ಬೆಳಗಾವಿ: ತೀರ್ಥ ಸೇವನೆ ಮಾಡುವಾಗ ಗೋಡಂಬಿ, ಖರ್ಜೂರ, ಬಾಳೆ ಹಣ್ಣು ನುಂಗುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭೂಪ, ಹಿತ್ತಾಳೆಯ ಶ್ರೀಕೃಷ್ಣನ ಮೂರ್ತಿಯನ್ನೇ ನುಂಗಿದ್ದಾರೆ.
ಬೆಳಗಾವಿಯ 45 ವರ್ಷದ ವ್ಯಕ್ತಿ ಪ್ರತಿನಿತ್ಯ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುತ್ತಿದ್ದರು. ಪ್ರತಿನಿತ್ಯ ಪೂಜೆ ನಂತರ ತೀರ್ಥ, ಪ್ರಸಾದ ಸೇವನೆಯೂ ನಡೆಯುತ್ತಿತ್ತು.
ಆದರೆ ಬುಧವಾರ ಬೆಳಗ್ಗೆ ಪೂಜೆ ನೆರವೇರಿಸಿದ ವ್ಯಕ್ತಿ ಅಭಿಷೇಕವನ್ನೂ ಮಾಡಿದ್ದಾರೆ. ಅಭಿಷೇಕದ ನಂತರ ತೀರ್ಥವನ್ನು ಬೇರ್ಪಡಿಸಿದ್ದಾರೆ. ತೀರ್ಥದೊಳಗೆ ಶ್ರೀಕೃಷ್ಣನ ಹಿತ್ತಾಳೆಯ ಮೂರ್ತಿಯೂ ಬಂದಿದೆ. ಇದನ್ನು ಗಮನಿಸದ ವ್ಯಕ್ತಿ ತೀರ್ಥದ ಜತೆಗೆ ಮೂರ್ತಿಯನ್ನೇ ನುಂಗಿದ್ದಾರೆ. ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಾಗಿ ನೋವು ಹೆಚ್ಚಾಗಿದೆ. ಆದರೆ ಏನು ಸಿಕ್ಕಿಕೊಂಡಿದೆ ಎಂದು ತಿಳಿಯದೆ, ನೋವು ತಡೆಯಲಾಗದೆ ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಾರೆ.
ಅಲ್ಲಿ ವೈದ್ಯರು ಎಕ್ಸ್‌ರೇ ಮಾಡಿದಾಗ, ಗಂಟಲಲ್ಲಿ ಕೃಷ್ಣನ ಹಿತ್ತಾಳೆ ಮೂರ್ತಿ ಇರುವುದು ಸ್ಪಷ್ಟವಾಗಿ ಪತ್ತೆಯಾಯಿತು. ಆದರೆ ಶಸ್ತ್ರಚಿಕಿತ್ಸೆ ನಡೆಸಿ ಇದನ್ನು ಹೊರತೆಗೆಯಬೇಕಿದ್ದರಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಕಳಿಸಿದ್ದಾರೆ.
ಕಂಠದಲ್ಲಿ ಸಿಲುಕಿದ ಲೋಹದ ಶ್ರೀಕೃಷ್ಣನ ಮೂರ್ತಿಯನ್ನು ಶ್ರಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಗುರುವಾರ ಹೊರತೆಗೆದರು. ಆಸ್ಪತ್ರೆಯ ಇಎನ್‌ಟಿ ವಿಭಾಗದ ಡಾ. ಪ್ರೀತಿ ಹಜಾರೆ, ಡಾ. ವಿನಿತಾ ಮೆಡಗುಡ್ಡಮಠ ನೇತೃತ್ವದಲ್ಲಿ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದೆ. ವ್ಯಕ್ತಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ| ಮಗಳ ಚಿಕಿತ್ಸೆಗೆ ನೆರವು ಕೋರಿದ ಮಹಿಳೆ, ಎರಡೇ ಗಂಟೆಯಲ್ಲಿ ವ್ಯವಸ್ಥೆ ಮಾಡಿದ ಸಿಎಂ