ಸಹನಾ ಹೆಗಡೆ, ಹವ್ಯಾಸಿ ಪತ್ರಕರ್ತೆ
ಗಿಡ ಮರಗಳ ಸಾಮಿಪ್ಯ. ಆ ಗಿಡಗಳು ಕೊಡುವ ಸುಂದರವಾದ ಹೂವು ಹಣ್ಣುಗಳು ಎಲ್ಲವು ನಮಗೆ ಸಹಜ ಆನಂದವನ್ನು ನೀಡುತ್ತವೆ. ಯಾವಾಗ ಮನಸ್ಸು ಪ್ರಫುಲ್ಲತೆಯಿಂದ ಕೂಡಿರುತ್ತದೆಯೋ ಆಗ ಮನಸ್ಸಿನಲ್ಲಿ ಸಕಾರಾತ್ಮಕ, ಕ್ರಿಯಾತ್ಮಕ ಆಲೋಚನೆಗಳು ಹೆಚ್ಚುತ್ತವೆ. ಸದಾ ಸಕಾರಾತ್ಮಕತೆಯಿಂದ ನಮ್ಮಲ್ಲಿರುವ ಆತ್ಮ ವಿಶ್ವಾಸ ಇಮ್ಮಡಿಯಾಗುತ್ತದೆ. ಆದ್ದರಿಂದ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸದಾ ಹಸಿರಾಗಿಸಲು ಪ್ರಯತ್ನಿಸಬೇಕಾಗಿದೆ.
ನಮ್ಮ ಚಿಕ್ಕ ಚಿಕ್ಕ ಪ್ರಯತ್ನಗಳಿಂದ ಸಹ ಸುತ್ತಲಿನ ಪರಿಸರವನ್ನು ಸದಾ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಸಾಧ್ಯ. ಅದಕ್ಕಾಗಿ ನಮ್ಮ ಮನಸ್ಸನ್ನು ಪ್ರೇರೇಪಿಸಿಕೊಳ್ಳಬೇಕಾಗಿದೆ. ಗಿಡ ನೆಡ ಬೇಕೆಂಬ ಬೀಜವನ್ನು ನಮ್ಮ ಮನಸ್ಸಿನಲ್ಲಿ ಮೊದಲು ಬಿತ್ತಬೇಕು . ಹನಿ ಹನಿ ಕೂಡಿ ಹಳ್ಳ ತೆನೆ ತೆನೆ ಸೇರಿ ರಾಶಿ ಅನ್ನುವ ಮಾತಿನಂತೆ ದೇಶದ ಪ್ರತಿಯೊಬ್ಬರೂ ಒಂದು ಗಿಡ ನೆಡಬೇಕು ಎಂಬ ದೃಢ ಸಂಕಲ್ಪ ಮಾಡಿ ಅದನ್ನು ಅನುಷ್ಠಾನಕ್ಕೆ ತಂದರೆ ಸಾಕು ಎಷ್ಟೊಂದು ಪರಿಣಾಮಕಾರಿ ಫಲಿತಾಂಶ ಸಿಗಲಿದೆ.
ಇಡೀ ದೇಶದಾದ್ಯಂತ ಅನೇಕಾನೇಕ ಪರಿಸರ ಪ್ರೇಮಿಗಳು ಗಿಡಮರಗಳನ್ನು ನೆಡುವುದು, ಕಾಡುಗಳ ಸಂರಕ್ಷಣೆ ಸಂವರ್ಧನೆಗೆ ನಿರಂತರವಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಈ ಪರಿಸರ ಸಂರಕ್ಷಣೆ ಕೇವಲ ಅವರಿಗೆ ಮಾತ್ರ ಸೀಮಿತವಾಗಬೇಕೇ? ಉಸಿರಾಟಕ್ಕೆ ಆಮ್ಲಜನಕವನ್ನು ಅವರು ಮಾತ್ರ ಸೇವಿಸುತ್ತಿದ್ದಾರೆಯೇ? ಇಲ್ಲ ಅನ್ನುವುದು ನಮಗೆ ತಿಳಿದಿದೆಯಾದ್ದರಿಂದ ನಾವಿಂದು ಅಂತರಾವಲೋಕನ ಮಾಡಿಕೊಳ್ಳಬೇಕಾಗಿದೆ.
ಗಿಡ ಮರಗಳು ಕೊಡುವ ಆಮ್ಲಜನಕ ಸಾರ್ವತ್ರಿಕವಾಗಿ ಬಳಸಲ್ಪಡುತ್ತದೆಯೆಂದಾದರೆ, ಗಿಡಗಳನ್ನು ನೆಟ್ಟು ಪೋಷಿಸುವುದು ಸಹ ಸಾರ್ವತ್ರಿಕವಾಗಿಯೇ ಆಗಬೇಕಲ್ಲವೇ? ಇದೇ ಬರುವ ಜನವರಿ 12ರಿಂದ 26 ರವರೆಗೆ ಪರ್ಯಾವರಣ ಸಂರಕ್ಷಣ ಗತಿವಿಧಿ ದೇಶದಾದ್ಯಂತ ಹಮ್ಮಿಕೊಂಡಿರುವ ಬೀಜಾರೋಪಣದಿಂದ ವೃಕ್ಷಾರೋಪಣ, ದೇಶದ ಹೆಸರಿನಲ್ಲಿ ಒಂದು ಗಿಡ ಮಹಾ ಅಭಿಯಾನದಲ್ಲಿ ಪ್ರತಿಯೊಬ್ಬರೂ ಸಹಭಾಗಿಗಳಾಗಬೇಕಿದೆ.
ಗಿಡ ನೆಡಬೇಕೆಂಬ ಬೀಜದ ಬಿತ್ತನೆ ಮನಸ್ಸಿನಲ್ಲಿ ಮೂಡಬೇಕಿದೆ
ಭಾರತೀಯರಾದ ನಮಗೆ ಪ್ರಕೃತಿ ಆರಾಧನೆ ಅಥವಾ ವೃಕ್ಷ ಪೂಜೆಗಳು ಯಾವುದೂ ಹೊಸದಾದ ಪರಿಕಲ್ಪನೆಯಲ್ಲ. ಸನಾತನ ಸಂಸ್ಕೃತಿಯಲ್ಲಿ ವೃಕ್ಷಗಳ ಮಹತ್ವವನ್ನು ಸವಿಸ್ತಾರವಾಗಿ ಹೇಳಲಾಗಿದೆ. ವೇದಗಳಲ್ಲಿ, ಉಪನಿಷತ್‌ಗಳಲ್ಲಿ, ನೀತಿ ಸಂಹಿತೆಗಳಲ್ಲಿ ವೃಕ್ಷದ ಮಹತ್ವದ ಉಲ್ಲೇಖಗಳು ಯಥೇಚ್ಛವಾಗಿ ಇದೆ. ಆದರೆ ನಾವಿಂದು ಇವುಗಳನ್ನು ಮರೆತುಬಿಟ್ಟಿದ್ದೇವೆ.
ನಮ್ಮ ಸನಾತನ ಧರ್ಮದಲ್ಲಿ ಹೇಳಿದ ಆಶ್ರಮ ವ್ಯವಸ್ಥೆಯಲ್ಲಿ ಬ್ರಹ್ಮಚರ್ಯಾಶ್ರಮ, ವಾನಪ್ರಸ್ಥ, ಸನ್ಯಾಸಾಶ್ರಮ ಈ ಎಲ್ಲವೂ ಸಹ ಕಾಡಿನಲ್ಲಿಯೇ ಆಗಿತ್ತು. ಪ್ರಕೃತಿ ಮಾತೆಯ ಮಡಿಲಲ್ಲಿ ಗಿಡಮರಗಳ ಜೊತೆಗೆ ಬದುಕುವುದು ಸಾಮಾನ್ಯ ಅಂಶವಾಗಿತ್ತು. ಪ್ರಕೃತಿ ಆರಾಧನೆಯ ಮೂಲಕ ಪರಿಸರ ಸಂರಕ್ಷಣೆ ಸಹಜವಾಗಿಯೇ ನಡೆಯುತ್ತಿತ್ತು. ದೇವರ ಕಾಡು, ನಾಗ ಬನ, ಚವಡಿ ಬನ ಎನ್ನುವ ಪರಿಕಲ್ಪನೆಯೊಂದಿಗೆ ಕಾಡುಗಳ ಸಂವರ್ಧನೆ ಮತ್ತು ಸಂರಕ್ಷಣೆ ನಡೆದೆ ಇತ್ತು. ಇಂದಿಗೂ 35,000,00 ಹೆಕ್ಟೇರ್ ದೇವರಕಾಡುಗಳು, 55,000 ಚಿಕ್ಕ ಕಾಡುಗಳು ಸುರಕ್ಷಿತವಾಗಿದೆ ಎನ್ನುವುದು ಪ್ರಕೃತಿಯ ಜೊತೆ ಸಹಜವಾದ ನಂಟು ಇದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.
ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಬೇಸಿಗೆ ಕಾಲದಲ್ಲಿ ಮನೆಯಲ್ಲಿ ಬಳಸಿದ ಬೀಜಗಳನ್ನು ಸಂಗ್ರಹಿಸಿ ಮಳೆಗಾಲ ಆರಂಭವಾಗುತ್ತಿದ್ದಂತೆ ತೋಟದ ಅಂಚಿನಲ್ಲಿ, ಬೆಟ್ಟ, ಗೋಮಾಳಗಳಲ್ಲಿ ಗಿಡಗಳನ್ನು ನೆಡುವ ಪದ್ಧತಿ ತಲೆತಲಾಂತರದಿಂದ ಸಂಪ್ರದಾಯದ ರೀತಿಯಲ್ಲಿ ನಡೆದುಕೊಂಡು ಬಂದಿದೆ. ಸಾಮಾನ್ಯ ವಾಗಿ ಪ್ರತಿ ಮನೆಯಲ್ಲೂ ಮಹಿಳೆಯರಾದಿಯಾಗಿ ಕನಿಷ್ಠ 10 ಗಿಡಗಳನ್ನಾದರೂ ವರ್ಷವೊಂದಕ್ಕೆ ನೆಡಲಾಗುತ್ತದೆ. ಇಂತಹ ವಿಷಯ ಪ್ರಸ್ತುತದಲ್ಲಿ ಎಲ್ಲರಿಗೂ ಪ್ರೇರಣಾದಾಯಕವಾಗಬೇಕಿದೆ.
ಇಂದು ಆಧುನಿಕತೆಯ ಹೆಸರಿನಲ್ಲಿ ಬದಲಾಗುತ್ತಿರುವ ಜೀವನಶೈಲಿ ನಮ್ಮಲ್ಲಿರುವ ಸಹಜ ಪ್ರಕೃತಿ ಪ್ರೇಮವನ್ನು ಮರೆಸಿ ಹಾಕುತ್ತಿದೆಯೋ ಅನಿಸುತ್ತಿದೆ. ಪರಿಣಾಮವಾಗಿ ನಮ್ಮನ್ನು ಸದಾ ಪೋಷಿಸುತ್ತಾ ಇರುವ ಪ್ರಕೃತಿಯ ಚಕ್ರದಲ್ಲಿ ಇಂದು ವ್ಯತ್ಯಾಸವಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳ, ವಾತಾವರಣದ ವೈಪರಿತ್ಯ ಸಮಸ್ಥ ವಿಶ್ವವನ್ನೇ ಭಯಗ್ರಸ್ಥರನ್ನಾಗಿಸುತ್ತಿದೆ.
ಇಂಗಾಲದ ಹೆಜ್ಜೆ ಗುರತು (ಕಾರ್ಬರ್ನ್ ಫುಟ್ ಪ್ರಿಂಟ್) ಕಡಿಮೆ ಮಾಡಲು ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಕೆಲಸ ನಮ್ಮಿಂದ ಆಗಲೇ ಬೇಕಿದೆ. ಆದ್ದರಿಂದ ಪ್ರತಿ ಮನೆಯಲ್ಲೂ ಕನಿಷ್ಟ 10 ಬೀಜಗಳ ಸಸ್ಯ ಕಾಶಿ (ನರ್ಸರಿ) ಪ್ರಾರಂಭಿಸಬೇಕಾಗಿದೆ. ದೇಶಕ್ಕಾಗಿ, ದೇಶದ ಸಮಗ್ರ ಅಭಿವೃದ್ಧಿಗಾಗಿ ಸೈನಿಕರು, ಸ್ವಯಂ ಸೇವಾ ಸಂಸ್ಥೆಗಳು, ಸ್ವಯಂ ಸೇವಕರು ಹೀಗೆ ಹಲವಾರು ಸಹಸ್ರ ಜನ ಅನೇಕಾನೇಕ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೆ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಹೆಸರಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸೋಣ, ನಮ್ಮ ಮೂಲದಲ್ಲಿ ಇರುವ ಸಹಜ ಪ್ರಕೃತಿ ಪ್ರೇಮವನ್ನು ಜಾಗೃತಗೊಳಿಸಿಕೊಳ್ಳೋಣ.
ಇದನ್ನೂ ಓದಿ | ದೇಶದ ಹೆಸರಿನಲ್ಲಿ ಒಂದು ಗಿಡ | ಬೀಜಾರೋಪಣದಿಂದ ವೃಕ್ಷಾರೋಪಣ: ಜ.12ರಿಂದ 26ರವರೆಗೆ ಮಹಾಭಿಯಾನ, ವಿಸ್ತಾರ ಸಹಯೋಗ