Site icon Vistara News

ನಿರ್ವಹಣೆ ಕೊರತೆಯಿಂದ ಮುಳುಗಿದ ಲಾಂಚ್;‌ 4 ತಿಂಗಳಿಂದ ತ್ರಿಶಂಕು ಸ್ಥಿತಿಯಲ್ಲಿ ಗ್ರಾಮಸ್ಥರು

ಲಾಂಚ್

ಶಿವಮೊಗ್ಗ: ನಿರ್ವಹಣೆ ಕೊರತೆಯಿಂದ ಸಾಗರ ತಾಲೂಕಿನ ಕೋಗಾರು – ಸಿಗ್ಗಲು ಕಡವು(ಲಾಂಚ್‌), ಶರಾವತಿ ಹಿನ್ನೀರಿನಲ್ಲಿ ಮುಳುಗಿರುವುದರಿಂದ ಇಲ್ಲಿನ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಎಡದಂಡೆಯ ಕರೂರು ಹೋಬಳಿಯ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗಾರು – ಸಿಗ್ಗಲು ಲಾಂಚ್‌ ಕಳೆದ ನಾಲ್ಕು ತಿಂಗಳ ಹಿಂದೆ ಶರಾವತಿ ಹಿನ್ನೀರಿನಲ್ಲಿ ಮುಳುಗಿತ್ತು. ಚನ್ನಗೊಂಡ ಗ್ರಾಮ ಪಂಚಾಯಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸಿಗ್ಗಲು, ಚಂಬಳಿ ಮುಂತಾದ ಗ್ರಾಮಗಳಿಗೆ ಶರಾವತಿ ಹಿನ್ನೀರಿನ ಮಾರ್ಗದಲ್ಲಿ ಸೇವೆ ಸಲ್ಲಿಸಲು ನೀಡಿದ್ದ ಲಾಂಚ್ ಮುಳುಗಿ ಹೋಗಿ ನಾಲ್ಕು ತಿಂಗಳು ಕಳೆದಿದ್ದರೂ ಅದನ್ನು ದುರಸ್ತಿ ಪಡಿಸುವ ಕೆಲಸ ನಡೆದಿಲ್ಲ ಎಂದ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | ಭೂತಾನ್‌ನಿಂದ ಅಡಕೆ ಆಮದು; ಆತಂಕ ಬೇಡ, ಪ್ರತಿಕೂಲ ಪರಿಣಾಮವಾಗದು ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ಬ್ಯಾಂಕ್, ಪಡಿತರ, ವ್ಯಾಪಾರ ವಹಿವಾಟು ಸೇವೆಗೆ ನದಿ ದಾಟಿ ಹೋಗಲು ಲಾಂಚ್ ನೀಡಿ ಎಂದು ಈ ಭಾಗದ ಗ್ರಾಮಸ್ಥರು 2018 ಚುನಾವಣಾ ಬಹಿಷ್ಕಾರ ನಿರ್ಧಾರ ಘೋಷಣೆ ಮಾಡಿದ್ದರು. ಆದ ಸ್ಥಳಕ್ಕೆ ಬಂದ ಉಪ ವಿಭಾಗಾಧಿಕಾರಿಗಳು ಭರವಸೆ ನೀಡಿ ಮನವೊಲಿಸಿದ್ದರು. ಸಾಗರ ಶಾಸಕರ ಹರತಾಳು ಹಾಲಪ್ಪನವರ ಗಮನಕ್ಕೆ ತಂದು ಮನವಿ ಮಾಡಿಕೊಂಡಿದ್ದರು. ಸ್ವತಃ ಶಾಸಕರು ಇಚ್ಛಾ ಶಕ್ತಿ ತೋರಿಸಿ ಒಳನಾಡು ಜಲಸಾರಿಗೆ ಇಲಾಖೆ ಹಸಿರುಮಕ್ಕಿ ಮಾರ್ಗದ ಹಳೆ ಲಾಂಚ್ ಇಲ್ಲಿಗೆ ವರ್ಗಾಯಿಸಿ ಚನ್ನಗೊಂಡ ಗ್ರಾಮ ಪಂಚಾಯಿತಿ ಉಸ್ತುವಾರಿ ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿ ಕಳೆದ ಬೇಸಿಗೆಯಲ್ಲಿ ಉದ್ಘಾಟಿಸಿದ್ದರು. ಆದರೆ ನಿರ್ವಹಣೆ ಕೊರತೆಯಿಂದ ಇದು ಮುಳುಗಿತ್ತು.

ಸದ್ಯ ನಾಲ್ಕು ತಿಂಗಳಿಂದ ಸೇವೆ ನೀಡದ ಲಾಂಚ್ ಸಮರ್ಪಕ ನಿರ್ವಹಣೆ ಇಲ್ಲದೇ ಸೇವೆ ಸ್ಥಗಿತಗೊಳಿಸಿ ಮಳೆಗಾಲದ ರಭಸಕ್ಕೆ ಶಿಥಿಲವಾಗಿದೆ. ಒಳನಾಡು ಜಲಸಾರಿಗೆ ಇಲಾಖೆ ಒಡೆತನದ ಈ ಲಾಂಚ್ ಮೂಲ ಬೆಲೆ 25 ಲಕ್ಷ ರೂ.ಗಳಿಗೂ ಹೆಚ್ಚು ಇದ್ದು, ಪಂಚಾಯತ್ ರಾಜ್ ಇಲಾಖೆಗೆ ಅದನ್ನು ಹಸ್ತಾಂತರ ಮಾಡಿ ಇಲಾಖೆ ತನ್ನ ಜವಾಬ್ದಾರಿ ಕಳಚಿಕೊಂಡಿದ್ದು, ಗ್ರಾಮ ಪಂಚಾಯಿತಿ ಚನ್ನಗೊಂಡ ನಿರ್ವಹಣೆಯಲ್ಲಿ ವಿಫಲಗೊಂಡು ಸರ್ಕಾರಿ ಹಣ ಹೊಳೆಯಲ್ಲಿ ಮುಳುಗಿಸಿದರು ಎನ್ನುವ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ.

ಜನರ ಸೇವೆಗೆ ಸಿಗದ ಈ ಕಡವು(ಲಾಂಚ್) ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದು, ಸಂಚಾರಕ್ಕೆ ಅನುಕೂಲವಾಗಲು ಲಾಂಚ್‌ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Call Kappi wala | ಒಂದೇ ಕಾಫಿ ಫ್ಲೇವರ್‌ ಕುಡಿದು ಬೋರ್‌ ಆಗಿದ್ಯಾ? ಮಾರುಕಟ್ಟೆಗೆ ಬಂದಿವೆ ಹಲವು ಫ್ಲೇವರ್ಡ್‌ ಕಾಫಿ!

Exit mobile version