ಬೆಂಗಳೂರು: ನಗರದಲ್ಲಿ ಇಬ್ಬರು ಶಂಕಿತ ಉಗ್ರರ(Terror Accused) ಬಂಧನ ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬಂಧಿತರಲ್ಲಿ ಒಬ್ಬನಾದ ಅಖ್ತರ್ ಹುಸೇನ್ ಅಲಿಯಾಸ್ ಅಬ್ದುಲ್ ಹಸನ್ ಲಷ್ಕರ್ ಫೇಸ್‌ಬುಕ್ ಮೂಲಕವೇ ಅಲ್‌ಖೈದಾ ಉಗ್ರ ಸಂಘಟನೆ ಸಂಪರ್ಕ ಬೆಳೆಸಿ, ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಭಯೋತ್ಪದನಾ ಚಟುವಟಿಕೆಗಳಿಗೆ ಪ್ರೇರೇಪಣೆ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿದ್ದ ಶಂಕಿತ ಉಗ್ರ ಅಖ್ತರ್ ಹುಸೇನ್ ಜೊಮೋಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ತಿಂಗಳಿಗೆ 20ರಿಂದ 25 ಸಾವಿರ ರೂಪಾಯಿ ಗಳಿಸುತ್ತಿದ್ದ. ವೇತನದಲ್ಲಿ ಪ್ರತಿ ತಿಂಗಳು ಅಸ್ಸಾಂನಲ್ಲಿದ್ದ ತಾಯಿಗೆ ಐದರಿಂದ ಹತ್ತು ಸಾವಿರ ರೂಪಾಯಿ ಕಳುಹಿಸುತ್ತಿದ್ದ. ಬೆಂಗಳೂರಿನ ತಿಲಕ್‌ನಗರದ ಉಸ್ಮನಾ ಘನಿ ಮಸಿದಿ ಬಳಿ ವಾಸವಾಗಿದ್ದ ಈತ ಹಗಲೆಲ್ಲಾ ಮನೆಯಲ್ಲಿ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿದ್ದ, ಸಂಜೆಯ ಬಳಿಕ ಹಣಕ್ಕಾಗಿ ಜೋಮೋಟೊ ಕೆಲಸ ಮಾಡುತ್ತಿದ್ದ. ಉಳಿದಂತೆ ಉಗ್ರ ಚಟುವಟಿಕೆಗಳ ಬಗ್ಗೆ ಮೊಬೈಲ್‌ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ಬಗ್ಗೆ ಸಿಸಿಬಿ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ | Terror Accused | ಕಾಶ್ಮೀರಕ್ಕೆ ತೆರಳಲು ಪ್ಲ್ಯಾನ್ ಮಾಡಿದ್ದ ಶಂಕಿತ ಉಗ್ರ ಅಖ್ತರ್!
ಶಂಕಿತ ಅಲ್‌ಖೈದಾ ಜತೆ ಸಂಪರ್ಕ ಹೊಂದಿದ್ದೇ ರೋಚಕ ಕತೆ. ಮೊದಲಿನಿಂದ ಧರ್ಮ ಮತ್ತು ಉಗ್ರ ಚಟುವಟಿಕೆ ಬಗ್ಗೆ ಆಸಕ್ತಿ ಹೊಂದಿದ್ದ ಈತ ಉಗ್ರ ಸಂಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದ. ಇಸ್ಲಾಂನ ಪ್ರಯೋದಕಾರಿ ಹೇಳಿಕೆಗಳು ಮತ್ತು ಬರಹಗಳಿಂದ ಪ್ರಚೋದಿತನಾಗಿ, ಫೇಸ್‌ಬುಕ್ ಮೆಸೆಂಜರ್ ಮೂಲಕ ಅಲ್‌ಖೈದಾಗೆ ಲಿಂಕ್ ಕಳುಹಿಸಿದ್ದ. ನಂತರ ಈತನಿಗೆ ಅಲ್‌ಖೈದಾ ರೆಕ್ರ್ಯೂಟರ್ ಈತನಿಗೆ ಫೇಸ್‌ಬುಕ್‌ನಲ್ಲಿ ಟೆಲಿಗ್ರಾಮ್ ಲಿಂಕ್ ಕಳುಹಿಸಿದ್ದ. ಆ ಟೆಲಿಗ್ರಾಮ್ ಗ್ರೂಪ್‌ನಲ್ಲಿ ಸುಮಾರು 25 ಜನರು ಇದ್ದರು. ಇದೇ ಮಾದರಿಯಲ್ಲಿ 7 ಜನರಿರುವ ಮತ್ತೊಂದು ಗ್ರೂಪ್ ಕೂಡ ಪತ್ತೆಯಾಗಿದೆ.
ಈ ಗ್ರೂಪ್‌ಗಳಲ್ಲಿ ಉಗ್ರಚಟುವಟಿಕೆಯ ಪಿಡಿಎಫ್ ಮತ್ತು ವಿಡಿಯೋಗಳು ಲಭ್ಯವಾಗಿವೆ. ಈ ಗ್ರೂಪ್‌ನಲ್ಲಿ ಒಬ್ಬನೇ ರೆಕ್ರ್ಯೂಟರ್ ಹಲವು ಐಡಿಗಳಿಂದ ಗ್ರೂಪ್ ಸದಸ್ಯರಿಗೆ ಅನುಮಾನ ಬಾರದಂತೆ ಚಾಟಿಂಗ್ ಮಾಡಿ, ಅವರ ಆಸಕ್ತಿಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ. ನೀನು ಹುಟ್ಟಿರುವುದೇ ಇಸ್ಲಾಂ ಧರ್ಮದ ಸ್ಥಾಪನೆಗೆಗಾಗಿ, ಧರ್ಮಕ್ಕಾಗಿ ಸದಾ ಸಾಯಲು ಸಿದ್ಧನಿರಬೇಕು ಎಂದು ರೆಕ್ರ್ಯೂಟರ್ ಬ್ರೈನ್ ವಾಶ್ ಮಾಡುತ್ತಿದ್ದ. ನೀವು ಅಲ್‌ಖೈದಾ ಸೇರಿದರೆ ಭಾರತದ ದೊಡ್ಡ ನಾಯಕನಾಗುತ್ತೀರಾ ಎಂದು ಹೇಳಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಇನ್ನೆರಡು ವಾರದಲ್ಲಿ ದೇಶ ಬಿಡಲು ಸಿದ್ಧನಾಗಿದ್ದ ಬಂಧಿತ ಅಖ್ತರ್ ಹುಸೇನ್, ಸಿಸಿಬಿ ಸ್ವಲ್ಪ ತಡ ಮಾಡಿದ್ದರೂ ದೇಶ ಬಿಟ್ಟು ಅಲ್‌ಖೈದಾ ಸೇರುತ್ತಿದ್ದ ಎನ್ನಲಾಗಿದೆ. ಮೊದಲು ಬೆಂಗಳೂರಿನಿಂದ ಕಾಶ್ಮೀರ ತಲುಪುವಂತೆ ಗ್ರೂಪ್‌ನಲ್ಲಿ ಸೂಚನೆ ಬಂದಿದ್ದು, ಕಾಶ್ಮೀರದ ಗಡಿಯಿಂದ ಪಾಕಿಸ್ಥಾನ, ಬಳಿಕ ಅಫ್ಘಾನಿಸ್ಥಾನ ಸೇರಿಕೊಳ್ಳಬೇಕೆಂದು ಸೂಚನೆ ಸಿಕ್ಕಿತ್ತು.
ಉಗ್ರ ಸಂಘಟನೆ ಸೇರಲು ಸಿದ್ಧತೆ
ಮತ್ತೊಬ್ಬ ಶಂಕಿತ ಅಬ್ದುಲ್ ಅಲಿ ಮಂಡಲ್ ಅಲಿಯಾಸ್ ಜುಬಾನನ್ನು ಸಿಸಿಬಿ ತಮಿಳುನಾಡಿನ ಸೇಲಂನಲ್ಲಿ ಬಂಧಿಸಿತ್ತು. ಈ ಮೊದಲು ಶಂಕಿತ ಅಖ್ತರ್ ಮೊಬೈಲ್ ಅನ್ನು ಸಿಸಿಬಿ ಪರಿಶೀಲನೆ ಮಾಡಿದಾಗ ಶಂಕಿತ ಜುಬಾ ಜತೆಯಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದ ಬಗ್ಗೆ ತಿಳಿದುಬಂದಿತ್ತು. ಈ ಬಗ್ಗೆ ಡಿಟೇಲ್ಸ್ ಪಡೆದ ಸಿಸಿಬಿ ಶಂಕಿತ ಜುಬಾನ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಬಂಧಿತ ಶಂಕಿತರಿಬ್ಬರು ವಿಚಾರಣೆ ವೇಳೆ ಒಬ್ಬರಿಗೊಬ್ಬರು ಪರಿಚಯವೇ ಇರಲಿಲ್ಲ, ಮುಖ ಕೂಡ ನೋಡಿಲ್ಲ ಎಂದಿದ್ದಾರೆ. ಕೇವಲ ರೆಕ್ರ್ಯೂಟರ್ ಸೂಚನೆಯಂತೆ ಮೊದಲು ಅಲ್ ಖೈದಾಗೆ ಸೇರಲು ಸಿದ್ಧವಾಗಿದ್ದರು. ಇನ್ನೇನು ಎರಡು ವಾರದಲ್ಲಿ ದೇಶ ಬಿಡುವ ಹಿನ್ನೆಲೆಯಲ್ಲಿ ಒಬ್ಬರಿಗೊಬ್ಬರು ಪರಿಚಯ ಮಾಡಿಸಲಾಗಿತ್ತು. ರೆಕ್ರ್ಯೂಟರ್ ಸೂಚನೆಯಂತೆ ಒಬ್ಬರಿಗೊಬ್ಬರು ಮಾತನಾಡಿಕೊಂಡು, ಎಲ್ಲಿಂದ ಹೊರಡಬೇಕು? ಹೇಗೆ ಹೊರಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದರು.
ಇದನ್ನೂ ಓದಿ | Terror Accused | ಕಾಶ್ಮೀರಕ್ಕೆ ತೆರಳಲು ಪ್ಲ್ಯಾನ್ ಮಾಡಿದ್ದ ಶಂಕಿತ ಉಗ್ರ ಅಖ್ತರ್!