ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅವಹೇಳನ ಮಾಡಿ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ (Instagram Post) ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದ್ದಾರೆ. ಮೈಸೂರು ತಿ.ನರಸೀಪುರ ತಾಲೂಕಿನ ಮಾವಿನಹಳ್ಳಿ ಗ್ರಾಮದ ರಂಜನೀಶ್ ಬಂಧನಕ್ಕೊಳಗಾಗಿದ್ದ ಯುವಕ. ಇತ್ತೀಚೆಗೆ ತಿ.ನರಸೀಪುರದಲ್ಲಿ ಹತ್ಯೆಗೀಡಾಗಿದ್ದ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಬಗ್ಗೆ ಉಲ್ಲೇಖಿಸಿ, ಸಿಎಂ ಸಿದ್ದರಾಮಯ್ಯನವರನ್ನು (CM Siddaramaiah) ವ್ಯಂಗ್ಯ ಮಾಡಿ ರಂಜನೀಶ್ ಪೋಸ್ಟ್ ಹಾಕಿದ್ದ.
ಸಿದ್ರಾಮುಲ್ಲಾ ಖಾನ್ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆಯಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಲೀಸಾಗಿ ಹಿಂದುಗಳ ಕೊಲೆಯಾಗುತ್ತಿದೆ ಎಂಬುದು ರಂಜನೀಶ್ ಪೋಸ್ಟ್ ಆಗಿತ್ತು. ಈ ಪೋಸ್ಟ್ ನೋಡಿದ್ದ ಮೆಲ್ಲಹಳ್ಳಿ ರವಿ ಎಂಬುವರು ಸೈಬರ್ ಕ್ರೈಮ್ ಠಾಣೆಗೆ ದೂರು ಕೊಟ್ಟಿದ್ದರು. ಇದರ ಅನ್ವಯ ಪೊಲೀಸರು ರಂಜನೀಶ್ನನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆ 504,505ನೇ (1)ಬಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ರಂಜನೀಶ್ನನ್ನು ಜಾಮೀನು ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಪೋಸ್ಟ್, ಬಿಜೆಪಿಯ ಮಾಳವೀಯ, ನಡ್ಡಾ ವಿರುದ್ದ ದೂರು ದಾಖಲು, ಪ್ರಿಯಾಂಕ್ ಹೇಳಿದ್ದೇನು?
ತಿ.ನರಸೀಪುರದಲ್ಲಿ ಇತ್ತೀಚೆಗೆ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ ಹತ್ಯೆಯಾಗಿದೆ. ಜುಲೈ 8ರಂದು ತಿ. ನರಸೀಪುರದಲ್ಲಿ ನಡೆದ ಹನುಮ ಜಯಂತಿ ಆಚರಣೆಯ ವೇಳೆ ಸಣ್ಣ ಗಲಾಟೆಯಾಗಿತ್ತು. ಮರುದಿನ ಬೆಳಗ್ಗೆ ವೇಣುಗೋಪಾಲ ನಾಯಕನನ್ನು ರಾಜಿಗೆ ಕರೆದು, ಬಾಟಲಿಯಲ್ಲಿ ಹೊಡೆದು ಹತ್ಯೆ ಮಾಡಲಾಗಿತ್ತು. ಈ ಕೇಸ್ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವೇಣುಗೋಪಾಲ ನಾಯಕ ಹತ್ಯೆಯಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಕೈವಾಡ ಇದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ನೇರವಾಗಿ ಆರೋಪ ಮಾಡಿದ್ದಾರೆ. ಸದ್ಯ ಕೊಲೆಗೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.