ್ಕದಲ್ಲಿ ಇಡುವ ವ್ಯವಸ್ಥೆ ಮಾಡಲಾಗಿದೆ. ಮಗಳ ಎರಡು ಪುಟ್ಟ ಸೈಕಲ್ ಸೇರಿದಂತೆ ಅವಳ ನೆನಪುಗಳು ತಮ್ಮ ಮನದಲ್ಲಿ ಮಾಸದಂತೆ ಆಕೆಯ ಬಳಕೆಯ ಪ್ರಮುಖ ವಸ್ತುಗಳನ್ನು ಅಲ್ಲಿಡಲು ವ್ಯವಸ್ಥೆಯನ್ನು ಮಾಡುತ್ತಿದ್ದಾರೆ‌.

ನಾಗೇಂದ್ರಕುಮಾರ್ ಅವರ ತಂದೆ ಬಿ.ಪಕ್ಕಿರಪ್ಪ, ತಾಯಿ ಬಿ.ಈರಮ್ಮ

ನಮ್ಮ ಕುಟುಂಬದ ದೇವಾಲಯ!
“ಇದು ಕೇವಲ ಮಗಳ ಸಮಾಧಿಯಲ್ಲ, ನಮ್ಮ ಕುಟುಂಬದ ದೇವಾಲಯ ಆಗಬೇಕೆಂದು ಕಳೆದ ವರ್ಷ ಮೃತಪಟ್ಟಿರುವ ತಂದೆ (ಅಕ್ಷರಳ ತಾತ) ಬಿ.ಪಕ್ಕಿರಪ್ಪ, ತಾಯಿ ಬಿ.ಈರಮ್ಮ ಅವರ ಮೂರ್ತಿಯನ್ನು ಸಹ ಪ್ರತಿಷ್ಠಾಪಿಸುತ್ತಿದ್ದೇನೆ. ಮನಸ್ಸಿಗೆ ಬೇಸರವಾದರೆ, ಮಗಳು, ತಂದೆ-ತಾಯಿ ನೆನಪಾದರೆ ಇಲ್ಲಿಗೆ ಬರುತ್ತೇವೆ. ಇಲ್ಲಿ ನಮಗೆ ಸಮಾಧಾನ ಸಿಗಲಿದೆ. ಈ ನಿಟ್ಟಿನಲ್ಲಿ ದೇವಾಲಯ ಮತ್ತು ಶಾಂತಿಧಾಮ ನಿರ್ಮಿಸುತ್ತಿದ್ದೇನೆ” ಎಂದು ನಾಗೇಂದ್ರ ಕುಮಾರ್‌ ಹೇಳಿಕೊಂಡಿದ್ದಾರೆ. ಮಗಳ ಸಮಾಧಿಗೆ‌ ದೇವಾಲಯ ನಿರ್ಮಿಸಿದರೆ ಮಗಳು ನಿರಂತರವಾಗಿ ನಮ್ಮ ಜತೆಗೆ ಇದ್ದಂತೆ ಎಂಬ ಕಲ್ಪನೆಯಲ್ಲಿ ಸಾಗಿರುವ ನಾಗೇಂದ್ರ ಮತ್ತು ಲಲಿತಾ ದಂಪತಿ ಮಗಳ ಪ್ರೀತಿಯ ವಿಚಾರದಲ್ಲಿ ವಿಶೇಷವಾಗಿ ಕಾಣುತ್ತಾರೆ.

“ನನ್ನ ಮಗಳು ಅಕ್ಷರ ಕಳೆದ ಡಿಸೆಂಬರ್‌ನಲ್ಲಿ ತೀರಿಕೊಂಡಿದ್ದಾಳೆ. ಆಕೆಯ ನೆನಪು ಮರೆಯಲಾಗದೆ 25 ಸೆಂಟ್‌ ಪ್ರದೇಶದಲ್ಲಿ ಸಮಾಧಿ ಕಟ್ಟಿಸಲಾಗುತ್ತಿದೆ. ಇದಕ್ಕಾಗಿ ಅಂದಾಜು 15-20 ಲಕ್ಷ ರೂ. ವೆಚ್ಚವಾಗುತ್ತದೆ‌. ಇದು ನಮ್ಮ ಮನೆಗೆ ದೇವಾಲಯ ಇದ್ದಂತೆ. ಕಳೆದ ವರ್ಷ ಮೃತಪಟ್ಟಿರುವ ನಮ್ಮ ತಂದೆ-ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ” ಎಂದು ನಾಗೇಂದ್ರಕುಮಾರ್ ವಿಸ್ತಾರ ನ್ಯೂಸ್‌ಗೆ ಹೇಳಿದ್ದಾರೆ.

ಇದನ್ನೂ ಓದಿ | Hit and Run Case | ಹುಲಗಿಯಲ್ಲಿ ಮಲಗಿದ್ದವರ ಮೇಲೆ ಮಿನಿ ಲಾರಿ ಹರಿಸಿದ್ದ ಚಾಲಕನ ಸೆರೆ

Exit mobile version