Site icon Vistara News

ಕಬ್ಬನ್‌ ಪಾರ್ಕ್‌ಗೆ ಹೋಗುವವರೇ ಎಚ್ಚರ; ಪೊಲೀಸ್‌ ವೇಷದಲ್ಲಿದ್ದು ಹಣ ದೋಚ್ತಾರೆ ಖದೀಮರು !

Park

ಬೆಂಗಳೂರು: ನಗರದ ಅತ್ಯಂತ ಹಳೇ ಉದ್ಯಾನಗಳಲ್ಲಿ ಪ್ರಮುಖವಾದ ಕಬ್ಬನ್‌ ಪಾರ್ಕ್‌ (Cubbon Park) ಯಾರಿಗೆ ತಾನೇ ಇಷ್ಟವಾಗೋದಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು-ವೃದ್ಧರವರೆಗೆ ಎಲ್ಲ ವರ್ಗದವರೂ ಇಷ್ಟಪಡುವ ತಾಣ ಅದು. ಪ್ರೇಮಿಗಳ ಪಾಲಿಗಂತೂ ಫೆವರಿಟ್‌ ಸ್ಥಳ. ವಾಯುವಿಹಾರಕ್ಕೆಂದು ಅನೇಕರು ತೆರಳುತ್ತಾರೆ. ಹೊಸದಾಗಿ ಬೆಂಗಳೂರಿಗೆ ಬಂದವರು ಭೇಟಿ ಕೊಡುವ ಸ್ಥಳಗಳ ಪಟ್ಟಿಯಲ್ಲಿ ಕಬ್ಬನ್‌ ಪಾರ್ಕ್‌ನ್ನು ಕಡ್ಡಾಯವಾಗಿ ಸೇರಿಸಿಕೊಂಡಿರುತ್ತಾರೆ. ಒಟ್ಟಾರೆ ಅಲ್ಲಿ ಪ್ರತಿನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಆದರೆ ಅಲ್ಲಿಗೆ ಹೋಗುವವರು ಹುಷಾರಾಗಿ ಇರುವುದು ಒಳ್ಳೆಯದು. ಸ್ವಲ್ಪವೇ ಎಚ್ಚರ ತಪ್ಪಿದರೂ ಅಲ್ಲಿ ನಿಮ್ಮ ಸುಲಿಗೆಯಾಗುತ್ತದೆ. ಇರುವ ಅಷ್ಟೂ ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ನಿಮ್ಮಿಂದ ಹಣ ಪಡೆಯುವ ಖದೀಮರಿದ್ದಾರೆ !

ವಂಚಕರಿಂದ ಮೋಸಹೋದ ರಾಜೇಶ್‌ ಎಂಬುವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಈ ಬಗ್ಗೆ ಹುಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ರಾಜೇಶ್‌ ಸಂಜೆ ಹೊತ್ತಿಗೆ ವಾಯುವಿಹಾರಕ್ಕೆಂದು ಕಬ್ಬನ್‌ ಪಾರ್ಕ್‌ಗೆ ಹೋಗಿದ್ದರು. ಈ ವೇಳೆ ತನ್ನನ್ನು ತಾನು ಪೊಲೀಸ್‌ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ರಾಜೇಶ್‌ ಜತೆ ಮಾತಿಗೆ ಇಳಿದಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ರಾಜೇಶ್‌ಗೆ ಅಲ್ಲಿಂದ ಹೋಗಲು ಬಿಡದ ಆ ವ್ಯಕ್ತಿ, ʼಈ ಜಾಗದಲ್ಲಿ ಕೊಲೆ ನಡೆದಿದೆ. ಹಾಗಾಗಿ ತನಿಖೆ ನಡೆಸುತ್ತಿದ್ದೇವೆ, ನಿಮ್ಮನ್ನೂ ವಿಚಾರಣೆ ಮಾಡಬೇಕಾಗಿದೆʼ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ, ಇನ್ನೊಬ್ಬಾತನನ್ನೂ ಕರೆಸಿದ್ದಾನೆ. ರಾಜೇಶ್‌ ಬಳಿ ಐಡಿ ಪ್ರೂಫ್‌ ಕೊಡುವಂತೆ ಪೊಲೀಸ್‌ ವೇಷದಲ್ಲಿದ್ದ ವ್ಯಕ್ತಿ ಕೇಳಿದ್ದಾನೆ. ಅದಕ್ಕೆ ಉತ್ತರಿಸಿದ ರಾಜೇಶ್‌ ನನ್ನ ಐಡಿ ಬೈಕ್‌ನಲ್ಲೇ ಇದೆ. ಬೈಕ್‌ನ್ನು ಹಡ್ಸನ್‌ ಸರ್ಕಲ್‌ ಬಳಿ ಪಾರ್ಕ್‌ ಮಾಡಿದ್ದೇನೆ ಎನ್ನುತ್ತಾರೆ. ಅಷ್ಟಾದರೂ ಬಿಡದ ಆ ವ್ಯಕ್ತಿ ರಾಜೇಶ್‌ನನ್ನು ಕರೆದುಕೊಂಡು ಬೈಕ್‌ ಇದ್ದಲ್ಲಿಗೆ ಬಂದು, ಅದರಲ್ಲಿದ್ದ ರಾಜೇಶ್‌ ವೋಟರ್‌ ಐಡಿ, ಆಧಾರ್‌ ಕಾರ್ಡ್‌ಗಳ ಫೋಟೋ ತೆಗೆದುಕೊಳ್ಳುತ್ತಾನೆ. ನೀವೀಗ ಹಣ ಕೊಡದೆ ಹೋದರೆ ಸುಳ್ಳು ಕೇಸ್‌ ಹಾಕುವುದಾಗಿಯೂ ಹೇಳುತ್ತಾನೆ. ಮತ್ತೆ ಕಾವೇರಿ ಭವನದ ಬಳಿ ಕರೆದುಕೊಂಡು ಬಂದು ರಾಜೇಶ್‌ ಕೈಯಲ್ಲಿ ಅವರ ಅಕೌಂಟ್‌ನಲ್ಲಿದ್ದ 40 ಸಾವಿರ ರೂಪಾಯಿಯನ್ನು ಎಟಿಎಂನಿಂದ ಡ್ರಾ ಮಾಡಿಸಿ, ಅದನ್ನು ಕಿತ್ತುಕೊಂಡು ಹೋಗಿದ್ದಾನೆ.

ರಾಜೇಶ್‌ ಅಲ್ಲಿಂದ ಹಲಸೂರು ಗೇಟ್‌ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲಿಂದ ಪ್ರಕರಣವನ್ನು ಕಬ್ಬನ್‌ ಪಾರ್ಕ್‌ ಠಾಣೆಗೆ ವರ್ಗಾಯಿಸಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಹಾಸನ ಹೈವೇಯಲ್ಲಿ ಟಿಟಿಗೆ ಡಿಕ್ಕಿ ಹೊಡೆದ ಇನೋವಾ, ವಾಹನಗಳು ನಜ್ಜುಗುಜ್ಜು, ಇಬ್ಬರ ಸಾವು

Exit mobile version