ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ (Praveen Nettaru) ಆರೋಪಿಗಳಿಗೆ ಕೇರಳದಲ್ಲಿ ಆಶ್ರಯ ಕೊಟ್ಟ ಆರೋಪದ ಮೇಲೆ ಬೆಳ್ಳಾರೆ ಮೂಲದ ನಿವಾಸಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈತ ಹಂತಕರ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಬಂಧಿತ ವ್ಯಕ್ತಿ 20 ವರ್ಷಗಳ ಹಿಂದೆ ಬೆಳ್ಳಾರೆಯಿಂದ ಕೇರಳದ ಕಾಸರಗೋಡು ಜಿಲ್ಲೆಯ ಸೋಂಕಾಲ್‌ನಲ್ಲಿ ನೆಲೆಸಿದ್ದ. ಈತ ಕೆಲಸ ಮಾಡುತ್ತಿದ್ದ ತೋಟದ ಯಜಮಾನನ ಫೋನ್ ಬಳಸಿ ಹಂತಕರ ಜತೆ ಮಾತುಕತೆ ನಡೆಸುತ್ತಿದ್ದ, ನಂತರ ಫೋನ್ ನಂಬರ್ ಸಿಗದ ಹಾಗೆ ಕಾಲ್‌ಲಿಸ್ಟ್‌ನಲ್ಲಿ ನಂಬರ್ ಡಿಲೀಟ್ ಮಾಡಿ ಮಾಲೀಕರಿಗೆ ಕೊಡುತ್ತಿದ್ದ. ಅಲ್ಲದೆ, ಸೋಂಕಾಲ್‌ನಲ್ಲಿ ಪ್ರಕರಣದ ಆರೋಪಿಗಳಿಗೆ ಆಶ್ರಯ ಕೂಡಾ ಕೊಟ್ಟಿದ್ದ ಎನ್ನಲಾಗಿದೆ. ಇದರ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯರೇ ಪ್ರವೀಣ್ ಹತ್ಯೆಗೈದು ಕೇರಳಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬೆಳ್ಳಾರೆ ಪೊಲೀಸರ ತನಿಖೆ ವೇಳೆ ಮತ್ತಷ್ಟು ಸ್ಪೋಟಕ ಅಂಶ ಬಯಲಾಗುವ ಸಾಧ್ಯತೆ ಇದೆ. ಆರೋಪಿಗಳು ಹತ್ಯೆ ನಡೆಸಿ ಸೋಂಕಾಲ್ ವ್ಯಕ್ತಿಯ ಮನೆಯಲ್ಲಿ ಆಶ್ರಯ ಪಡೆದಿದ್ದ ಹಂತಕರು, ಕೇರಳದಲ್ಲಿ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ ವಾಹನದಲ್ಲಿ ಪರಾರಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ.
ಇದನ್ನೂ ಓದಿ | Praveen Nettaru | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ