| ಶ್ರೀಧರ್ ಮುಂಡರಗಿ, ಧಾರವಾಡ
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrit Mahotsav) ಸಂಭ್ರಮಾಣೆಯಲ್ಲಿದೆ. ಸ್ವಾತಂತ್ರ್ಯೋತ್ಸವದ ವೇಳೆ ಧಾರವಾಡ ಜಿಲ್ಲೆಯನ್ನು ಸಹ ನೆನಪಿಸಿಕೊಳ್ಳಲೇ ಬೇಕು. ಏಕೆಂದರೆ ದೆಹಲಿಯ ಕೆಂಪು ಕೋಟೆ ಮೇಲೆ ಸ್ವಚ್ಚಂದವಾಗಿ ಹಾರಾಡುವ ರಾಷ್ಟ್ರ ಧ್ವಜ ದೇಶದ ಹೆಮ್ಮೆಯ ಸಂಕೇತವಾಗಿದ್ದು, ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ತಯಾರಾಗುವುದು ಜಿಲ್ಲೆಯ ಗರಗದ ಖಾದಿ ಕೇಂದ್ರದಲ್ಲಿ ಎನ್ನುವುದು ವಿಶೇಷ. ಇಲ್ಲಿ ತಯಾರಾಗುವ ಧ್ವಜಗಳಿಗೆ ದೇಶಾದ್ಯಂತ ಅಪಾರ ಬೇಡಿಕೆಯಿದೆ.
ಆಂಗ್ಲರ ಕಪಿ ಮುಷ್ಟಿಯಿಂದ ಅದೆಷ್ಟೋ ಹೋರಾಟಗಾರರ ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಧಾರವಾಡದ ಆಗಿನ ಕಾಲದ ಹಲವು ಜಿಲ್ಲೆಗಳನ್ನೊಳಗೊಂಡ ಒಂದು ಮುಖ್ಯ ಕಚೇರಿ ಆಗಿತ್ತು. ಇಲ್ಲಿದಂಲೇ ಪತ್ರ ವ್ಯವಹಾರವನ್ನು ಬ್ರಿಟಿಷ್ ಅಧಿಕಾರಿಗಳು ಮಾಡುತ್ತಿದ್ದರು. ಬ್ರಿಟಿಷರ ದಬ್ಬಾಳಿಕೆಯನ್ನು ಬಹು ಹತ್ತಿರದಿಂದ ನೋಡಿದ್ದ ಧಾರವಾಡದ ಜನರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಏನಾದರೂ ಕೊಡುಗೆ ನೀಡಬೇಕು ಎನ್ನುವ ಕಾತರದಲ್ಲಿದ್ದರು. ಆಗ ಆರಂಭವಾಗಿದ್ದೇ ಗರಗ ಗ್ರಾಮದಲ್ಲಿ ಧ್ವಜ ತಯಾರಿಕಾ ಕೇಂದ್ರ.
ಇದನ್ನೂ ಓದಿ | ವಿಸ್ತಾರ Explainer | ನಮ್ಮ ರಾಷ್ಟ್ರಧ್ವಜ ಆರೋಹಿಸುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ
ಮನೆ ಮನೆಯಲ್ಲೂ ಚರಕ ಹಿಡಿದು ದೇಶಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಭಾವನೆಯಲ್ಲಿದ್ದ ಗರಗದ ಗ್ರಾಮಸ್ಥರು ಇಡೀ ದೇಶಕ್ಕೆ ಧ್ವಜಗಳನ್ನು ನೇಯುವ ಮೂಲಕ ವಿಶೇಷ ಪ್ರಯತ್ನಕ್ಕೆ ಮುಂದಾದರು. ಅದರ ಫಲವಾಗಿಯೇ ಗರಗದಲ್ಲಿ ತಯಾರಾದ ಧ್ವಜ ದೆಹಲಿಯ ಕೆಂಪು ಕೋಟೆ ಮೇಲೆ ಸ್ವಚ್ಚಂದವಾಗಿ ಹಾರಾಡುವಂತಾಗಿದೆ.
ಇಲ್ಲಿನ ಖಾದಿ ಕೇಂದ್ರದಲ್ಲಿ ನೇಯ್ದ ಬಟ್ಟೆಯನ್ನು ರಾಷ್ಟ್ರ ಧ್ವಜಕ್ಕಾಗಿ ಮಾತ್ರ ಬಳಕೆ ಮಾಡಲಾಗುತ್ತದೆ. ಈ ವಿಶಿಷ್ಟ ಬಟ್ಟೆಗೆ ಎಲ್ಲಿಲ್ಲದ ಬೇಡಿಕೆ ಸಹ ಇದ್ದು, ರಾಷ್ಟ್ರದೆಲ್ಲೆಡೆ ಹಾರಾಡುವ ರಾಷ್ಟ್ರ ಧ್ವಜ ಸಹ ಇಲ್ಲಿಂದಲೇ ತಯಾರಾಗಿ ಮಾರಾಟವಾಗುತ್ತದೆ.
ಗರಗದ ಧ್ವಜ ತಯಾರಿಕಾ ಕೇಂದ್ರವು 1956ರಲ್ಲಿ ಆರಂಭವಾಯಿತು. ಆರಂಭದಲ್ಲಿ ಈ ಕೇಂದ್ರದಲ್ಲಿ ಖಾದಿ ಬಟ್ಟೆಗಳನ್ನು ನೇಯ್ಗೆ ಮಾಡಲಾಗುತ್ತಿತ್ತು. ಇಲ್ಲಿನ ಬಟ್ಟೆಯ ಗುಣಮಟ್ಟ ಅರಿತು ಇದೇ ಖಾದಿ ಕೇಂದ್ರಕ್ಕೆ ರಾಷ್ಟ್ರ ಧ್ವಜದ ಬಟ್ಟೆ ನಿರ್ಮಾಣಕ್ಕೆ ಖಾದಿ ಆಯೋಗ ಬಟ್ಟೆ ತಯಾರಿಸುವಂತೆ ಸೂಚನೆ ನೀಡುತ್ತದೆ. ಬಳಿಕ ಕೇಂದ್ರಕ್ಕೆ ಬೇಕಾದ ರಾಷ್ಟ್ರ ಧ್ವಜದ ಗುಣಮಟ್ಟದ ಬಟ್ಟೆಯ ತಯಾರಿಸಿ ಕೊಡಲು 1974ರಲ್ಲಿ ಹೇಳಲಾಯಿತು. ಅಂದಿನಿಂದ ಇಂದಿನವರೆಗೆ ರಾಷ್ಟ್ರ ಧ್ವಜದ ಬಟ್ಟೆ ನೇಯ್ದು ಇಡೀ ದೇಶಕ್ಕೆ ರಾಷ್ಟ್ರ ಧ್ವಜ ಹಾರಾಡುವಂತೆ ಮಾಡಿದೆ.
ಸ್ವಾತಂತ್ರ್ಯೋತ್ಸವ, ಗಾಂಧಿ ಜಯಂತಿ, ಗಣರಾಜ್ಯೋತ್ಸವ ಸೇರಿ ರಾಷ್ಟ್ರೀಯ ಹಬ್ಬಗಳಂದು ದೆಹಲಿ ಕೆಂಪು ಕೋಟೆ ಹಾಗೂ ರಾಷ್ಟ್ರಾದ್ಯಂತ ಹಾರಾಡುವ ರಾಷ್ಟ್ರ ಧ್ವಜಗಳು ಗರಗ ಗ್ರಾಮದ್ದು. ಗರಗ ಖಾದಿ ಕೇಂದ್ರಲ್ಲಿ 300ಕ್ಕೂ ಹೆಚ್ಚು ಜನ ಮಹಿಳೆಯರು ನಿತ್ಯ ಕೆಲಸ ಮಾಡುತ್ತಿದ್ದಾರೆ. ಗರಗ, ತಡಕೋಡ ಸೇರಿ ಗರಗ ಖಾದಿ ಕೇಂದ್ರ ಸುತ್ತಲಿನ ಗ್ರಾಮದಲ್ಲಿ ಮಹಿಳೆಯರು ನೂಲನ್ನು ನೇಯ್ದು ಕೇಂದ್ರಕ್ಕೆ ಕಳುಹಿಸುತ್ತಾರೆ. ನೂಲನ್ನು ತಂದು ಗಂಜಿ ಹಾಕಿದ ಬಳಿಕ ಬಟ್ಟೆ ನೇಯಲಾಗುತ್ತದೆ. ನೇಯ್ದ ಬಟ್ಟೆಯನ್ನು ಮುಂಬೈಗೆ ಕಳುಹಿಸಲಾಗುತ್ತದೆ. ಅಲ್ಲಿ ಬಟ್ಟೆಗೆ ಬಣ್ಣ ಹಾಕುವುದು ಹಾಗೂ ಅಶೋಕ ಚಕ್ರವನ್ನು ಮುದ್ರಿಸಿ, ಬೇಡಿಕೆಗೆ ಅನುಗುಣವಾಗಿ ಅಳತೆಯಂತೆ ಧ್ವಜವನ್ನು ತಯಾರಿಸಲಾಗುತ್ತಿದೆ. ಹೀಗೆ ತಯಾರಿಸಿದ ರಾಷ್ಟ್ರ ಧ್ವಜವನ್ನು ಧಾರವಾಡ ಖಾದಿ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ. ಬಳಿಕ ದೇಶದ ನಾನಾ ಭಾಗಗಳಿಗೆ ರಾಷ್ಟ್ರ ಧ್ವಜ ಮಾರಾಟ ಮಾಡಲಾಗುತ್ತದೆ.
ಹಗಲು-ರಾತ್ರಿ ನಿರಂತರ ನೇಯ್ಗೆ
ಪ್ರತಿವರ್ಷ ಈ ಕೇಂದ್ರದಲ್ಲಿ 70 ರಿಂದ 80 ಲಕ್ಷ ರೂಪಾಯಿ ಮೌಲ್ಯದ ಧ್ವಜಗಳನ್ನು ತಯಾರಿಕೆ ಮಾಡಲಾಗುತ್ತಿದೆ. ದೇಶದ ಕೆಂಪು ಕೋಟೆ ಸೇರಿ ಎಲ್ಲೆಡೆ ಹಾರಾಡುವ ರಾಷ್ಟ್ರ ಧ್ವಜಕ್ಕೆ ಬಳಸಲ್ಪಡುವ ಬಟ್ಟೆಯು ನಮ್ಮ ಖಾದಿ ಕೇಂದ್ರದಲ್ಲಿಯೇ ತಯಾರಾಗಿರುವುದು. ಈ ಬಟ್ಟೆ ತಯಾರಿಕೆಯೂ ಅಷ್ಟೇ ನಿಪುಣತೆಯಿಂದ ಕೂಡಿದೆ. ಎಲ್ಲವನ್ನೂ ಪರೀಕ್ಷಿಸಿಯೇ ಗರಗ ಕೇಂದ್ರಕ್ಕೆ ಧ್ವಜ ನಿರ್ಮಾಣಕ್ಕಾಗಿ ಪರವಾನಗಿ ಸಿಕ್ಕಿದೆ. ಇದೀಗ ಅಮೃತ ಮಹೋತ್ಸವ ಆಚರಿಸುತ್ತಿರುವ ಭಾರತಕ್ಕೆ ಎಲ್ಲ ಗ್ರಾಮಗಳ ಮೇಲೂ ಧ್ವಜ ಹಾರಿಸುವ ವಿಚಾರ ಮಾಡಿದ್ದು, ಅದರಂತೆ ಗರಗ ಗ್ರಾಮದಲ್ಲಿ ಧ್ವಜ ನೇಯುವ ಕಾಯಕ ಹಗಲು ರಾತ್ರಿ ನಿರಂತರವಾಗಿ ನಡೆಯುತ್ತಿದೆ.
ಇದನ್ನೂ ಓದಿ | Amrit Mahotsav | ಬ್ರಿಟಿಷರ ನಿದ್ದೆಗೆಡಿಸಿದ್ದ ಮೈಲಾರ ಮಹಾದೇವಪ್ಪ; ಹಾವೇರಿಯಲ್ಲಿದೆ ವೀರಸೌಧ!