Site icon Vistara News

Siddheshwar Swamiji | ಮೌಲ್ಯಗಳನ್ನೇ ಜೀವನವನ್ನಾಗಿಸಿಕೊಂಡಿದ್ದ ಸಂತ; ಅವರ ಆದರ್ಶಗಳು ಅನಂತ

siddeshawara

ಬೆಂಗಳೂರು: ಜ್ಞಾನದ ದೀವಿಗೆಯಂತಿದ್ದ, ನಾಡಿಗೆ ಸದ್ವಿಚಾರಗಳನ್ನು ಬೋಧಿಸಿದ್ದ, ಮೌಲ್ಯಗಳನ್ನೇ ಜೀವನವನ್ನಾಗಿಸಿಕೊಂಡಿದ್ದ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಸೋಮವಾರ ರಾತ್ರಿ ದೇಹಾಂತ್ಯರಾಗಿದ್ದಾರೆ. ಅವರ ಜೀವನವೇ ಒಂದು ಸಂದೇಶವಾಗಿದೆ. ಆದರ್ಶಗಳನ್ನು ಬೋಧಿಸುವುದರ ಜತೆಗೆ ಪಾಲಿಸುವುದನ್ನೂ ತೋರಿಸಿಕೊಟ್ಟ ಸ್ವಾಮೀಜಿಗಳ ಜೀವನವು ಪುಟಕ್ಕಿಟ್ಟ ಚಿನ್ನದಂತಿದೆ. ಈ ಮಹಾನ್​ ಚೇತನದ ಜನುಮ, ಶಿಕ್ಷಣ ಹಾಗೂ ಸಾಧನೆಗಳ ವಿವರ ಇಲ್ಲಿದೆ.

ಮೂಲ ಹೆಸರು ಸಿದ್ದಗೊಂಡಪ್ಪ…
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ 1941 ಅಕ್ಟೋಬರ್ 24ರಂದು ಜನಿಸಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಬಾಲ್ಯದ ಹೆಸರು ಸಿದ್ದಗೊಂಡಪ್ಪ. ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿಯವರೆಗೆ ಅವರು ಓದಿದರು. ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹಳ್ಳಿ ಹಳ್ಳಿ ಸುತ್ತಿ ಪ್ರವಚನದ ಮೂಲಕ ಜನರಲ್ಲಿ ಜ್ಞಾನವನ್ನು ಬಿತ್ತಿ, ಶಿಕ್ಷಣದ ಕುರಿತು ಅರಿವು ಮೂಡಿಸುತ್ತಿದ್ದರು. ಹೀಗೆ ಅವರು ಸಂಚರಿಸುವಾಗ ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರಲ್ಲದೆ, ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾಗುವಂತಾಯಿತು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಸಿದ್ದಗೊಂಡಪ್ಪ ಕೂಡ ಒಬ್ಬರು.

14ನೇ ವಯಸ್ಸಿನಲ್ಲಿ ವಿದ್ಯೆ ಮುಂದುವರಿಸಲು ಬಂದ ಬಾಲಕ ಸಿದ್ದಗೊಂಡಪ್ಪ ಅವರ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ಮಲ್ಲಿಕಾರ್ಜುನ ಶ್ರೀಗಳು ತಾವು ಮಾಡುವ ಪುರಾಣ, ಪ್ರವಚನ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸಭೆ ಸಮಾರಂಭಗಳಿಗೆ ಸಿದ್ದಗೊಂಡಪ್ಪನನ್ನು ಕರೆದುಕೊಂಡು ಹೋಗಲಾರಂಭಿಸಿದರು. ಜತೆ ಜತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು

19ನೇ ವಯಸ್ಸಿನಲ್ಲೀಯೇ ಪುಸ್ತಕ!
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಕೊಲ್ಹಾಪುರ ವಿಶ್ವವಿದ್ಯಾನಿಲಯದಲ್ಲಿ ಮುಂದುವರಿಸಿದರು. ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು. ಎಂ.ಎ. ಪದವಿಯ ಅಭ್ಯಾಸದ ಸಮಯದಲ್ಲಿ ಶ್ರೀ ಸಿದ್ದೇಶ್ವರರರು ಕೊಲ್ಹಾಪುರದಲ್ಲಿ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು. ಆ ಅವಧಿಯಲ್ಲಿಯೇ ತಮ್ಮ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ “ಸಿದ್ಧಾಂತ ಶಿಖಾಮಣಿ” ಎಂಬ ಪುಸ್ತಕ ಬರೆದು ಗುರುಗಳ ಹೆಸರಿನಲ್ಲೇ ಪ್ರಕಟಿಸಿದ್ದರು. ಆಗ ಅವರಿಗೆ ಕೇವಲ 19 ವರ್ಷ!

ಸಿದ್ದಗೊಂಡಪ್ಪನ ಮಾತು ಎಂದರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ಧಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಪಡೆದು ವಿಜಯಪುರಕ್ಕೆ ಹಿಂದಿರುಗಿದ ನಂತರ ಸಿದ್ದಗೊಂಡಪ್ಪರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಞಾನದಿಗಂತವನ್ನು ವಿಸ್ತೃತಗೊಳಿಸಿದರು.

ಮುಂದೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಲಿಂಗೈಕ್ಯರಾದ ನಂತರ ಸಿದ್ದಗೊಂಡಪ್ಪ ಶ್ರೀ ಸಿದ್ದೇಶ್ವರ ಸ್ವಾಮೀಜಿಯಾಗಿ ಆಶ್ರಮವನ್ನು ಮುನ್ನಡೆಸಲಾರಂಭಿಸಿದರು. ಅವರಂತೆಯೇ ಪ್ರವಚನ ಮುಂದುವರಿಸಿದರು. ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಮುಂದುವರಿಸಿಕೊಂಡು ಬಂದಿದ್ದರು.

ಪಂಚ ಭಾಷೆಗಳಲ್ಲಿ ಜ್ಞಾನಾಮೃತ
ಜ್ಞಾನಯೋಗಾಶ್ರಮದಲ್ಲಿ ಜ್ಞಾನದಾಸೋಹ ಮಾಡುತ್ತಾ ಆಧ್ಯಾತ್ಮಿಕತೆಯನ್ನೇ ಉಸಿರಾಗಿಸಿಕೊಂಡ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸದಾ ಅಳವಾದ ಅಧ್ಯಯನ ಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ರೇಷ್ಠ ಅನುಭಾವಿಗಳೂ ಆಗಿದ್ದ ಅವರಿಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಪ್ರವಚನ ನೀಡುವುದು ಅಭ್ಯಾಸವಾಗಿತ್ತು. ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರಾಗಿದ್ದ ಅವರಿಗೆ ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನರಿಗೆ ಅರ್ಥವಾಗುವಂತೆ ವಿವರಿಸುವ ಕಲೆ ಸಿದ್ಧಸಿತ್ತು.
ಸರಳವಾದ ಪದಗಳ ಬಳಕೆಯೊಂದಿಗೆ ವಚನಗಳನ್ನು, ಸುಭಾಷಿತ, ನೀತಿಕತೆಗಳನ್ನು ಪ್ರಸ್ತುತ ಸಮಾಜದಲ್ಲಿನ ವಾಸ್ತವ ಸಂಗತಿಗಳಿಗೆ ಹೋಲಿಸಿ ಅವರು ನೀಡುತ್ತಿದ್ದ ಪ್ರವಚನ ಧಾರ್ಮಿಕ, ಆಧ್ಯಾತ್ಮಿಕ, ಸದ್ಗುಣ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ನಾಡು, ನುಡಿ, ನೆಲ, ಜಲ, ದೇಶ, ಭಾಷೆ ರಾಷ್ಟ್ರ ಪ್ರೇಮ, ಪರೋಪಕಾರ ಮತ್ತು ಮಾನವೀಯ ಮೌಲ್ಯಗಳ ಕುರಿತು ವಿಶೇಷವಾಗಿ ಉಪನ್ಯಾಸ ನೀಡುತ್ತಿದ್ದರು. ಇವರ ಮಾತುಗಳು ಅನೇಕರ ಜೀವನ ಬದಲಿಸಿವೆ, ಜೀವನೋತ್ಸಾಹ ತುಂಬಿವೆ.

ಅವರ ಪ್ರವಚನ ಕಾರ್ಯಕ್ರಮಗಳಿಗೆ ಸಾವಿರಾರು ಮಂದಿ ಸೇರುತ್ತಿದ್ದರು. ಯೂ ಟ್ಯೂಬ್ ನಲ್ಲಿ ಬಿತ್ತರಗೊಂಡಿರುವ ಅವರ ಪ್ರವಚನಗಳನ್ನು ಲಕ್ಷಾಂತರ ಜನ ವೀಕ್ಷಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿದ್ದ ಶ್ರೀಗಳು “ಭೂಮಿಯ ಮೇಲೆ ಮನುಷ್ಯ ಒಬ್ಬನೇ ಬುದ್ಧಿಜೀವಿ, ಸಂಘಜೀವಿಯಾಗಿದ್ದಾನೆ. ಆದ್ದರಿಂದ ಮನುಷ್ಯ ಸಮಾಜದಲ್ಲಿ ಹೃದಯವಂತಿಕೆಯಿಂದ ಬಾಳಿ ಬದುಕಬೇಕು. ಅಲ್ಲದೇ ಉಳಿದ ಇತರರಿಗೆ ಕೇಡನ್ನು ಬಯಸದೆ ಸಂತೋಷ ನೀಡುವ ಗುಣ ಬೆಳೆಸಿಕೊಳ್ಳಬೇಕುʼʼ ಎನ್ನುತ್ತಿದ್ದರು. ಅವರ ಪ್ರವಚನಗಳನ್ನು ಸಂಗ್ರಹಿಸಿ ಜ್ಞಾನಯೋಗಾಶ್ರಮವೇ ಹಲವಾರು ಕೃತಿಗಳನ್ನು ಹೊರತಂದಿದೆ.

ಪ್ರಶಸ್ತಿ, ಪುರಸ್ಕಾರಗಳನ್ನು ತಿರಸ್ಕರಿಸಿದ್ದ ಶ್ರೀಗಳು
ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರಶಸ್ತಿ ಪುರಸ್ಕಾರಗಳನ್ನು ನಿರಾಕರಿಸುತ್ತಿದ್ದರು. ಕೇಂದ್ರ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಯಿತು. ಆದರೆ ಇಂತಹ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಸಿದ್ದೇಶ್ವರ ಶ್ರೀಗಳು ವಿನಮ್ರವಾಗಿ ನಿರಾಕರಿಸಿದರು. ‘ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ನನ್ನ ಉದ್ದೇಶ. ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆಯು ನನಗಿಲ್ಲ. ಅಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ ಅವುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನನ್ನ ಧರ್ಮ” ಎಂದು ಹೇಳಿ ಗೌರವಪೂರ್ವಕ ಭಾವನೆಯಿಂದ ಅವುಗಳನ್ನು ನಿರಾಕರಿಸಿದ್ದರು.

ಹೀಗೆ ಸಿದ್ದೇಶ್ವರ ಶ್ರೀಗಳು ಜನಾನುರಾಗಿಯಾಗಿದ್ದರು.‌ ತಮ್ಮ ಮೌಲ್ಯಯುತ ಮತ್ತು ಸ್ಫೂರ್ತಿದಾಯಕ ಮಾತುಗಳಿಂದ ಕೋಟ್ಯಂತರ ಜನರ ಮನಸ್ಸಿಗೆ ಶಾಂತಿ, ನೆಮ್ಮದಿ ಕರುಣಿಸಿದ್ದರು.

ಇದನ್ನೂ ಓದಿ | Siddheshwar Swamiji | ಜ್ಞಾನದ ನಿಧಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

Exit mobile version