ತುಮಕೂರು: ಮಧುಗಿರಿ ತಾಲೂಕು ಮಿಡಿಗೇಶಿ ಗ್ರಾಮದಲ್ಲಿ ದೇವಸ್ಥಾನದ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಒಬ್ಬ ಮಹಿಳೆ ಸೇರಿ ಇಬ್ಬರನ್ನು ಬರ್ಬರವಾಗಿ (Double Murder) ಹತ್ಯೆಗೈಯಲಾಗಿದೆ. ಜೆಡಿಎಸ್ ಮುಖಂಡ ಹಾಗೂ ಆತನ ಆಪ್ತರು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಮಾಂಜನಯ್ಯ (೪೮) ಹಾಗೂ ಶಿಲ್ಪಾ (೩೮) ಮೃತರು. ಮಲ್ಲಿಕಾರ್ಜುನಯ್ಯ (೪೨) ಎಂಬುವರು ಗಾಯಗೊಂಡಿದ್ದಾರೆ.
ಮಿಡಿಗೇಶಿ ಗ್ರಾಮದ ಶ್ರೀಧರ್ ಗುಪ್ತಾ ಎಂಬಾತ ಗಣಪತಿ ದೇವಸ್ಥಾನದ ಜಾಗ ಕಬಳಿಸಲು ಯತ್ನಿಸಿದ್ದ. ಆದರೆ, ಈ ಜಾಗ ಉಳಿಸಿಕೊಳ್ಳಲು ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು ಗ್ರಾಮಸ್ಥರ ಪರವಾಗಿ ತೀರ್ಪು ನೀಡಿತ್ತು. ರಾಮಾಂಜನಯ್ಯ ಹಾಗೂ ಶಿಲ್ಪಾ ಅವರು ದೇವಾಲಯದ ಜಾಗ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದರು. ಹಾಗಾಗಿ, ಶ್ರೀಧರ್ ಗುಪ್ತಾ ಹಾಗೂ ಅವರ ಸಹಚರರು ಇಬ್ಬರನ್ನೂ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ರಸ್ತೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ನುಗ್ಗಿ ಶ್ರೀಧರ್ ಗುಪ್ತಾ ಹಾಗೂ ಸಹಚರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಗಾಯಾಳು ಮಲ್ಲಿಕಾರ್ಜುನಯ್ಯ ಅವರಿಗೆ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್‌ಪಿ ಭೇಟಿ
ಮಿಡಿಗೇಶಿ ಗ್ರಾಮಕ್ಕೆ ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಗುರುವಾರ ಸಂಜೆ ೭.೩೦ರ ಸುಮಾರಿಗೆ ಘಟನೆ ನಡೆದಿದೆ. ಇಬ್ಬರ ಹತ್ಯೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಸೈಟ್ ವಿಚಾರಕ್ಕೆ ಜಗಳ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಲೇಡಿ ಕಾನ್ಸ್‌ಟೆಬಲ್ ಕೊಲೆಗೆ ಟ್ವಿಸ್ಟ್; ಪೊಲೀಸಪ್ಪನ ಮೇಲೆ ಇಬ್ಬರ ಕಣ್ಣು, ಸುಪಾರಿ ಕೊಟ್ಟವಳು ರಾಣಿ ಕಾನ್ಸ್‌ಟೆಬಲ್