ಕುಕನೂರು: ಧರ್ಮ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದು ಬಜರಂಗದಳದ ಹೆಸರನ್ನೂ ಉಲ್ಲೇಖಿಸಿ ಕಾಂಗ್ರೆಸ್ ಹೊರಡಿಸಿದ್ದ ಪ್ರಣಾಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. “ನಮ್ಮದು ಬಜರಂಗದಳ ಕಾರ್ಯಕರ್ತನ ಮನೆ. ಕಾಂಗ್ರೆಸ್ಸಿಗರು ಈ ಮನೆಯಲ್ಲಿ ಮತ ಕೇಳಲು ಬರಬೇಡಿ” ಎಂಬ ಬರಹದ ಪೋಸ್ಟರ್‌ಗಳು (Poster) ತಾಲೂಕಿನ ಬೆಣಕಲ್ ಗ್ರಾಮದ ಕೆಲವರ ಮನೆ ಮೇಲೆ ಕಾಣಿಸಿವೆ.
“ನಮ್ಮದು ಬಜರಂಗದಳದ ಕಾರ್ಯಕರ್ತನ ಮನೆ, ಈ ಮನೆಯಲ್ಲಿ ಕಾಂಗ್ರೆಸ್ಸಿಗೆ ಮತವಿಲ್ಲ, ನಮ್ಮ ಮನೆಗೆ ಕಾಂಗ್ರೆಸ್‌ನವರು ಮತ ಕೇಳಲು ಬರಬೇಡಿ” ಎಂಬ ಬರಹವಿರುವ ಪೋಸ್ಟರ್ ಅನ್ನು ಅಂಟಿಸಲಾಗಿದೆ.
ಇದನ್ನೂ ಓದಿ: IPL 2023: ಗೆಲುವಿನ ಬಳಿಕ ತಾಯಿಯನ್ನು ಅಪ್ಪಿಕೊಂಡ ಕೆಕೆಆರ್ ನಾಯಕ ನಿತೀಶ್ ರಾಣಾ
ಸ್ಥಳಕ್ಕೆ ಪಿಎಸ್ಐ, ಪಿಡಿಒ ಭೇಟಿ
ಈ ಪೋಸ್ಟರ್ ಅನ್ನು ಕಂಡ ಕೆಲವು ಗ್ರಾಮಸ್ಥರು ಪೊಲೀಸರಿಗೆ ಹಾಗೂ ತಹಸೀಲ್ದಾರ್‌ಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಕುಕನೂರ ಪೊಲೀಸ್ ಠಾಣೆ ಪಿಎಸ್ಐ ಢಾಕೇಶ್, ಗ್ರಾಮ ಪಂಚಾಯಿತಿ ಪಿಡಿಒ ಕೃಷ್ಣಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳು ವಿಚಾರಿಸಿದಾಗ ಆಯಾ ಮನೆಯವರು ತಾವು ಹೀಗೆ ಅಂಟಿಸಿಯೇ ಇಲ್ಲ. ಯಾರು ಯಾವಾಗ ಅಂಟಿಸಿದ್ದಾರೋ ನಮಗೆ ತಿಳಿದಿಲ್ಲ ಎಂದು ಹೇಳುತ್ತಿದ್ದಾರೆ.
ಬಳಿಕ ಅಂಟಿಸಲಾದ ಪೋಸ್ಟರ್‌ಗಳನ್ನು ಪಿಎಸ್ಐ ಢಾಕೇಶ್ ಯು. ಹಾಗೂ ಗ್ರಾಮ ಪಂಚಾಯಿತಿ ಪಿಡಿಒ ಕೃಷ್ಣಾರೆಡ್ಡಿ ಅವರು ತೆರೆವುಗೊಳಿಸಿದರು. ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಭಿತ್ತಿ ಪತ್ರಗಳನ್ನು ಗೋಡೆಗಳಿಗೆ ಅಂಟಿಸಲಾಗಿತ್ತು. ಆದರೆ, ಇದನ್ನು ಯಾರು ಮಾಡಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.