Site icon Vistara News

ಹೆಣ್ಣು ಗೊತ್ತು ಮಾಡಿಸುತ್ತೇನೆಂದವನ ಸೊಸೆ ಜತೆ ಎಸ್ಕೇಪ್‌; ವಾಪಸ್‌ ಕರೆದೊಯ್ದ ತ.ನಾಡು ಪೊಲೀಸರು

ಪ್ರೇಮಾಂಕುರ

ಕಾರವಾರ: ಪರಸ್ಪರ ಪ್ರೀತಿಸಿ ಮನೆ ತೊರೆದು ತಮಿಳುನಾಡಿನಿಂದ ಕಾರವಾರಕ್ಕೆ ಬಂದಿದ್ದ ವಿವಾಹಿತೆ ಹಾಗೂ ಎಂಜಿನಿಯರ್‌ ಪದವೀಧರ ಯುವಕನ ಮಿಸ್ಸಿಂಗ್ ಜಾಡು ಹಿಡಿದು ಗಡಿ ದಾಟಿ ಬಂದ ಪೊಲೀಸರು ಈಗ ಈ ಜೋಡಿಯನ್ನು ವಾಪಸ್ ಕರೆದೊಯ್ದಿದ್ದಾರೆ.

ತಮಿಳುನಾಡಿನ ಚೆನ್ನೈ ಮೂಲದವನಾದ ಬೀರ್ ಮೊಹಿದ್ದೀನ್ ಎಂಬ ಯುವಕ ಎಂಜಿನಿಯರಿಂಗ್ ಪದವೀಧರನಾಗಿದ್ದು, ಉತ್ತಮ ಸಂಬಳ ಬರುವ ಕೆಲಸದಲ್ಲಿದ್ದಿದ್ದರಿಂದ ಮದುವೆಗಾಗಿ ಯುವತಿ ಹುಡುಕಾಟದಲ್ಲಿದ್ದ. ಇದೇ ವೇಳೆ ದೂರದ ಸಂಬಂಧಿ ಅಬ್ದುಲ್ ಖಾದರ್ ಎಂಬಾತ ಈತನಿಗೆ ಯುವತಿ ಹುಡುಕಿಕೊಡುವುದಾಗಿ ಹೇಳಿದ್ದರಿಂದ ಅವರ ಮನೆಗೆ ಬಂದು ಹೋಗುತ್ತಿದ್ದ. ಇದೇ ಅಬ್ದುಲ್‌ನ ಸೊಸೆ 24 ವರ್ಷದ ಆಯಿಷಾ ಹಾಗೂ ಯುವಕ ಬೀರ್ ಮೊಹಿದ್ದೀನ್‌ಗೆ ಬಾಲ್ಯದಿಂದಲೂ ಪರಿಚಯವಿದ್ದು, ಮದುವೆಗೂ ಮುನ್ನ ಮನಸ್ಸಿನಲ್ಲಿ ಪ್ರೀತಿಯಿತ್ತು. ಆದರೆ, ಆಕೆಗೆ 15ನೇ ವಯಸ್ಸಿನಲ್ಲೇ ಮದುವೆ ಮಾಡಿದ್ದರಿಂದಾಗಿ ಪ್ರೀತಿ ಮನಸ್ಸಿನಲ್ಲೇ ಕಮರಿಹೋಗಿತ್ತು.

ಇದನ್ನೂ ಓದಿ | ಮುರುಘಾಮಠ ಪ್ರಕರಣ| ಹಾಸ್ಟೆಲ್‌ ಬಿಟ್ಟು ಬೆಂಗಳೂರಿಗೆ ಬಂದಿದ್ದ ಬಾಲಕಿಯರು, ವಾರ್ಡನ್‌ ಬಗ್ಗೆ ಬೇಸರ, ಶ್ರೀಗಳ ಬಗ್ಗೆ ದೂರಿಲ್ಲ

ಆದರೆ, ಯುವಕ ಮದುವೆಗಾಗಿ ಯುವತಿ ಹುಡುಕಾಟದಲ್ಲಿರುವಾಗಲೇ ವಿವಾಹಿತೆ ಆಯಿಷಾ ಮೇಲೆ ಮನಸ್ಸಾಗಿತ್ತು. ಅವನ ಇಂಗಿತವನ್ನು ಆಕೆಯ ಬಳಿಯೂ ಹೇಳಿಕೊಂಡಿದ್ದ. ಕಿರಿವಯಸ್ಸಿನಲ್ಲೇ ಮದುವೆಯಾಗಿದ್ದ ಆಯಿಷಾಳಿಗೆ ಎರಡು ಮಕ್ಕಳು, ಗಂಡ ಇದ್ದಾನೆ. ಆದರೂ ಯುವಕನ ಮೇಲೆ ಆಕೆಗೂ ಪ್ರೀತಿಯಾಯಿತು. ಕೂಡಲೇ ಯುವಕ ಬೀರ್ ಮೊಹಿದ್ದೀನ್ ಕಳೆದ ಫೆಬ್ರವರಿಯಲ್ಲಿ ವಿವಾಹಿತೆಯನ್ನು ಮನೆಬಿಟ್ಟು ಓಡಿಸಿಕೊಂಡು ಬಂದಿದ್ದಾನೆ.

೬ ತಿಂಗಳಿನಿಂದ ಕಾರವಾರದಲ್ಲೇ ವಾಸ

ಬೈಕ್ ಮೇಲೆ ಈ ಜೋಡಿ ಬೆಂಗಳೂರು, ಮಂಗಳೂರು ಮಾರ್ಗವಾಗಿ ಫೆಬ್ರವರಿ 21ರಂದು ಕಾರವಾರಕ್ಕೆ ಬಂದಿದ್ದು, ಇಲ್ಲಿಯೇ ಬಾಡಿಗೆ ಮನೆ ಪಡೆದು ಉಳಿದುಕೊಂಡಿದ್ದರು. ಯುವಕ ಕಟ್ಟಡ ನಿರ್ಮಾಣ ಕೆಲಸ ಮಾಡುವ ಮೂಲಕ ಯುವತಿಯೊಂದಿಗೆ 6 ತಿಂಗಳಿನಿಂದ ಕಾರವಾರದಲ್ಲೇ ಜೀವನ ನಡೆಸುತ್ತಿದ್ದ. ಆದರೆ ವಿವಾಹಿತೆ ಕಣ್ಮರೆ ಹಿನ್ನೆಲೆಯಲ್ಲಿ ಪತಿ ಮನೆ ಕಡೆಯವರು ದೂರು ನೀಡಿದ್ದರು. ಹುಡುಕಾಟ ಆರಂಭಿಸಿದ ತಮಿಳುನಾಡು ಪೊಲೀಸರು ಕಾರವಾರದಲ್ಲಿ ಜೋಡಿಯನ್ನು ಪತ್ತೆ ಮಾಡಿ ವಾಪಸ್‌ ಕರೆದೊಯ್ದಿದ್ದಾರೆ.

ಇದನ್ನೂ ಓದಿ | Murder Case | ಸಾಲ ವಾಪಸ್‌ ಕೊಡದ ಜೀವದ ಗೆಳೆಯ; ಜೀವ ತೆಗೆದ ಸ್ನೇಹಿತ ಅರೆಸ್ಟ್‌

ವಿವಾಹಿತೆ ಆಯಿಷಾಗೆ ಇಬ್ಬರು ಮಕ್ಕಳಿದ್ದಾರೆ. ತಮಿಳುನಾಡು ಪೊಲೀಸರು ಮಹಿಳೆಯ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿ, ಕಳೆದ ಎರಡು ತಿಂಗಳ ಹಿಂದೆ ಆಕೆ ಕಾರವಾರದಲ್ಲಿ ಇರುವುದನ್ನು ಪತ್ತೆ ಮಾಡಿದ್ದರು. ಈ ವೇಳೆ ಕಾರವಾರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರಾದರೂ ಅವರು ಇದ್ದ ನಿಖರವಾದ ಜಾಗ ತಿಳಿಯದೇ ವಾಪಸಾಗಿದ್ದರು.

ಬಳಿಕ ಕಾರವಾರದ ನಗರ ಠಾಣೆ ಪೊಲೀಸರ ಸಹಕಾರದೊಂದಿಗೆ ವಿವಾಹಿತೆ ಪತ್ತೆಗೆ ಮುಂದಾಗಲಾಗಿದೆ. ಈ ಬಾರಿ ವಿವಾಹಿತೆ ಲೊಕೇಶನ್ ಆಧರಿಸಿ ನಗರದ ಸೋನಾರವಾಡದಲ್ಲಿ ವಾಸವಾಗಿರುವುನ್ನು ಕಾರವಾರ ಪೊಲೀಸರು ಪತ್ತೆ ಮಾಡಿದ್ದರು. ಅದರಂತೆ ಕಾರವಾರಕ್ಕೆ ಆಗಮಿಸಿದ ತಮಿಳುನಾಡು ಪೊಲೀಸರು ಭಾಷೆಯ ಸಮಸ್ಯೆಯಾಗಿದ್ದರಿಂದ ಆಟೋ ಚಾಲಕನ ಸಹಕಾರದಿಂದ ವಿವಾಹಿತೆ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಾಪಸ್ ಕರೆದೊಯ್ದಿದ್ದಾರೆ.

ಒಟ್ಟಾರೆ ಮದುವೆಗಾಗಿ ಹುಡುಗಿ ಹುಡುಕುತ್ತಿದ್ದ ಯುವಕ ವಿವಾಹಿತೆಯನ್ನು ಲವ್ ಮಾಡಿ ರಾಜ್ಯ ಬಿಟ್ಟು ರಾಜ್ಯಕ್ಕೆ ಓಡಿಸಿಕೊಂಡು ಬಂದರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇಷ್ಟಾದರೂ ವಿವಾಹಿತೆಯೊಂದಿಗೇ ಜೀವನ ನಡೆಸುವದಾಗಿ ಯುವಕ ಪಟ್ಟುಹಿಡಿದಿದ್ದು, ವಿವಾಹಿತೆ ನಿರ್ಧಾರದ ಮೇಲೆ ಇದೀಗ ಜೋಡಿಯ ಭವಿಷ್ಯ ನಿಂತಿದೆ.

ಇದನ್ನೂ ಓದಿ | PSI Scam | ಮಹಾರಾಷ್ಟ್ರದಲ್ಲಿ ಅಡಗಿ ಕುಳಿತಿದ್ದ ಫಸ್ಟ್‌ ರ‍್ಯಾಂಕ್‌ ರಚನಾ ಸೆರೆ!

Exit mobile version