ಆನೇಕಲ್: ಮೀನು ಹಿಡಿಯಲು ಹೋಗಿ ಯುವಕನೊಬ್ಬ ನೀರುಪಾಲಾಗಿರುವ (drowned) ಘಟನೆ ಮಹಲ್ ಚೌಡದೇನಹಳ್ಳಿ ಕೆರೆಯಲ್ಲಿ ನಡೆದಿದೆ. ಗೋಪಿ (19) ಮೃತ ದುರ್ದೈವಿ.
ಗೋಪಿ ತನ್ನ ಸ್ನೇಹಿತರ ಜತೆ ಮೀನು ಹಿಡಿಯಲು ಕೆರೆಗೆ ಇಳಿದಿದ್ದಾನೆ. ಈ ವೇಳೆ ಅಚಾನಕ್ ಆಗಿ ಕೆರೆಯಲ್ಲೆ ಸಿಲುಕಿದ್ದು ಹೊರಗೆ ಬರಲು ಆಗದೆ, ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ನಿರಂತರ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರದಲ್ಲಿ ಕುಡಿದು ಈಜಲು ಹೋದವ ನೀರುಪಾಲು
ಕೋಲಾರ ತಾಲೂಕಿನ ಮೈಲಾಂಡಹಳ್ಳಿ ಗ್ರಾಮದ ಬಳಿ ಕೃಷಿಹೊಂಡದಲ್ಲಿ ಕುಡಿದ ಮತ್ತಿನಲ್ಲಿ ಗೆಳೆಯರೊಂದಿಗೆ ಈಜಲು ಹೋಗಿದ್ದ ಯುವಕ ಮೃತಪಟ್ಟಿದ್ದು, ಸಂಬಂಧಿಕರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಮೂಲದ 34 ವರ್ಷದ ಚಾಲಕ ಶಿವಕುಮಾರ್ ಮೃತರು. ಕಳೆದ ರಾತ್ರಿ ತನ್ನೊಟ್ಟಿಗೆ ಮೂವರು ಗೆಳೆಯರ ಜತೆ ಮದ್ಯ ಸೇವನೆ ಮಾಡಿದ್ದ ಶಿವಕುಮಾರ್, ಬೆಳಗಿನ ಜಾವ ಮೈಲಾಂಡಹಳ್ಳಿ ಗ್ರಾಮದ ಹೊರವಲಯದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು, ನೀರು ಪಾಲಾಗಿದ್ದಾರೆ.
ಆದರೆ, ಶಿವಕುಮಾರ್ ಪೋಷಕರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ. ಜತೆಯಲ್ಲಿದ್ದವರೇ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವೇಮಗಲ್ ಪೊಲೀಸರು ಶಿವಕುಮಾರ್ ಮೃತದೇಹವನ್ನು ಕೃಷಿ ಹೊಂಡದಿಂದ ಹೊರ ತೆಗೆದು ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಮೃತ ಶಿವಕುಮಾರ್ ಜತೆಯಲ್ಲಿದ್ದ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶಿವಕುಮಾರ್ ಖಾಸಗಿ ಸುದ್ದಿವಾಹಿನಿಯೊಂದರ ಚಾಲಕ ಎಂದು ಹೇಳಲಾಗಿದೆ.
ಕಾಡಾನೆ ದಾಳಿಗೆ ಮಹಿಳೆ ಬಲಿ
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಹಕ್ಕಿ ಪಿಕ್ಕಿ ಕಾಲೋನಿ ಬಳಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಹಕ್ಕಿಪಿಕ್ಕಿ ಕಾಲೋನಿ ವಾಸಿ ನಾಗಮ್ಮ (48) ಮೃತ ದುರ್ದೈವಿ. ಜೈವಿಕ ಉದ್ಯಾನವನದಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಭೇಟಿಯಾಗಲು ಕಾಡಿನ ಕಾಲು ದಾರಿಯಲ್ಲಿ ನಡೆದು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಜೋಕಾಲಿ ಆಡುತ್ತಿದ್ದಾಗ ಉರುಳಿಗೆ ಸಿಲುಕಿ ಬಾಲಕಿ ಸಾವು
ಉಡುಪಿಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಕೆಮ್ಮಣ್ಣುವಿನಲ್ಲಿ ಜೋಕಾಲಿ ಆಡುತ್ತಿದ್ದ ಪುಟ್ಟ ಬಾಲಕಿಗೆ ಉರುಳು ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಲಕ್ಷ್ಮಿ ಪೂಜಾರಿ ಎಂಬುವವರ ಮಗಳು ಮಾನ್ವಿ (9) ಮೃತ ಬಾಲಕಿಯಾಗಿದ್ದಾಳೆ. ಚಿಕ್ಕಪ್ಪನ ಮನೆಗೆ ಆಟವಾಡಲೆಂದು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಮತ್ತೊಬ್ಬ ಬಾಲಕಿಯ ಜತೆಗೆ ಸೀರೆ ಕಟ್ಟಿ ಜೋಕಾಲಿ ಆಡಲಾಗುತ್ತಿತ್ತು. ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಮಾನ್ವಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
ತಕ್ಷಣವೇ ಆಕೆಯನ್ನು ರಕ್ಷಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾದರೂ ಪ್ರಯೋಜನವಾಗಿಲ್ಲ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ